ಮಂಡ್ಯ: ಪ್ರಸಕ್ತ ಸಾಲಿನ 416ನೇ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟ, ನಿರ್ದೇಶಕ ಹಾಗೂ ನಿರ್ಮಾಪಕ 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ಅಕ್ಟೋಬರ್ 15 ರಂದು ನಡೆಯಲಿರುವ ಈ ವೈಭವೋಪೇತ ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಚಾಲನೆ ನೀಡುವಂತೆ ಮಂಡ್ಯ ಜಿಲ್ಲಾಡಳಿತವು ನಟ ರವಿಚಂದ್ರನ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿದೆ.
ಮಂಡ್ಯದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ನಟ ರವಿಚಂದ್ರನ್ ಅವರ ನಿವಾಸಕ್ಕೆ ತೆರಳಿ, ಅವರಿಗೆ ಹೂಗುಚ್ಚ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಪೂರ್ವಕವಾಗಿ ಆಹ್ವಾನ ಪತ್ರಿಕೆಯನ್ನು ಹಸ್ತಾಂತರಿಸಿದರು. ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿರುವ ರವಿಚಂದ್ರನ್ ಅವರು ಶ್ರೀರಂಗಪಟ್ಟಣ ದಸರಾವನ್ನು ಉದ್ಘಾಟಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಬಾರಿಯ ದಸರಾ ಮಹೋತ್ಸವವು ರವಿಚಂದ್ರನ್ ಅವರ ಉಪಸ್ಥಿತಿಯಿಂದಾಗಿ ಇನ್ನಷ್ಟು ಕಳೆಗಟ್ಟಲಿದ್ದು, ಮಂಡ್ಯ ಜಿಲ್ಲೆಯ ಜನರಲ್ಲಿ ವಿಶೇಷ ಕುತೂಹಲ ಹಾಗೂ ಸಂಭ್ರಮ ಮನೆಮಾಡಿದೆ.