ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಮುಖ ಮಾಡಿರುವ ಭಾರತದ ಕ್ರಿಕೆಟಿಗರು ಇತ್ತೀಚೆಗಷ್ಟೆ ನಡೆದ ಎರಡು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಹೀನಾಯ ಸೋಲನ್ನು ಕಂಡರು.
ಇದೇ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ತಂಡವೊಂದು ಟಿ ಟ್ವೆಂಟಿ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗಕ್ಕೊಳಗಾದ ಕೆಟ್ಟ ದಾಖಲೆಯನ್ನು ಬರೆದು ಭಾರೀ ಟೀಕೆಗೊಳಗಾಗಿರುವ ಭಾರತ ಇಂದಿನಿಂದ ( ಜುಲೈ 1 ) ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ.
ಐರ್ಲೆಂಡ್ ವಿರುದ್ಧ ಹೀನಾಯ ಸೋಲನ್ನು ಕಂಡ ಬಳಿಕ ಭಾರತದ ಆಡುವ ಬಳಗದಲ್ಲಿ ಬದಲಾವಣೆ ಬೇಕಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದ್ದು, ಆರಂಭಿಕನಾಗಿಕ ವೈಭವ್ ಸೂರ್ಯವಂಶಿಯನ್ನು ಕರೆತರಬೇಕು ಎಂದು ಕ್ರಿಕೆಟ್ ಪ್ರಿಯರು ಬೇಡಿಕೆ ಇಟ್ಟಿದ್ದಾರೆ. ಅನೇಕ ನೆಟ್ಟಿಗರು ಈ ಬಗ್ಗೆ ಕಾಮೆಂಟ್ ಮಾಡಿದ್ದು, ಭಾರತ ಐರ್ಲೆಂಡ್ ವಿರುದ್ಧ ಸೋತಾಗ ಎಕ್ಸ್‌ನಲ್ಲಿ ವೈಭವ್ ಹೆಸರು ಟ್ರೆಂಡಿಂಗ್ ಪಟ್ಟಿಯಲ್ಲಿತ್ತು.
ಹೀಗೆ ವೈಭವ್ ಸೂರ್ಯವಂಶಿಗೆ ಆಡುವ ಅವಕಾಶ ನೀಡುವುದರ ಬಗ್ಗೆ ಇಂಗ್ಲೆಂಡ್ ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ ನಾಯಕ ಶ್ರೇಯಸ್ ಐಯ್ಯರ್‌ಗೂ ಸಹ ಪ್ರಶ್ನೆಯನ್ನು ಕೇಳಲಾಯಿತು. ಆದರೆ ಶ್ರೇಯಸ್ ಐಯ್ಯರ್ ನೀಡಿದ ಉತ್ತರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ನೆಟ್ಟಿಗರು ಶ್ರೇಯಸ್‌ಗೇಕೆ ವೈಭವ್ ಕಂಡರೆ ಇಷ್ಟು ಹೊಟ್ಟೆಕಿಚ್ಚು ಎನ್ನತೊಡಗಿದ್ದಾರೆ.
ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೈಭವ್ ಸೂರ್ಯವಂಶಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಅವರ ಬಗ್ಗೆ ದೊಡ್ಡ ಹೈಪ್ ಹುಟ್ಟಿಕೊಂಡಿದೆ, ಅವರನ್ನು ತಂಡಕ್ಕೆ ಕರೆತರುವ ವಿಷಯ ನಿಮಗೆ ಕಷ್ಟವಾಗಬಹುದು ಎಂಬ ಪ್ರಶ್ನೆಯನ್ನು ಹಾಕಿದರು.
ಇದಕ್ಕೆ ಉತ್ತರಿಸಿದ ಶ್ರೇಯಸ್ ಐಯ್ಯರ್ ‘ನನಗೆ ಅಂತಹ ಸಂಗತಿಗಳೇನು ಕಾಣಸಿಗುತ್ತಿಲ್ಲ ( ವೈಭವ್ ಸೂರ್ಯವಂಶಿ ಹೈಪ್ ಬಗ್ಗೆ ). ನಿಜವಾಗಿಯೂ ನನಗೆ ಗೊತ್ತಿಲ್ಲ. ನಾನು ಸುದ್ದಿಗಳನ್ನೂ ನೋಡುವುದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಏನು ನಡೆಯುತ್ತಿದೆ ಎಂಬುವುದನ್ನೂ ಸಹ ಗಮನಿಸುವುದಿಲ್ಲ’ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್‌ಗಳನ್ನು ಪ್ರಕಟಿಸಿ ಆಕ್ಟಿವ್ ಆಗಿರುವ ಶ್ರೇಯಸ್ ಐಯ್ಯರ್ ತನಗೆ ಏನೂ ಗೊತ್ತಿಲ್ಲ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು, ಇದು ವೈಭವ್ ಖ್ಯಾತಿಯ ಮೇಲೆ ಶ್ರೇಯಸ್‌ಗಿರುವ ಹೊಟ್ಟೆಕಿಚ್ಚು ಎಂದು ಕಾಲೆಳೆಯುತ್ತಿದ್ದಾರೆ.