ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆಯು ಬಹುದೊಡ್ಡ ಸಿಹಿಸುದ್ದಿ ನೀಡಿದೆ. 2005-06 ಹಾಗೂ 2006-07ನೇ ಸಾಲಿನಲ್ಲಿ, ಅಂದರೆ ದಿನಾಂಕ 01-04-2006ಕ್ಕಿಂತ ಮುಂಚಿತವಾಗಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾಗಿ, ಆ ದಿನಾಂಕದಂದು ಅಥವಾ ನಂತರದಲ್ಲಿ ಸೇವೆಗೆ ಸೇರಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಹಳೆಯ ಡಿಫೈನ್ಡ್ ಪಿಂಚಣಿ (Defined Pension Scheme / OPS) ವ್ಯಾಪ್ತಿಗೆ ತಂದು ಇಲಾಖೆಯ ಆಯುಕ್ತರ ಕಚೇರಿ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದೆ.
ಹಳೆ ಪಿಂಚಣಿ ಯೋಜನೆಗೆ ಒಳಪಡಿಸಲು ಸೂಚನೆ
ಬೆಂಗಳೂರು, ಮೈಸೂರು, ಧಾರವಾಡ ಮತ್ತು ಕಲಬುರಗಿ ವಿಭಾಗಗಳ ವ್ಯಾಪ್ತಿಯಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದೆ. ಇದರ ಅನ್ವಯ 2006ರ ಏಪ್ರಿಲ್ 1ಕ್ಕೂ ಮುನ್ನ ಅಧಿಸೂಚನೆ ಹೊರಬಿದ್ದು, ನಂತರ ಕರ್ತವ್ಯಕ್ಕೆ ಹಾಜರಾದ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಹಳೆಯ ಡಿಫೈನ್ಡ್ ಪಿಂಚಣಿ ಸೌಲಭ್ಯ ಅನ್ವಯವಾಗಲಿದೆ. ಇವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ನಿಯಮ 2-C ಅನ್ವಯವಾಗುವುದಿಲ್ಲ ಬದಲಿಗೆ ಸಾಮಾನ್ಯ ಪಿಂಚಣಿಯ ಭಾಗ-IV ಅನ್ವಯವಾಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಎನ್‌ಪಿಎಸ್ ಕಡಿತ ಸ್ಥಗಿತ, ಜಿಪಿಎಫ್ ಖಾತೆ ಆರಂಭಕ್ಕೆ ಆದೇಶ
ಈ ಆದೇಶದ ಹಿನ್ನೆಲೆಯಲ್ಲಿ ಅರ್ಹ ಶಿಕ್ಷಕರಿಗೆ ಎಚ್‌ಆರ್‌ಎಂಎಸ್-2.0 (HRMS-2.0) ತಂತ್ರಾಂಶದಲ್ಲಿ ಪ್ರತಿ ತಿಂಗಳು ಕಡಿತವಾಗುತ್ತಿದ್ದ ಎನ್‌ಪಿಎಸ್ (NPS) ವಂತಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ನಿರ್ದೇಶಿಸಲಾಗಿದೆ. ಜೊತೆಗೆ, ಅವರಿಗೆ ನೂತನ ಜಿಪಿಎಫ್ (GPF) ಖಾತೆಗಳನ್ನು ಸೃಜಿಸಲು ಹಾಗೂ ಈವರೆಗೆ ಅವರ ಪ್ರಾನ್ (PRAN) ಖಾತೆಯಲ್ಲಿ ಜಮೆಯಾಗಿರುವ ನೌಕರ ಮತ್ತು ಸರ್ಕಾರದ ವಂತಿಕೆಯ ಹಣವನ್ನು ನಿಯಮಾನುಸಾರ ಹಿಂಪಡೆದು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಡಿಡಿಪಿಐ (DDPI) ಹಾಗೂ ಬಿಇಒ (BEO) ಗಳಿಗೆ ಶಿಕ್ಷಣ ಇಲಾಖೆಯ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

