ಬೆಂಗಳೂರು: ವಿಧಾನಪರಿಷತ್ತಿನ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣನವರ ಪರವಾಗಿ ಕೆಲಸ ಮಾಡುತ್ತಿರುವ ಸರಕಾರಿ ಅಧಿಕಾರಿಗಳನ್ನು ಅಮಾನತು ಮಾಡುವಂತೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ ಕುಮಾರ್, ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ಎ.ಪಿ. ರಂಗನಾಥ್ ಅವರ ಜೊತೆ ಇಂದು ಕೆ.ಆರ್. ಸರ್ಕಲ್ ಬಳಿ ಇರುವ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಶಿಕ್ಷಕರ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿಯಾಗಿ ರಂಗನಾಥ್‍ರವರು, ಕಾಂಗ್ರೆಸ್‍ನ ಅಭ್ಯರ್ಥಿಯಾಗಿ ಪುಟ್ಟಣ್ಣನವರು ಇದ್ದಾರೆ. ಸರಕಾರವು ಕಾಂಗ್ರೆಸ್ಸಿನ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಡಿಡಿಪಿಯು ಮತ್ತು ಬಿಇಒಗಳು, ಡಿಡಿಪಿಐ ಅವರನ್ನು ಬಳಸಿಕೊಳ್ಳುವ ಕುರಿತು ಗಮನ ಸೆಳೆಯಲು ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು.
ಕಾಂಗ್ರೆಸ್‍ನ ಅಭ್ಯರ್ಥಿಗೆ ಪ್ರಚಾರ ಮಾಡಲು ಜನ ಸಿಗುತ್ತಿಲ್ಲ. ಗ್ತಾ ಇಲ್ಲ. ಸರ್ಕಾರವು ಸಂಪೂರ್ಣ ಅಧಿಕಾರಿ ವರ್ಗವನ್ನೇ ಅವರ ಪ್ರಚಾರಕ್ಕಾಗಿ ಬಳಕೆ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಕೆಲದಿನಗಳ ಹಿಂದೆ ಆನೇಕಲ್‍ನ ಆಕ್ಸ್‍ಫರ್ಡ್ ಕಾಲೇಜ್ ಮತ್ತು ಬೇರೆ ಬೇರೆ ಸಂಸ್ಥೆಗಳಲ್ಲಿ ಬಹಳ ಜನರನ್ನು ಕೊನೆ ಕ್ಷಣದಲ್ಲಿ ಈ ಮತಪಟ್ಟಿಗೆ ಸೇರಿಸಿದ್ದಾರೆ ಎಂದು ದೂರಿದರು.
ಸರ್ಕಾರಿ ಯಂತ್ರದ ನೇರ ದುರುಪಯೋಗ ನಡೆಯುತ್ತಿದೆ. ಚುನಾವಣೆ ಗೆಲ್ಲಬೇಕು ಅನ್ನೋ ಕಾರಣಕ್ಕೆ ಈ ಕಾಂಗ್ರೆಸ್ ಸರ್ಕಾರ ಯಾವ ಹಂತಕ್ಕೆ ಬೇಕಾದರೂ ಹೋಗುತ್ತದೆ ಎಂಬುದಕ್ಕೆ ಇದು ನಿದರ್ಶನ ಆಗಿದೆ. ಅಭ್ಯರ್ಥಿ ಪುಟ್ಟಣ್ಣನವರು ಈಗಾಗಲೇ ಈ ಅಧಿಕಾರಿಗಳನ್ನು ದುರುಪಯೋಗ ಮಾಡುವುದರ ಜೊತೆಗೆ, ಸಭೆಗಳನ್ನು ಕೂಡ ನಡೆಸುತ್ತಿದ್ದಾರೆ. ಡಿಡಿಪಿಐ, ಬಿಇಒ ಕಚೇರಿಗೆ ಶಿಕ್ಷರನ್ನು ಕರೆಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಾರ್ಟಿಗಳು, ಉಡುಗೊರೆಗಳು..
ಪ್ರಚಾರದ ನೆಪದಲ್ಲಿ ಸಂಜೆ ಪಾರ್ಟಿ, ಲೇಟ್ ನೈಟ್ ಪಾರ್ಟಿಗಳು ನಡೆದಿವೆ. ಈ ಪಾರ್ಟಿಗಳಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಜೊತೆಗೆ ಈಗಾಗಲೇ ಗಿಫ್ಟ್‍ಗಳು ಕೂಡ ಅಧಿಕಾರಿಗಳ ಮೂಲಕವೇ ಕೊಡಿಸುತ್ತಿದ್ದಾರೆ. "ನಿಮ್ಮದೇನಾದರೂ ಡಿಮ್ಯಾಂಡ್ ಇದ್ದರೆ ದಯವಿಟ್ಟು ಹೇಳಿ, ಆದರೆ ಪುಟ್ಟಣ್ಣನವರಿಗೆ ವೋಟ್ ಹಾಕಬೇಕು" ಅನ್ನುವಂತಹ ಕರೆಗಳು ಬರುತ್ತಿವೆ ಎಂದು ಗಮನ ಸೆಳೆದರು.
ಡಿಡಿಪಿಯು ಉಪ ನಿರ್ದೇಶಕ ನೀಲಕಂಠೇಗೌಡ, ಬ್ಲಾಕ್ ರಿಸೋರ್ಸ್ ಕೋ-ಆರ್ಡಿನೇಟರ್ (ಬಿಆರ್‍ಸಿ) ನಾರಾಯಣ ಅವರು ಕೂಡ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ಪುಟ್ಟಣ್ಣ ನಾಮಪತ್ರ ಸಲ್ಲಿಸುವಾಗ ನಾರಾಯಣ ಜೊತೆಯಲ್ಲೇ ಇದ್ದರು ಎಂದು ವಿವರಿಸಿದರು.
ಪ್ರೀತಿ ವಿಶ್ವಾಸದಿಂದ ಗೆಲ್ಲಲಿ..
ಪುಟ್ಟಣ್ಣನವರೇ, ನಿಮಗೆ ತಾಕತ್ತಿದ್ದರೆ ಶಿಕ್ಷಕರ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಗೆಲ್ಲಿ. ನಮಗೇನೂ ಚಿಂತೆ ಇಲ್ಲ. ಆದರೆ ಈ ರೀತಿ ದುಂಡಾವರ್ತಿ ಮಾಡಿ, ಸರ್ಕಾರಿ ಯಂತ್ರವನ್ನು ದುರುಪಯೋಗ ಮಾಡಿ, ಸರ್ಕಾರವನ್ನೇ ಇದರಲ್ಲಿ ನೀವು ಬಳಕೆ ಮಾಡಿ, ಅಧಿಕಾರ ಇದೆ ಅನ್ನೋ ಕಾರಣಕ್ಕೆ ಅಧಿಕಾರಿಗಳ ಮೇಲೆ ದರ್ಪ ಮಾಡಿ ಈ ರೀತಿ ಮಾಡಿಕೊಳ್ಳುವುದು ಸರಿ ಇದೆಯಾ? ಎಂದು ಪ್ರಶ್ನಿಸಿದರು.
ಬಿಇಒ ಚಲನವಲನ ಗಮನಿಸಲು ತಂಡ..
17 ಜನ ಬಿಇಒಗಳಿದ್ದಾರೆ. ನಾವು ಒಬ್ಬೊಬ್ಬ ಬಿಇಒ ಹಿಂದೆ 10 ಜನ ವಕೀಲರನ್ನು ನೇಮಕ ಮಾಡುತ್ತಿದ್ದೇವೆ. ಒಬ್ಬ ಬಿಇಒ ಹಿಂದೆ ಒಂದು ತಂಡ, 10 ಜನರ ವಕೀಲರ ತಂಡ ಇರುತ್ತದೆ. ಕ್ಯಾಮೆರಾ ಇಟ್ಕೊಂಡು ಅವರನ್ನು ದೂರ ದೂರದಿಂದ ನಿಂತು ಅವರ ಚಲನವಲನಗಳನ್ನು ಸೆರೆ ಹಿಡಿಯಲಿದ್ದಾರೆ. ಅವರು ಎಲ್ಲೆಲ್ಲಿ ಹೋಗ್ತಾರೆ, ಏನೇನು ಚಟುವಟಿಕೆಗಳನ್ನು ಮಾಡ್ತಾರೆ ಅನ್ನೋದನ್ನು ಸೆರೆ ಹಿಡಿದು ನೀಡಲಿದ್ದಾರೆ ಎಂದರು.
ನಾವು ನ್ಯಾಯಾಲಯಕ್ಕೂ ಇದನ್ನು ಒಯ್ಯಲಿದ್ದೇವೆ. ಚುನಾವಣಾ ಆಯೋಗಕ್ಕೂ ಇದನ್ನು ತಲುಪಿಸುತ್ತೇವೆ, ರಾಷ್ಟ್ರೀಯ ಚುನಾವಣಾ ಆಯೋಗಕ್ಕೂ ತಲುಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.