LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಎಸ್‌ಐಆರ್ ನಡೆಸುತ್ತಿಲ್ಲ; ಎಚ್‌ಡಿಕೆ ಕಿಡಿ

ಬೆಂಗಳೂರು: ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ರಾಜ್ಯ ಸರಕಾರ ಕೇಂದ್ರೀಯ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಅಲ್ಲದೆ, ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ದೂರಿದ ಸಚಿವರು; ಈ ಬಗ್ಗೆ ಕೇಂದ್ರ ಚುನಾವಣಾ ಆಯುಕ್ತರಿಗೆ ಖುದ್ದು ನಾನೇ ಹೋಗಿ ದೂರು ನೋಡುತ್ತೇನೆ. ಇಡೀ ಎಸ್ ಐಆರ್ ಅಕ್ರಮದ ಮೂಲ ಸೂತ್ರದಾರಿ ಈ ರಾಜ್ಯದ ಮುಖ್ಯಮಂತ್ರಿಯೇ ಆಗಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ತುರ್ತು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಬೆಂಗಳೂರು ನಗರದ ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಎಸ್’ಐಆರ್’ನ ಅಕ್ರಮ ಪ್ರಕ್ರಿಯೆಯ ವಿಡಿಯೋ ದಾಖಲೆಗಳ ಮಾಹಿತಿ ನೀಡಿ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.

ಈ ಸರಕಾರವು ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತದೆ. ಅವರನ್ನು ಹೆದರಿಸಿ ಬೆದರಿಸಿ ತನಗೆ ಬೇಕಾದ ಹಾಗೆ ಎಸ್ಐಆರ್ ಮಾಡಿಸಿಕೊಳ್ಳುತ್ತಿದೆ. ಆದ್ದರಿಂದ ಈ ಕೂಡಲೇ ರಾಜ್ಯದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕು ಹಾಗೂ ಈವರೆಗೂ ಆಗಿರುವ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು. ರಾಮನಗರ ಬೆಂಗಳೂರ್ ನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಕೇಂದ್ರ ಸಚಿವರು ಆಗ್ರಹಪಡಿಸಿದರು.

ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ನೇರವಾಗಿ ಕ್ಷೇತ್ರದ ಶಾಸಕರ ಸೂಚನೆಯ ಮೇರೆಗೆ ಅಕ್ರಮವಾಗಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪರಿಷ್ಕರಣೆ ಸಿಬ್ಬಂದಿ ಪರಸ್ಪರ ಶಾಮೀಲಾಗಿ ಪುಷ್ಕರಣೆಯನ್ನು ಸಂಪೂರ್ಣವಾಗಿ ತಿರುಚುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ರಾಜ್ಯದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಹಾಗೂ ಸಿಬ್ಬಂದಿ ಮನೆಮನೆಗೂ ತೆರಳಿ ಮಾಹಿತಿ ಪಡೆಯುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಪರಿಷ್ಕರಣೆ ಸಿಬ್ಬಂದಿಯ ಮೇಲೆ ಒತ್ತಡ ತಂದು ತನಗೆ ಬೇಕಾದ ಹಾಗೆ ಮನಸೋ ಇಚ್ಛೆಯಂತೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿಸಿಕೊಳ್ಳುತ್ತಿದೆ. ಇದು ಕೇಂದ್ರೀಯ ಚುನಾವಣಾ ಆಯೋಗದ ಮಾರ್ಗಸೂಚಿಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ ಎಂದು ಅವರು ದೂರಿದರು.

ನಿನ್ನೆಯ ದಿನ ರಾಮನಗರದ ಛತ್ರದಲ್ಲಿ ಎಸ್ಐಆರ್ ಜಾತ್ರೆ ಮಾಡುತ್ತಿರುವ ದೃಶ್ಯಗಳನ್ನು ನಾನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆ. ಇವತ್ತು ಯಶವಂತಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಮಾಧ್ಯಮಗಳ ಮುಂದೆ ಇಡುತ್ತಿದ್ದೇನೆ. ಸ್ವತಃ ಕ್ಷೇತ್ರದ ಶಾಸಕರ ಫೋಟೋಗಳನ್ನು ಮುಂದಿಟ್ಟುಕೊಂಡು ಎಸ್ಐಆರ್ ಮಾಡಲಾಗುತ್ತಿದೆ. ಇದು ಯಾವ ಸೀಮೆಯ ಎಸ್ಐಆರ್ ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ ಅಲ್ಲಿನ ಶಾಸಕರು ರಾತ್ರೋರಾತ್ರಿ ಚೆನ್ನೈಗೆ ಕದ್ದು ಹೋಗಿ ತಮ್ಮ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದು ಹೇಳಿ ಬಿಜೆಪಿ ಸೇರಿಕೊಂಡರು. ಅಲ್ಲಿ ಮೂರು ವರ್ಷ ಸಚಿವರಾಗಿ ಅಧಿಕಾರ ಅನುಭವಿಸಿದ ಮೇಲೆ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಕಡೆ ವಾಲಿದ್ದಾರೆ. ಇದು ಯಾವ ರೀತಿಯ ಡೆವಲಪ್ಮೆಂಟ್ ರಾಜಕೀಯವು ನನಗೆ ಗೊತ್ತಿಲ್ಲ. ಪಾಪ.. ಅವರು ಬಹಳ ಚೆನ್ನಾಗಿ ಮಾತನಾಡುತ್ತಾರೆ ಎಂದು ಸಚಿವರು ಟೀಕಿಸಿದರು.

ಈಗ ಯಶವಂತಪುರದಲ್ಲಿ ಶಾಸಕರ ಪುಸ್ತಕಗಳು, ಅವರೇ ಕೊಟ್ಟ ಮತದಾರರ ಪಟ್ಟಿಯನ್ನು ಇಟ್ಟುಕೊಂಡು ಅಧಿಕಾರಿಗಳು ಎಸ್ ಐಆರ್ ಮಾಡುತ್ತಿದ್ದಾರೆ. ಈ ಸರಕಾರ ಎಲ್ಲಾ ಅಧಿಕಾರಿಗಳಿಗೆ ಹೀಗೆಯೇ ಎಸ್ ಐಆರ್ ಮಾಡಬೇಕು ಎಂದು ತಯಾರು ಮಾಡಿ ಕಳಿಸಿದ್ದಾರೆ. ಇವತ್ತು ಯಶವಂತಪುರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ನಿಯಮಗಳಿಗೆ ಶುದ್ಧವಾಗಿ ನಡೆಸುತ್ತಿದ್ದ ಅಧಿಕಾರಿಯನ್ನು ನಮ್ಮ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಇಳಿಸಿಕೊಂಡಿದ್ದಾರೆ. ಆ ಅಧಿಕಾರಿ ನಮ್ಮ ಕಾರ್ಯಕರ್ತರಲ್ಲಿ ಸಾರಿ ಎಂದು ಕೇಳುತ್ತಾರೆ. ಆಮೇಲೆ ಇನ್ನೊಬ್ಬ ಅಧಿಕಾರಿ ಬಂದು ವಿಡಿಯೋ ಮಾಡಬೇಡಿ ಎಂದು ಹೇಳುತ್ತಾರೆ ಎಂದು ಕೇಂದ್ರ ಸಚಿವರು ಹರಿಹಾಯ್ದರು.

ಮತದಾರರ ಹುಂಡಿಯನ್ನೇ ಕಳ್ಳತನ ಮಾಡಲು ಹೊರಟಿದ್ದಾರೆ!

ಮುಖ್ಯಮಂತ್ರಿಗಳು ಮಹಾನ್ ಎನ್ನುವಂತೆ ಭಾಷಣ ಬಿಗಿಯುತ್ತಾರೆ. ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಹುಂಡಿ ಕಳುವಿನ ಬಗ್ಗೆ ಮಾತಾಡುತ್ತಾರೆ. ಆದರೆ ಇವರೇ ಮಾಡುತ್ತಿರುವ ಮತದಾರರ ಪಟ್ಟಿಯ ಕಳುವಿನ ಬಗ್ಗೆ ಜಾಣಮೌನ ವಹಿಸುತ್ತಾರೆ. ಇವರು ನೇರವಾಗಿ ಮತದಾರರ ಹುಂಡಿಯನ್ನೇ ಕಳ್ಳತನ ಮಾಡಲು ಹೊರಟಿದ್ದಾರೆ. ಇದಕ್ಕೆ ಏನೆಂದು ಹೇಳಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಕೇಳಿದರು.

ಒಂದು ಕಡೆ ಸಂವಿಧಾನ ಪುಸ್ತಕ ತೆಗೆದುಕೊಂಡು ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಇನ್ನೊಂದು ಕಡೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸುತ್ತಾರೆ. ಸಂವಿಧಾನವನ್ನೇ ಬುಡಮೇಲು ಮಾಡುವ ಜನ ಇವರು. ಅಂತಹ ಕೆಲಸಗಳಲ್ಲಿ ಇವರದು ಎತ್ತಿದ ಕೈ. ಕುಣಿಗಲ್, ಪಾವಗಡ, ಅರಕಲಗೂಡು, ಇಂಡಿ ಮುಂತಾದ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಆಕ್ರಮಗಳನ್ನು ನಡೆಸುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ. ಈ ಸರಕಾರಕ್ಕೆ ಮರ್ಯಾದೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

2014ರಲ್ಲಿ ನರೇಂದ್ರ ಮೋದಿ ಅವರ ಪ್ರಧಾನಿಗಳಾಗಿ ಸಂಸತ್ ಭವನ ಪ್ರವೇಶ ಮಾಡುವಾಗ ಕಟ್ಟಡದ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿದಂತೆ ಈ ರಾಜ್ಯದ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿ ವಿಧಾನಸೌಧದ ಮೆಟ್ಟಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದನ್ನು ನೋಡಿ ಈ ವ್ಯಕ್ತಿಯಲ್ಲಿ ಏನೋ ಬದಲಾವಣೆ ಆಗಿರಬೇಕು ಎಂದುಕೊಂಡಿದ್ದೆ. ಆದರೆ ಅದು ಕೇವಲ ನಾಟಕ ಎಂಬುದು ತಿಳಿಯಲು ಹೆಚ್ಚು ದಿನ ಬೇಕಾಗಿಲ್ಲ. ರಾಜ್ಯದಲ್ಲಿ ಈ ಎಸ್ಐಆರ್ ಹಳ್ಳಹಿಡಿದು ಹೋಗುತ್ತಿರುವುದಕ್ಕೆ ಈ ವ್ಯಕ್ತಿಗೆ ಮೂಲ ಸೂತ್ರಧಾರಿ ಎನ್ನುವುದು ಗೊತ್ತಾಯಿತು. ಇವರಿಗೆ ಮಾನ ಮರ್ಯಾದೆ ಇಲ್ಲ. ಬಹಳ ಬೇಸರದಿಂದ ಈ ಮಾತು ಹೇಳುತ್ತಿದ್ದೇನೆ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.

ಇಷ್ಟೆಲ್ಲಾ ಅಕ್ರಮಗಳನ್ನು ನಡೆಸುತ್ತಿರುವುದು ಕಣ್ಣಿಗೆ ಕಾಣುತ್ತಿದ್ದರೂ ಪ್ರಜಾಸೇವಾ ಇಲಾಖೆ ಅಂತ ಮಾಡಿದ್ದಾರೆ. ಪ್ರಜಾಸೇವೆ ಎಂದರೆ ಮತದಾರರ ಪಟ್ಟಿಯನ್ನು ತಿರುಚುವುದಾ? ಇಂದು ತೀಕ್ಷ್ಣವಾಗಿ ಪ್ರಶ್ನಿಸಿದ ಅವರು; ಈವರೆಗೆ ಅಕ್ರಮಗಳನ್ನು ನಡೆಸಿರುವ ರಾಜ್ಯದ ಅಧಿಕಾರಿಗಳನ್ನೇ ಮುಂದುವರೆಸಿದರೆ ಆಗುವುದಿಲ್ಲ. ಇವರಿಂದ ಪರಿಷ್ಕರಣೆ ಪ್ರಕ್ರಿಯೆ ನಡೆದರೆ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬರುತ್ತದೆ ಎಂದು ಸಚಿವರು ಹೇಳಿದರು.

ಚುನಾವಣೆಯ ಬಗ್ಗೆ ಹೆಚ್ಡಿಕೆ ಒತ್ತಾಯ:

ನಾನು ಕೇಂದ್ರದ ಚುನಾವಣಾ ಆಯೋಗಕ್ಕೆ ಡಿಮಾಂಡ್ ಮಾಡುತ್ತೇನೆ, ರಾಮನಗರದ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ನಗರದ ಜಿಲ್ಲಾಧಿಕಾರಿ ಕಠಿಣ ಕ್ರಮ ಆಗಬೇಕು. ನಾವು ಜಿಲ್ಲಾಧಿಕಾರಿಗಳು, ನಮ್ಮ ಜವಾಬ್ದಾರಿಗಳೇನು ಎಂಬ ಕನಿಷ್ಠ ಪರಿಜ್ಞಾನ ಇವರಿಗೆ ಇದೆಯಾ? ನಾನೇ ಸ್ವತಃ ಕೇಂದ್ರದ ಚುನಾವಣಾ ಆಯುಕ್ತವನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು. ರಾಜ್ಯದ ಮತದಾರರ ಪಟ್ಟಿಯ ಪಟ್ಟಿಯ ಪರಿಷ್ಕರಣೆಯಿಂದ ಸ್ಥಳೀಯ ಅಧಿಕಾರಿಗಳನ್ನು ಹೊರಗಿಟ್ಟು ಹೊರಗಿನಿಂದ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ಮನಸ್ಸು ಇಚ್ಛೆ ಈ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂದು ಸಚಿವರು ದೂರಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BIG NEWS: ಮೊಬೈಲ್ ಆ್ಯಪ್ ಗಳಿಂದಲೇ ಇ-ರಿಕ್ಷಾ, ಇವಿಗಳಲ್ಲಿ ಬ್ಯಾಟರಿ ಸ್ಥಗಿತ: ಅಂತಹ ಅಪ್ಲಿಕೇಶನ್‌ ತೆಗೆದುಹಾಕಲು ಗೂಗಲ್, ಆಪಲ್‌ ಗೆ ಕೇಂದ್ರ ಸರ್ಕಾರ ಆದೇಶಅಯೋಧ್ಯೆ ಶ್ರೀರಾಮಮಂದಿರ ಕಳ್ಳತನದ ಬಗ್ಗೆ ಆರ್‌ಎಸ್‌ಎಸ್‌ ತೀವ್ರ ಖಂಡನೆಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಸಾರ್ವಜನಿಕರು ಯಾವುದೇ ನಕಲಿ ಸಂದೇಶ, ವದಂತಿಗಳಿಗೆ ಕಿವಿಗೊಡದಂತೆ ಮನವಿಮಂಡ್ಯ ಜಿಲ್ಲೆಯಲ್ಲಿ ಭೂ ಅಕ್ರಮ ಪರಭಾರೆ ಬೃಹತ್ ಜಾಲ ಬಯಲು: ಕಂದಾಯ ಇಲಾಖೆಯ 8 ಅಧಿಕಾರಿಗಳು ಅರೆಸ್ಟ್ಕಾಂಗ್ರೆಸ್ ಬಾಂಗ್ಲಾ ಜನರನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ನಡೆಸಿದೆ; ಅಶೋಕ್ ಗಂಭೀರ ಆರೋಪಇನ್‌ಸ್ಟಾಗ್ರಾಮ್‌ ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಜಾಹೀರಾತು: ಮೆಟಾ ಅಧಿಕಾರಿಗಳಿಗೆ ಕೇಂದ್ರದಿಂದ ಸಮನ್ಸ್ ಜಾರಿBREAKING: ಜು. 6 ರಿಂದ ಪ್ರಧಾನಿ ಮೋದಿ 3 ದೇಶಗಳ ಪ್ರವಾಸ: ಇಂಡೋನೇಷ್ಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾಕ್ಕೆ ಭೇಟಿBREAKING: ಲಂಚದ ಹಣ ಹಂಚಿಕೊಳ್ಳುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಂಜಿನಿಯರ್ ಗಳುಗೃಹಜ್ಯೋತಿ ಯೋಜನೆ ಮಾಹಿತಿ ಸಂಗ್ರಹಣೆ ವೇಳೆ ಜಾತಿ ಪ್ರವರ್ಗ ಮಾಹಿತಿ ನೀಡುವುದು ಕಡ್ಡಾಯವಲ್ಲ; ಬೆಸ್ಕಾಂ ಸ್ಪಷ್ಟನೆಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಎಸ್‌ಐಆರ್ ನಡೆಸುತ್ತಿಲ್ಲ; ಎಚ್‌ಡಿಕೆ ಕಿಡಿ