ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಅವರನ್ನು ಇಂದು ಸಂಜೆ ಭೇಟಿ ಮಾಡಿ, ಬೀದರ್‌ನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಈ ಹಿಂದೆ ನೀಡಲಾಗುತ್ತಿದ್ದ ರೈಲ್ವೆ ಪಾಸ್ ಸೌಲಭ್ಯವನ್ನು ಮರುಪ್ರಾರಂಭಿಸುವಂತೆ ಕೆಯುಡಬ್ಲ್ಯೂಜೆ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರು ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ತಮ್ಮ ವೃತ್ತಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ರೈಲ್ವೆ ಪಾಸ್ ಸೌಲಭ್ಯ ಬಹಳ ಅನುಕೂಲವಾಗಿತ್ತು. ಆದ್ದರಿಂದ ಈ ಸೌಲಭ್ಯವನ್ನು ಪುನಃ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಶಿವಾನಂದ ತಗಡೂರು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವ ವಿ.ಸೋಮಣ್ಣ ಅವರು, ಪತ್ರಕರ್ತರ ರೈಲ್ವೆ ಪಾಸ್ ಬೇಡಿಕೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಸೋಮಶೇಖರ ಗಾಂಧಿ ಉಪಸ್ಥಿತರಿದ್ದರು.