ಬೆಳಗಾವಿ: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಘಟನೆ ನಡೆದಿದೆ.
ವಣ್ಣೂರ ಗ್ರಾಮದ ಹನುಮಂತಪ್ಪ ಇಟಗಿ ಕೊಲೆಯಾದ ವ್ಯಕ್ತಿ: ಗೆಳೆಯ ಹನುಮಂತನನ್ನು ಕೊಲೆ ಮಾಡಿ ಆರೋಪಿ ವಿಶ್ವನಾಥ್ ಪರಾರಿಯಾಗಿದ್ದ. ಮೊಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ನೆತ್ತರು ಹರಿದಿದೆ.
ಗಂಡು ಮಗು ಜನಿಸಿದ್ದಕ್ಕೆ ಸ್ನೇಹಿತ ಹನುಮಂತಪ್ಪ ಇಟಗಿ ಪಾರ್ಟಿ ಕೇಳಿದ್ದ. ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯ ಮೇಲೆ ಕುಳಿತು ಇಬ್ಬರೂ ಹರಟೆ ಹೊಡೆಯುತ್ತಿದ್ದರು. ಪಾರ್ಟಿ ಕೊಡಿಸುವ ವಿಚಾರಕ್ಕೆ ಸ್ನೇಹಿತರ ನಡುವೆ ಮಾತುಕತೆ ನಡೆದಿತ್ತು. ಈ ವೇಳೆ ವಿಶ್ವನಾಥನ ಕಣ್ಣಿಗೆ ಹನುಮಂತಪ್ಪನ ಬೆರಳು ರಭಸವಾಗಿ ತಾಗಿದೆ. ಇದೇ ಸಿಟ್ಟಿನಿಂದ ಹನುಮಂತಪ್ಪನ ತಲೆಗೆ ವಿಶ್ವನಾಥ್ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದು ಹನುಮಂತಪ್ಪ ಮೃತಪಟ್ಟಿದ್ದಾನೆ. ವಿಶ್ವನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.