ಹಾಸನ : ಹಾಸನದ ಅಧಿದೇವತೆ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನಕ್ಕೆ ತೆರಳುವ ಲಕ್ಷಾಂತರ ಭಕ್ತರಿಗೆ ನೈಋತ್ಯ ರೈಲ್ವೆಯು ಸಿಹಿಸುದ್ದಿ ನೀಡಿದೆ. ಮುಂಬರುವ ಹಾಸನಾಂಬೆ ಮಹೋತ್ಸವದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಭಕ್ತರಿಗೆ ಸುಗಮ ಪ್ರಯಾಣದ ಅನುಕೂಲ ಕಲ್ಪಿಸಲು ಅಕ್ಟೋಬರ್ 29 ರಿಂದ ನವೆಂಬರ್ 11, 2026 ರವರೆಗೆ ಎರಡು ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.
ಪ್ರತಿ ವರ್ಷ ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಹಾಸನಕ್ಕೆ ಆಗಮಿಸುತ್ತಾರೆ. ಕಳೆದ ವರ್ಷ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್ಆರ್ ಬೆಂಗಳೂರು - ಹಾಸನ ವಿಶೇಷ ರೈಲು (06573/06574) ಹಾಗೂ ಅರಸೀಕೆರೆ - ಹಾಸನ ನಡುವೆ ಕಾಯ್ದಿರಿಸದ ಮೆಮು ರೈಲುಗಳ (06291/06292) ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ಮಾರ್ಗದ ರೈಲು ಒಟ್ಟು 21 ಬೋಗಿಗಳನ್ನು (ಎಸಿ, ಸ್ಲೀಪರ್ ಮತ್ತು ಜನರಲ್) ಹೊಂದಿದ್ದು, ಬೆಳಗ್ಗೆ 07:30ಕ್ಕೆ ಬೆಂಗಳೂರಿನಿಂದ ಹೊರಟು ಯಶವಂತಪುರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ ಹಾಗೂ ಚನ್ನರಾಯಪಟ್ಟಣದ ಮೂಲಕ ಬೆಳಿಗ್ಗೆ 11:30ಕ್ಕೆ ಹಾಸನ ತಲುಪಲಿದೆ. ವಾಪಸ್ ಮಧ್ಯಾಹ್ನ 03:15ಕ್ಕೆ ಹಾಸನದಿಂದ ಹೊರಟು ರಾತ್ರಿ 07:00ಕ್ಕೆ ಬೆಂಗಳೂರು ತಲುಪಲಿದೆ. ಇದರೊಂದಿಗೆ ಭಾನುವಾರ ಹೊರತುಪಡಿಸಿ ಅರಸೀಕೆರೆ - ಹಾಸನ ನಡುವೆ ಮೆಮು ರೈಲುಗಳು ಸಹ ಸಂಚರಿಸಲಿವೆ.
ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಕಾರಣ ಭಕ್ತರು ಸಾಧ್ಯವಾದಷ್ಟು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳುವುದು ಉತ್ತಮ. ರೈಲುಗಳ ನಿಖರ ಸಮಯ ಮತ್ತು ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ ಅಥವಾ ಐಆರ್ಸಿಟಿಸಿ (IRCTC) ಮೂಲಕ ಪರಿಶೀಲಿಸಿಕೊಳ್ಳಬಹುದು. ಈ ವಿಶೇಷ ರೈಲುಗಳ ಸಂಚಾರದಿಂದ ಭಕ್ತರ ಪ್ರಯಾಣ ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಲಿದೆ.
https://twitter.com/i/status/2110268597519937749