ವಿಜಯಪುರ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಇಂದು ಮುಂಜಾನೆ ಸಾಧಾರಣ ಪ್ರಮಾಣದ ಭೂಕಂಪನ ಸಂಭವಿಸಿದೆ. ಮುಂಜಾನೆ 2:04ರ ಸುಮಾರಿಗೆ ಈ ಭೂಕಂಪನ ಜರುಗಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ನೆಟ್‌ವರ್ಕ್‌ನಲ್ಲಿ ಅಧಿಕೃತವಾಗಿ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ 3.5 ರಷ್ಟು ತೀವ್ರತೆ ಕಂಡುಬಂದಿದ್ದು, ಬಸವನ ಬಾಗೇವಾಡಿಯಿಂದ ಈಶಾನ್ಯಕ್ಕೆ ಸುಮಾರು 3.9 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರಬಿಂದು (Epicenter) ಪತ್ತೆಯಾಗಿದೆ.
ಈ ಕಂಪನವು ಭೂಮಿಯ ಮೇಲ್ಮೈನಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಉಂಟಾಗಿದೆ. ಹುನಶ್ಯಾಳ ಗ್ರಾಮ ಪಂಚಾಯಿತಿಯಿಂದ ಪಶ್ಚಿಮಕ್ಕೆ 7.8 ಕಿ.ಮೀ, ಹೂವಿನ ಹಿಪ್ಪರಗಿ ಗ್ರಾಮ ಪಂಚಾಯಿತಿಯಿಂದ ಪಶ್ಚಿಮಕ್ಕೆ 11.2 ಕಿ.ಮೀ, ಆಲಮಟ್ಟಿ ಜಲಾಶಯದಿಂದ ಈಶಾನ್ಯಕ್ಕೆ 31.0 ಕಿ.ಮೀ ಹಾಗೂ ವಿಜಯಪುರ ನಗರದಿಂದ ನೈರುತ್ಯಕ್ಕೆ 38.0 ಕಿ.ಮೀ ದೂರದಲ್ಲಿ ಕೇಂದ್ರಬಿಂದು ಕಂಡುಬಂದಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಳವಾದ ವಿಶ್ಲೇಷಣೆಯ ನಂತರ ಸ್ಪಷ್ಟಪಡಿಸಲಾಗಿದೆ.
ಕಂಪನದ ತೀವ್ರತೆಯು ಅತ್ಯಂತ ಕಡಿಮೆಯಾಗಿದ್ದರಿಂದ, ಕೇಂದ್ರಬಿಂದುವಿನಿಂದ ಸುಮಾರು 50 ರಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸಣ್ಣ ಪ್ರಮಾಣದ ಕಂಪನದ ಅನುಭವವಾಗಿರಬಹುದು. ಆದರೆ ಸ್ಥಳೀಯ ಜನರಿಗೆ ಅಥವಾ ಆಸ್ತಿಪಾಸ್ತಿಗೆ ಯಾವುದೇ ರೀತಿಯ ಹಾನಿ ಅಥವಾ ಅಪಾಯ ಸಂಭವಿಸಿಲ್ಲ. ಈ ಪ್ರದೇಶವು ಭೌಗೋಳಿಕವಾಗಿ ಸುರಕ್ಷಿತ ಭೂಕಂಪನ ವಲಯದಲ್ಲಿದ್ದು, ಟೆಕ್ಟಾನಿಕ್ ನಕ್ಷೆಯ ಪ್ರಕಾರ ಯಾವುದೇ ರೀತಿಯ ರಚನಾತ್ಮಕ ಅಡಚಣೆಗಳಿಲ್ಲ. ಹೀಗಾಗಿ ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ ಆತಂಕಪಡುವ ಅಗತ್ಯವಿಲ್ಲ ಎಂದು KSNDMC ನಿರ್ದೇಶಕರು ಅಭಯ ನೀಡಿದ್ದಾರೆ.