ಶಿವಮೊಗ್ಗ: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಲು ವಿಶೇಷ ಸಮಗ್ರ ಪರಿಷ್ಕರಣೆ-2026ನ್ನು ದೇಶದ 13ರಾಜ್ಯಗಳಲ್ಲಿ ಆರಂಭಿಸಿದ್ದು, ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗಳಿಗೆ ಈ ಕುರಿತು ವಿವರ ನೀಡಿ ಮಾತನಾಡಿದ ಅವರು, ಎಲ್ಲಾ ಅರ್ಹ ನಾಗರೀಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು. ಈ ವಿಶೇಷ ಸಮಗ್ರ ಪರಿಷ್ಕರಣೆಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಅರ್ಹರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬೇಕು. ಗೈರು ಮತದಾರರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತರಾದವರು ಹಾಗೂ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ಮತದಾರರಾಗಿ ನೋಂದಣಿಯಾಗಿರುವ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಾಗುತ್ತದೆ ಎಂದರು.
ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳಿದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ಈ ಪ್ರಯುಕ್ತ ಬೂತ್ ಮಟ್ಟದ ಅಧಿಕಾರಿಗಳು ಜುಲೈ 29 ರವರೆಗೆ ಮನೆಮನೆಗೆ ತೆರಳಿ ಗಣತಿ ನಮೂನೆಯನ್ನು ವಿತರಿಸಲಿದ್ದಾರೆ. ಜಿಲ್ಲೆಯಲ್ಲಿ 15,19,459 ಮತದಾರರಿದ್ದು, 1973 ಮತಗಟ್ಟೆಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಈವರೆಗೆ 575101 ನಮೂನೆಗಳನ್ನು ವಿತರಿಸಲಾಗಿದ್ದು, ಆ ಪೈಕಿ 11248ನಮೂನೆಗಳನ್ನು ಡಿಜಟಲೀಕರಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಮತದಾರರು ಗಣತಿ ನಮೂನೆಯನ್ನು ಸ್ವೀಕರಿಸಿದ ನಂತರ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ನೀಡಬೇಕು. ಗಣತಿ ನಮೂನೆಯನ್ನು ಭರ್ತಿ ಮಾಡಿ ನೀಡದೇ ಹೋದಲ್ಲಿ ಮತದಾರರ ಕರಡು ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ. ಆದ್ದರಿಂದ ಎಲ್ಲಾ ಮತದಾರರು ರೀತಿಯ ನಿರ್ಲಕ್ಷ್ಯ ಮಾಡದೇ ಮತದಾರರ ಪಟ್ಟಿಯಲ್ಲಿ ಹೆಸರು ಇರುವಂತೆ ನೋಡಿಕೊಳ್ಳಲು ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಬೇಕು. ಅದರೊಂದಿಗೆ ಮತಗಟ್ಟೆ ಏಜೆಂಟರುಗಳೂ ಸಹ ಈ ನಮೂನೆಗಳನ್ನು ಸಂಗ್ರಹಿಸಿ, ಮತಗಟ್ಟೆ ಅಧಿಕಾರಿಗಳಿಗೆ ತಲುಪಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದರು.
ಈ ಮಾಹಿತಿ ಒದಗಿಸುವ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ. ಪೂರಕ ಮಾಹಿತಿಯನ್ನು ಮತದಾರರು ಗಣತಿದಾರರಿಗೆ ನೀಡಿದಲ್ಲಿ ತಮ್ಮ ಹಿಂದಿನ ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಈಗಾಗಲೇ ಮ್ಯಾಪಿಂಗ್ ಮಾಡಿಟ್ಟುಕೊಂಡಿರುತ್ತಾರೆ. ಇದರಿಂದಾಗಿ ಪರಿಷ್ಕರಣೆ ಕಾರ್ಯ ಸುಗಮವಾಗಿರಲಿದೆ ಎಂದರು.
ಪ್ರತಿದಿನ ಪರಿಷ್ಕರಣೆ ಕಾರ್ಯದ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ವದಂತಿಗಳು, ಮೊಬೈಲ್‌ನಲ್ಲಿ ಹರಿದಾಡುವ ನಕಲಿ ಸಂದೇಶಗಳಿಗೆ ಕಿವಿಗೊಡದಂತೆ ಮನವಿ ಮಾಡಿರುವ ಅವರು, ಮತದಾರರಲ್ಲಿನ ಅನೇಕ ಪ್ರಶ್ನೆಗಳಿಗೆ ಮತಗಟ್ಟೆ ಅಧಿಕಾರಿಗಳಲ್ಲೇ ಸೂಕ್ತ ಮಾಹಿತಿ ದೊರೆಯಲಿದೆ. ಅಗತ್ಯವಿದ್ದಲ್ಲಿ ಟೋಲ್ ಫ್ರೀ ನಂ.1950ನ್ನು ಸಂಪರ್ಕಿಸಬಹುದಾಗಿದೆ ಎಂದರು.
ಮ್ಯಾಪಿಂಗ್ ಆಗದ ಮತದಾರರು ಸರ್ಕಾರ ಗುರುತಿಸಿದ 12 ದಾಖಲೆಗಳ ಪೈಕಿ ಯಾವುದಾದರೊಂದನ್ನು ಒದಗಿಸಬಹುದಾಗಿದೆ. ಮತಗಟ್ಟೆಗಳ ಪುನರ್ ವಿಂಗಡಣೆಯನ್ನು ಜುಲೈ 29 ರೊಳಗೆ ಮಾಡಲಾಗುವುದು. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಯಾವುದೇ ಮತದಾರರ ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್ 05 ರಿಂದ ಸೆಪ್ಟೆಂಬರ್ 04 ರವರೆಗೆ ಅಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು ಆಗಸ್ಟ್ 5 ರಿಂದ ಅಕ್ಟೋಬರ್ 3 ರವರೆಗೆ ಇತ್ಯರ್ಥ ಪಡಿಸಲಾಗುವುದು. 2026ರ ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಚುನಾವಣಾ ತಹಶೀಲ್ದಾರ್ ಮಂಜುಳಾ ಹೆಗಡಾಳ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.