ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕೃತ ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕಗೊಂಡಿದ್ದು, ಹಾಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಸ್ಥಾನವನ್ನು ತುಂಬಲಿದ್ದಾರೆ.
ರಾಷ್ಟ್ರಪತಿ ಭವನ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಹಲವು ರಾಜ್ಯಗಳ ರಾಜ್ಯಪಾಲರನ್ನು ವರ್ಗಾವಣೆ ಮಾಡಲಾಗಿದ್ದು, ಕೆಲವರಿಗೆ ಹೊಸದಾಗಿ ಸಾಂವಿಧಾನಿಕ ಹೊಣೆಗಾರಿಕೆ ವಹಿಸಲಾಗಿದೆ:
-
ಕರ್ನಾಟಕ: ಥಾವರ್‌ಚಂದ್ ಗೆಹ್ಲೋಟ್ ಅವರ ಜಾಗಕ್ಕೆ ಸುಧಾ ಯಾದವ್ ನೂತನ ರಾಜ್ಯಪಾಲರಾಗಿ ನೇಮಕ.
-
ಕೇರಳ: ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳಕ್ಕೆ ವರ್ಗಾವಣೆ ಮಾಡಲಾಗಿದೆ.
-
ತಮಿಳುನಾಡು: ಪ್ರಸ್ತುತ ಕೇರಳ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ತಮಿಳುನಾಡು ರಾಜ್ಯಪಾಲ ಹುದ್ದೆ ನೀಡಲಾಗಿದೆ. ಈ ಹಿಂದೆ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಿದ ನಂತರ, ಮಾರ್ಚ್‌ನಿಂದ ಅರ್ಲೇಕರ್ ಅವರು ತಮಿಳುನಾಡಿನ ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿದ್ದರು. ಇದೀಗ ಅವರನ್ನು ಪೂರ್ಣಾವಧಿಗೆ ತಮಿಳುನಾಡಿಗೆ ನಿಯೋಜಿಸಲಾಗಿದೆ.
-
ಸಿಕ್ಕಿಂ: ಓಂ ಪ್ರಕಾಶ್ ಮಾಥುರ್ ಅವರ ತೆರವಾದ ಸ್ಥಾನಕ್ಕೆ ದುಷ್ಯಂತ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
-
ಒಡಿಶಾ: ಹರಿ ಬಾಬು ಕಂಭಂಪಾಟಿ ಅವರ ಸ್ಥಾನಕ್ಕೆ ಬ್ರಜ್ ಮೋಹನ್ ರಾಮ್ ನೇಮಕಗೊಂಡಿದ್ದಾರೆ.
-
ಉತ್ತರಾಖಂಡ: ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಅವರ ಸ್ಥಾನಕ್ಕೆ ಧಾಲ್ ಸಿಂಗ್ ಬಿಸೆನ್ ಅವರನ್ನು ನೂತನ ರಾಜ್ಯಪಾಲರನ್ನಾಗಿ ನಿಯೋಜಿಸಲಾಗಿದೆ.
ಕರ್ನಾಟಕದ ಥಾವರ್‌ಚಂದ್ ಗೆಹ್ಲೋಟ್, ಒಡಿಶಾದ ಹರಿ ಬಾಬು ಕಂಭಂಪಾಟಿ ಹಾಗೂ ಉತ್ತರಾಖಂಡದ ಗುರ್ಮೀತ್ ಸಿಂಗ್ ಅವರಿಗೆ ಮುಂದಿನ ಯಾವುದೇ ಹೊಸ ಜವಾಬ್ದಾರಿಗಳನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಿಲ್ಲ. ರಾಷ್ಟ್ರಪತಿಗಳ ಈ ನೇಮಕಾತಿ ಆದೇಶವು ಅವರು ಅಧಿಕಾರ ಸ್ವೀಕರಿಸಿದ ದಿನದಿಂದ ಜಾರಿಗೆ ಬರಲಿದೆ.