ಮಂಗಳೂರು: ನಗರದ ಹೊರವಲಯದ ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಘಟಕದಲ್ಲಿ ಬುಧವಾರ ಭಾರಿ ಸ್ಪೋಟವೊಂದು ಸಂಭವಿಸಿದ್ದು, ಕಾರ್ಖಾನೆಯ ಒಂದು ಭಾಗ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಸ್ಪೋಟದ ರಭಸಕ್ಕೆ ಸುತ್ತಮುತ್ತಲ ಪ್ರದೇಶಗಳು ನಡುಗಿದ್ದು, ಕಾರ್ಖಾನೆಯಿಂದ ದಟ್ಟವಾದ ಕಪ್ಪು ಹೊಗೆ ಮುಗಿಲೆತ್ತರಕ್ಕೆ ವ್ಯಾಪಿಸಿದೆ. ಘಟನೆಯ ತೀವ್ರತೆಗೆ ಜೋಕಟ್ಟೆ ಸೇರಿದಂತೆ ಅಕ್ಕಪಕ್ಕದ ಹಲವು ವಸತಿ ಪ್ರದೇಶಗಳಿಗೂ ದಟ್ಟ ಹೊಗೆ ಆವರಿಸಿಕೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಭೀತಿ ಸೃಷ್ಟಿಯಾಗಿದೆ.
ಸ್ಥಳಕ್ಕೆ ತಕ್ಷಣವೇ ಧಾವಿಸಿದ ಹಲವು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ. ಬೆಂಕಿ ಮತ್ತಷ್ಟು ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಹಾಗೂ ಆಡಳಿತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಪೋಟಕ್ಕೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಘಟನೆಯಲ್ಲಿ ಉಂಟಾದ ಜೀವಹಾನಿ ಹಾಗೂ ಆಸ್ತಿಪಾಸ್ತಿ ಹಾನಿಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.