LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿ ಫ್ರಿಡ್ಜ್‌ ಸ್ಫೋಟ ದುರಂತಕ್ಕೆ ಟ್ವಿಸ್ಟ್‌ : ಆಕಸ್ಮಿಕ ಅವಘಡವಲ್ಲ, ಪಕ್ಕಾ ಪ್ಲ್ಯಾನ್ ಮಾಡಿ ನಡೆಸಿದ ಸಾಮೂಹಿಕ ಹತ್ಯೆ?!

ಬೆಳಗಾವಿ: ಗಣೇಶ ಚತುರ್ಥಿಯ ಸಂಭ್ರಮದಲ್ಲಿದ್ದ ಒಂದೇ ಕುಟುಂಬದ ಆರು ಮಂದಿಯನ್ನು ಬಲಿಪಡೆದ ನಗರದ ಚವಾಟ್‌ ಗಲ್ಲಿಯ ಭೀಕರ ಅಗ್ನಿ ದುರಂತ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಮೇಲ್ನೋಟಕ್ಕೆ 'ಫ್ರಿಡ್ಜ್‌ ಕಂಪ್ರೆಸರ್ ಸ್ಫೋಟ'ದಿಂದ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡ ಎಂದೇ ಭಾವಿಸಲಾಗಿದ್ದ ಈ ಘಟನೆಗೆ ಈಗ ಯೋಜಿತ ಕೊಲೆಯ ಕರಾಳ ನೆರಳು ಬಿದ್ದಿದೆ. ಪೋಲಿಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿರುವ ಸಿಸಿಟಿವಿ ದೃಶ್ಯಗಳು ಇಡೀ ನಗರವನ್ನೇ ಬೆಚ್ಚಿಬೀಳಿಸಿವೆ.

ಸೆಪ್ಟೆಂಬರ್ 16ರ ಗಣೇಶ ಚತುರ್ಥಿಯ ರಾತ್ರಿ ಚವಾಟ್‌ ಗಲ್ಲಿಯ ಶೆಡ್‌ನಲ್ಲಿ ವಾಸವಿದ್ದ ದಮೋನೆ ಕುಟುಂಬವು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಹಬ್ಬದ ಊಟ ಮುಗಿಸಿ ನೆಮ್ಮದಿಯಿಂದ ನಿದ್ರೆಗೆ ಜಾರಿತ್ತು. ಆದರೆ ಬೆಳಗಿನ ಜಾವ ಇಡೀ ಶೆಡ್‌ ದಿಢೀರನೆ ಹೊತ್ತಿ ಉರಿದಿದ್ದು, ಸ್ಥಳದಲ್ಲೇ ನಾಲ್ವರು ಸಜೀವ ದಹನವಾಗಿದ್ದರು. ಭಾರತಿ ದಮೋನೆ (50), ಶಾರದಾ ದಮೋನೆ (45), ಪ್ರಿಯಾ (28), ಮತ್ತು ಗಂಗಾ (25) ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಸುಟ್ಟ ಗಾಯಗಳೊಂದಿಗೆ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದ ಕುಟುಂಬದ ಹಿರಿಯ ಗಜಾನನ ದಮೋನೆ (61) ಹಾಗೂ ಯುವಕ ರೋಷನ್ (23) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.

ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಇಡೀ ಕುಟುಂಬವೇ ಈ ದುರಂತದಲ್ಲಿ ನಾಶವಾಗಿದ್ದು, ಇಡೀ ನಾಡನ್ನೇ ಕಣ್ಣೀರಿಡುವಂತೆ ಮಾಡಿತ್ತು. ಘಟನಾ ಸ್ಥಳಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಆಸೀಫ್ ಸೇಠ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದ ಪರಿಹಾರದ ಭರವಸೆಯನ್ನೂ ನೀಡಿದ್ದರು. ಆರಂಭಿಕ ಹಂತದಲ್ಲಿ ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಫ್ರಿಡ್ಜ್‌ ಸ್ಫೋಟದಿಂದ ಸಂಭವಿಸಿದ ಆಕಸ್ಮಿಕ ದುರಂತ ಎಂದೇ ಎಲ್ಲರೂ ನಂಬಿದ್ದರು.

ಆದರೆ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಬೆಂಕಿ ಕಾಣಿಸಿಕೊಳ್ಳುವುದಕ್ಕೂ ಕೆಲವೇ ಕ್ಷಣಗಳ ಮೊದಲು ಚವಾಟ್‌ ಗಲ್ಲಿಯಲ್ಲಿ ಅಪರಿಚಿತ ವ್ಯಕ್ತಿಗಳು ಕೈಯಲ್ಲಿ ಬಕೆಟ್ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಬಕೆಟ್ ಹೊತ್ತು ಶೆಡ್ ಬಳಿ ಹೋದ ಈ ವ್ಯಕ್ತಿಗಳು ಕೇವಲ ಐದು ನಿಮಿಷಗಳ ಅಂತರದಲ್ಲಿ ಬರಿಗೈಯಲ್ಲಿ ಅತ್ಯಂತ ವೇಗವಾಗಿ ಓಡಿ ಪರಾರಿಯಾಗಿರುವುದು ಪತ್ತೆಯಾಗಿದೆ.

ಈ ದೃಶ್ಯಗಳಿಂದಾಗಿ, ಬಕೆಟ್‌ನಲ್ಲಿ ಪೆಟ್ರೋಲ್, ಸೀಮೆಎಣ್ಣೆ ಅಥವಾ ಇತರ ಯಾವುದೇ ದಹನಕಾರಿ ರಾಸಾಯನಿಕ ತಂದು, ಉದ್ದೇಶಪೂರ್ವಕವಾಗಿ ಹೊರಗಿನಿಂದ ಬೆಂಕಿ ಹಚ್ಚಿ ನಂತರ ಅದನ್ನು ಫ್ರಿಡ್ಜ್ ಸ್ಫೋಟದಂತೆ ಬಿಂಬಿಸಲು ಸಂಚು ರೂಪಿಸಲಾಗಿತ್ತೇ ಎಂಬ ಬಲವಾದ ಶಂಕೆ ಮೂಡಿದೆ. ಪ್ರಕರಣವು ಈಗ ಸಾಮೂಹಿಕ ಕೊಲೆಯ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರು ಶಂಕಿತರ ಬಂಧನಕ್ಕಾಗಿ ತಕ್ಷಣವೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

ಶೆಡ್ ಬಳಿ ಬಂದು ಪರಾರಿಯಾದ ಆ ಅಪರಿಚಿತ ಆಗಂತುಕರು ಯಾರು, ಅವರು ಬಕೆಟ್‌ನಲ್ಲಿ ತಂದಿದ್ದ ದ್ರವ ಯಾವುದು ಹಾಗೂ ದಮೋನೆ ಕುಟುಂಬಕ್ಕೆ ಸ್ಥಳೀಯವಾಗಿ ಆಸ್ತಿ, ಹಣಕಾಸು ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆ ಇತ್ತೇ ಎಂಬಿತ್ಯಾದಿ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನಾ ಸ್ಥಳದ ಸಮಗ್ರ ವಿಧಿವಿಜ್ಞಾನ (FSL) ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಶಂಕಿತರ ಪತ್ತೆಗೆ ಬಲೆ ಬೀಸಿದ್ದಾರೆ. ಇದು ಕೇವಲ ತಾಂತ್ರಿಕ ದೋಷದ ಅನಾಹುತವೋ ಅಥವಾ ದ್ವೇಷದ ಕೃತ್ಯವೋ ಎಂಬುದು ಶೀಘ್ರದಲ್ಲೇ ಬಹಿರಂಗವಾಗಬೇಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಭಾವಂತ ಮಕ್ಕಳಿಗೆ ಬೆಂಬಲ ನೀಡಿದರೆ ಉಜ್ವಲ ಭವಿಷ್ಯ: ಸಾಗರ ಈಡಿಗರ ಸಂಘದ ಅಧ್ಯಕ್ಷ ಹೆಚ್.ರವಿಕುಮಾರ್ ಸಿಗಂದೂರುBREAKING: ಬೆಂಗಳೂರಲ್ಲಿ ನಕಲಿ ಔಷಧಿ ದಂಧೆ: 4 ಆಸ್ಪತ್ರೆಗಳ ಫಾರ್ಮಸಿ ಲೈಸೆನ್ಸ್ ರದ್ದು!ಸಾಗರದ 'ಹಲ್ಕೆ-ಮುಪ್ಪಾಣೆ ಲಾಂಚ್' ವಿವಾದ: ಬೇಳೂರು ಶ್ರಮಕ್ಕೆ 'ಹಾಲಪ್ಪ ಕ್ರೆಡಿಟ್ ಪಾಲಿಟಿಕ್ಸ್', ಕಾಂಗ್ರೆಸ್ ಮುಖಂಡರ ಆಕ್ರೋಶಸತ್ಯದೊಂದಿಗೆ ಪ್ರಯೋಗ ನಡೆಸಿದ ಏಕೈಕ ಚೇತನ ಗಾಂಧೀಜಿ: ಸಾಗರದಲ್ಲಿ ಕವಯತ್ರಿ ಸವಿತಾ ನಾಗಭೂಷಣ ಅಭಿಮತBIG UPDATE: ಮಾಜಿ ಸಚಿವ ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು, ಚಾಲಕನಿಗೆ ಗಂಭೀರ ಗಾಯಬೆಳಗಾವಿ ಫ್ರಿಡ್ಜ್‌ ಸ್ಫೋಟ ದುರಂತಕ್ಕೆ ಟ್ವಿಸ್ಟ್‌ : ಆಕಸ್ಮಿಕ ಅವಘಡವಲ್ಲ, ಪಕ್ಕಾ ಪ್ಲ್ಯಾನ್ ಮಾಡಿ ನಡೆಸಿದ ಸಾಮೂಹಿಕ ಹತ್ಯೆ?!BREAKING : ಗದಗ ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ಗುಡುಗಿದ ಹೆಚ್.ಕೆ. ಪಾಟೀಲ್!'ನನಗೆ ಎಷ್ಟು ದಿನ ಟೈಮ್ ಇದೆಯೋ ಅವಕಾಶ ಇದೆಯೋ ಗೊತ್ತಿಲ್ಲ' : ಅಧಿಕಾರದ ಬಗ್ಗೆ ಸಿಎಂ ಡಿಕೆಶಿ ಮಾರ್ಮಿಕ ಮಾತು!ಷೇರು ಮಾರುಕಟ್ಟೆ ಆಮಿಷವೊಡ್ಡಿ ಕೋಟಿ ಲೂಟಿ: ಸೈಬರ್ ಪೊಲೀಸರ ಬಲೆಗೆ ಖತರ್ನಾಕ್ ಗ್ಯಾಂಗ್BIG BREAKING: ಕಾರ್ಕಳ ಬಳಿ ಮಾಜಿ ಸಚಿವ ಬಿ.ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು