ಹುಬ್ಬಳ್ಳಿ: ಗಣೇಶ ಚತುರ್ಥಿ ಉತ್ಸವದ ಅಂಗವಾಗಿ ನಡೆದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ನಿಯಮ ಮೀರಿ ಅತಿಯಾದ ಶಬ್ದದೊಂದಿಗೆ ಡಿಜೆ (DJ) ಬಳಕೆ ಮಾಡಿದ ಆರೋಪದ ಮೇರೆಗೆ ಆರು ಮಂದಿ ಡಿಜೆ ಮಾಲೀಕರು ಹಾಗೂ ಆಪರೇಟರ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ನಿಗದಿತ ಶಬ್ದ ಮಿತಿಗಿಂತ ಹೆಚ್ಚಾಗಿ ಧ್ವನಿವರ್ಧಕಗಳನ್ನು ಬಳಸಿದ್ದಕ್ಕಾಗಿ ಈ ಕಾನೂನು ಕ್ರಮ ಜರುಗಿಸಲಾಗಿದೆ.
ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ನಿಯಮಾವಳಿಗಳ ಉಲ್ಲಂಘನೆ ಆರೋಪದ ಅಡಿಯಲ್ಲಿ ಹುಬ್ಬಳ್ಳಿಯ ಎಪಿಎಂಸಿ ಪೊಲೀಸ್ ಠಾಣೆ, ಧಾರವಾಡದ ವಿದ್ಯಾಗಿರಿ ಮತ್ತು ಶಹರ ಪೊಲೀಸ್ ಠಾಣೆ ಸೇರಿದಂತೆ ಒಟ್ಟು ನಾಲ್ಕು ಪೊಲೀಸ್ ಠಾಣೆಗಳಲ್ಲಿ ಆರು ಪ್ರತ್ಯೇಕ ಎಫ್‌ಐಆರ್ (FIR) ಗಳನ್ನು ದಾಖಲಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಮತ್ತು ಶಾಂತಿಗೆ ಭಂಗ ತರದಂತೆ ನಿಗದಿತ ಶಬ್ದ ಮಿತಿಯೊಳಗೆ ಧ್ವನಿವರ್ಧಕ ಬಳಸಲು ಸೂಚಿಸಲಾಗಿದ್ದರೂ, ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ಈ ಖಡಕ್ ಕ್ರಮ ಕೈಗೊಂಡಿದ್ದಾರೆ.