ಬೆಂಗಳೂರು: ಕೆಲ ದಿನಗಳ ಹಿಂದೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ವಿನೋದ್ ಪ್ರಭಾಕರ್, ‘ಬಲರಾಮನ ದಿನಗಳು’ ಫಸ್ಟ್ ಶೋ ವೇಳೆ ಥಿಯೇಟರ್ ಆಗಮಿಸಿದ್ದು, ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿನೋದ್ ಪ್ರಭಾಕರ್, ಸದ್ಯ ಈಗ ಆರೋಗ್ಯವಾಗಿದ್ದು, ನನಗೆ ಹೃದಯಾಘಾತ ಆಗಿರಲಿಲ್ಲ. ಸುಸ್ತು, ಬಿಪಿ ಲೋ ಆಗಿತ್ತು ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ನಾರ್ಮಲ್ ಬೆಡ್ ಇರದ ಕಾರಣ ಐಸಿಯುನಲ್ಲಿ ಇರಬೇಕಾಯ್ತು. ಇನ್ನೂ ಟ್ರೀಟ್ಮೆಂಟ್ ಮುಂದುವರೆದಿದೆ ಎಂದು ಹೇಳಿದ್ದಾರೆ.
ಇಂದೂ ಕೂಡ ಥಿಯೇಟರ್‌ಗೆ ಬರೋ ಮುಂಚೆಯೂ ಇಂಜೆಕ್ಷನ್ ತೆಗೆದುಕೊಂಡು ಬಂದೆ. ಈಗ 75% ಸುಧಾರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸುಳ್ಳು ವದಂತಿ ಹಾಗೂ ಪ್ರಚಾರದ ಗಿಮಿಕ್ ಎಂದವರ ಬಗ್ಗೆ ಗರಂ ಆದ ವಿನೋದ್ ಪ್ರಭಾಕರ್, ಲೋ ಬಿಪಿ ಆಗಿದ್ದೇ ಇದಕ್ಕೆಲ್ಲಾ ಕಾರಣ. ನಿರಂತರ ಪ್ರಚಾರ, ನಿದ್ದೆ ಇಲ್ಲದೆ ಕೆಲಸ ಮಾಡಿದ್ದ ಪರಿಣಾಮ ದೇಹ ದಣಿದಿತ್ತು. ಪ್ರಚಾರಕ್ಕೆ ಗಿಮಿಕ್ ಮಾಡೋಕೆ ಇದೇನು ನನ್ನ ಮೊದಲ ಸಿನಿಮಾ ಅಲ್ಲ, 25 ಸಿನಿಮಾ ಮಾಡಿದ್ದೇನೆ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಒಂದು ವಾರದ ಹಿಂದಷ್ಟೇ ವಿನೋದ್ ಪ್ರಭಾಕರ್ ಅವರ ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಬೆಂಗಳೂರಿನ ನಾಗರಭಾವಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಅನಾರೋಗ್ಯದ ವಿಚಾರವಾಗಿ ಅನೇಕ ವದಂತಿಗಳು ಹಬ್ಬಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಕ್ಕೆ ಹೃದಯಾಘಾತವಾಗಿದೆ ಎಂದು ಊಹಿಸಲಾಗಿತ್ತು. ಇದೀಗ ಸ್ವತಃ ವಿನೋದ್ ಪ್ರಭಾಕರ್ ಅವರೇ ತಮಗೆ ಹೃದಯಾಘಾತವಾಗಿರಲಿಲ್ಲ, ಲೋ ಬಿಪಿ ಆಗಿತ್ತುಬೆಂದು ಸ್ಪಷ್ಟಪಡಿಸಿದ್ದಾರೆ.