ಬೆಂಗಳೂರು : ರಾಷ್ಟ್ರೀಯ ಏಕತಾ ದಿವಸ್-2026ರ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಮೋಟಾರ್ಸೈಕಲ್ ರ್ಯಾಲಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮಾದಕ ದ್ರವ್ಯಗಳ ವಿರುದ್ಧದ ಹೋರಾಟವು ಯಾವುದೇ ಒಂದು ರಾಜ್ಯ ಅಥವಾ ಸರ್ಕಾರಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಯುವಜನತೆಯ ಭವಿಷ್ಯವನ್ನು ರಕ್ಷಿಸಲು ಇಡೀ ದೇಶವೇ ಒಂದಾಗಿ ನಿಲ್ಲಬೇಕೆಂದು ಕರೆ ನೀಡಿದರು.
ಕರ್ನಾಟಕ, ಕಾಶ್ಮೀರ ಅಥವಾ ದೆಹಲಿ ಸೇರಿದಂತೆ ಎಲ್ಲರೂ ಭಿನ್ನತೆಗಳನ್ನು ಬದಿಗಿಟ್ಟು ಈ ಪಿಡುಗಿನ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು. ಮಾದಕ ದ್ರವ್ಯಗಳ ಸಮಸ್ಯೆ ಕೇವಲ ನಗರ ಪ್ರದೇಶಗಳಿಗೆ ಮಾತ್ರವಲ್ಲದೆ ಗ್ರಾಮೀಣ ಭಾಗಗಳಿಗೂ ವೇಗವಾಗಿ ಹರಡುತ್ತಿದ್ದು, ಇದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ವ್ಯಾಪಿಸಿರುವ ಗಂಭೀರ ಸಮಸ್ಯೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಮಾದಕ ದ್ರವ್ಯಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 37 ಸಾವಿರ ಜನರನ್ನು ಬಂಧಿಸಿ, 10 ಸಾವಿರ ಮಂದಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಅಂಕಿಅಂಶಗಳ ಸಮೇತ ಸರ್ಕಾರದ ಬದ್ಧತೆಯನ್ನು ವಿವರಿಸಿದರು. ಈ ಕಾರ್ಯಾಚರಣೆಯು ಸರ್ಕಾರದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ತಿಳಿಸಿದರು.
ಈ ರ್ಯಾಲಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಬೆಂಗಳೂರು ನಗರ ಪೊಲೀಸ್, ಸಿಆರ್ಪಿಎಫ್ (CRPF), ಎನ್ಸಿಬಿ (NCB) ಸೇರಿದಂತೆ ವಿವಿಧ ಪೊಲೀಸ್ ಘಟಕಗಳ ಸಿಬ್ಬಂದಿ ಹಾಗೂ ಬೈಕರ್ಸ್ ಯುನಿಟಿ ಕಾಲ್ಸ್ ಇಂಡಿಯಾದ ಸದಸ್ಯರು ಸೇರಿದಂತೆ ಒಟ್ಟು 200ಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಅಕ್ಟೋಬರ್ 15ರಂದು ಬೆಂಗಳೂರು ಮತ್ತು ಸುತ್ತಮುತ್ತ ಸಂಚರಿಸಿದ ಈ ರ್ಯಾಲಿ, ಅಕ್ಟೋಬರ್ 16ರಂದು ಗುಜರಾತ್ನ ಏಕತಾ ನಗರದತ್ತ ತನ್ನ ಮುಂದಿನ ಪ್ರಯಾಣವನ್ನು ಆರಂಭಿಸಿದೆ.