ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ನಕಲಿ ಜಿಪಿಎಸ್ ಫೋಟೋ ತೆಗೆದು ವಂಚಿಸಲಾಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತನಿಖೆಗೆ ಆದೇಶ ನೀಡಿದ್ದಾರೆ.
ಇಲಾಖೆಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯಲ್ಲಿ ಮೇಟಿಗಳು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕೆಲಸಗಾರರು ಹೋಗದಿದ್ದರೂ ವಿಡಿಯೋ ಚಿತ್ರೀಕರಣ ಮಾಡಿಸಿ ಆ ವಿಡಿಯೋ ಪ್ಲೇ ಆಗುತ್ತಿರುವಾಗ ಮತ್ತೊಂದು ಮೊಬೈಲ್ ನಲ್ಲಿ ಜಿಪಿಎಸ್ ಫೋಟೋ ತೆಗೆಸಿ ವಂಚಿಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದ್ದು, ಈ ಬಗ್ಗೆ ಜಂಟಿ ನಿರ್ದೇಶಕರ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ 4 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಈ ರೀತಿ ನಕಲಿ ಜಿಪಿಎಸ್ ಫೋಟೋ ತೆಗೆದು ಪ್ರತಿನಿತ್ಯ 20-30 ಸಾವಿರ ರೂ. ವಂಚನೆ ಮಾಡುತ್ತಿದ್ದಾರೆ, ಕೆಲಸ ಮಾಡದೆಯೇ ಹಾಜರಾತಿ ಹಾಕಿಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಈಶ್ವರ ಖಂಡ್ರೆ, ವರದಿಯಲ್ಲಿ ಅಂಶ ಸತ್ಯವಾಗಿದ್ದಲ್ಲಿ, ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕಾದ ಶಿಫಾರಸಿನೊಂದಿಗೆ ವಾಸ್ತವಾಂಶದ ವರದಿಯನ್ನು ಸಲ್ಲಿಸುವಂತೆ ಮತ್ತು ಈ ರೀತಿ ತಂತ್ರಜ್ಞಾನವನ್ನೇ ವಂಚಿಸಿ ಹಾಜರಾತಿ ಹಾಕದಂತೆ ತಡೆಯಲು ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿ ಉಪಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.
ಯಂತ್ರಗಳ ಮೂಲಕ ಕಾಮಗಾರಿ ನಡೆಸಿ, ಕೂಲಿ ಕಾರ್ಮಿಕರ ಅಕ್ರಮ ಹಾಜರಾತಿ ಹಾಕಿಸುವುದನ್ನು ತಪ್ಪಿಸಲು ವಿಬಿಜಿ ರಾಮ್ ಜಿಯಡಿ ಕೂಲಿಗೆ ಬರುವವರು ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಜಿಪಿಎಸ್ ಫೋಟೋ ತೆಗೆದು ಎನ್.ಎಂ.ಎಂ.ಎಸ್. ಅಪ್ ನಲ್ಲಿ ಅಪ್ ಲೋಡ್ ಮಾಡುವುದನ್ನು ಕಡ್ಡಾಯ ಮಾಡಿಲಾಗಿದೆ. ಆದರೆ ಕೆಲವರು ಈ ತಂತ್ರಜ್ಞಾನಕ್ಕೆ ಸವಾಲು ಹಾಕಿದ್ದು, ಸರ್ಕಾರ ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ.