ಗದಗ: ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ಗದಗ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಪರ್ವೇಜ್ ಧಾರವಾಡ ಅವರನ್ನು ಕೊನೆಗೂ ಗದಗ ಪೊಲೀಸರು ಪತ್ತೆಹಚ್ಚಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಪರ್ವೇಜ್ ಪತ್ತೆಯಾಗಿದ್ದು, ಅವರ ಓಡಾಟದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ರಸ್ತುತ ಭೋಪಾಲ್‌ನಲ್ಲಿ ಬೀಡುಬಿಟ್ಟಿರುವ ಗದಗ ವಿಶೇಷ ಪೊಲೀಸ್ ಪಡೆ ಅವರನ್ನು ಸುರಕ್ಷಿತವಾಗಿ ಸ್ವಗ್ರಾಮಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಂಡಿದೆ.
ಪರ್ವೇಜ್ ಅವರು ನಾಪತ್ತೆಯಾದ ಬಳಿಕ ತಮ್ಮ ಮೊಬೈಲ್ ಫೋನ್ ಹಾಗೂ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದರು. ಡಿಜಿಟಲ್ ಸುಳಿವುಗಳು ಸಿಗದ ಕಾರಣ ಈ ಪ್ರಕರಣ ಗದಗ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನು ರಚಿಸಿ, ರೈಲ್ವೆ ನಿಲ್ದಾಣಗಳು ಸೇರಿದಂತೆ ವಿವಿಧ ಸಂಭಾವ್ಯ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸುದೀರ್ಘವಾಗಿ ಪರಿಶೀಲಿಸಿದ ಪೊಲೀಸರು, ಅಂತಿಮವಾಗಿ ಭೋಪಾಲ್‌ನಲ್ಲಿ ಅವರಿದ್ದ ಜಾಗವನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಗದಗ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸರ್ಕಾರದಿಂದ ನಾನಾ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತಮಗೂ ಮತ್ತು ತಮ್ಮ ಕುಟುಂಬಕ್ಕೂ ಹಣಕ್ಕಾಗಿ ನಿರಂತರ ಕಿರುಕುಳ ಹಾಗೂ ಒತ್ತಡ ನೀಡುತ್ತಿದ್ದಾರೆ ಎಂದು ಪರ್ವೇಜ್ ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ. ಈ ತೀವ್ರ ಮಾನಸಿಕ ಕಿರುಕುಳ ತಾಳಲಾರದೆ ಅವರು ಮನೆ ತೊರೆದಿದ್ದರು ಎಂದು ತಿಳಿದುಬಂದಿದೆ. ಪ್ರಕರಣದ ಗಂಭೀರತೆ ಅರಿತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಪರ್ವೇಜ್ ಅವರ ತಂದೆ ಜಾಫರ್ ಸಾಬ್ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದರು. ಇಲಾಖೆಯಲ್ಲಿ ಅನುದಾನದ ಕೊರತೆಯಿಲ್ಲ, ಯಾವುದೇ ಆರ್ಥಿಕ ಸಮಸ್ಯೆಯಿದ್ದರೂ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು.