ಕೊಪ್ಪಳ ಜಿಲ್ಲೆಯ ಗುನ್ನಾಳ ಗ್ರಾಮದಲ್ಲಿ ನೂತನ ಪದವಿಪೂರ್ವ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ತಮ್ಮ ಮಾತು ಕೇಳದ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಕೆಲಸದಿಂದ ವಜಾಗೊಳಿಸುವುದಾಗಿ (ಫೈರ್) ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯು ಅತ್ಯಂತ ಹೆಚ್ಚಿನ ಕಾರ್ಯಭಾರವಿರುವ ಇಲಾಖೆಯಾಗಿದ್ದು, ರಾಜ್ಯದಲ್ಲಿ 96 ವಿಶ್ವವಿದ್ಯಾಲಯಗಳು ಹಾಗೂ 1.52 ಕೋಟಿ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ತಾವು ಸದಾ ಕೆಲಸದೊತ್ತಡದಲ್ಲಿ ಇರುತ್ತೇನೆ. ಆದ್ದರಿಂದ ಪತ್ರಗಳಿಗೆ ಡಿಜಿಟಲ್ ಸಿಗ್ನೇಚರ್ (ಡಿಜಿಟಲ್ ಸಹಿ) ಬಳಸಿ ನೀಡುವಂತೆ ವೇದಿಕೆ ಮೇಲಿಂದಲೇ ತಮ್ಮ ಆಪ್ತ ಸಹಾಯಕರಿಗೆ (ಪಿಎ) ಸೂಚನೆ ನೀಡಿದರು. ಅಲ್ಲದೆ, ಯಲಬುರ್ಗಾ ತಹಶೀಲ್ದಾರ್ ಪ್ರಕಾಶ್ ನಾಶಿ ಅವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ತಾವು ಸದಾ ಕಾರ್ಯನಿರತರಾಗಿರುವುದರಿಂದ ತಹಶೀಲ್ದಾರ್ ಅವರೇ ತಮ್ಮ ಸಾರ್ವಜನಿಕ ಸಂಪರ್ಕಾಧಿಕಾರಿಯಂತೆ (ಪಿಆರ್‌ಓ) ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು. ಇದೇ ವೇಳೆ ಇಲಾಖೆಯಲ್ಲಿ ಯಾರು ಮಾತು ಕೇಳುವುದಿಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರುವಂತೆಯೂ ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿದ್ದ ಗೊಂದಲಗಳಿಗೆ ಸಚಿವರು ತೆರೆ ಎಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಕಾರಣಕ್ಕೂ ನಿಲ್ಲಿಸುವುದಿಲ್ಲ ಹಾಗೂ ಆ ಎಲ್ಲಾ ಯೋಜನೆಗಳು ಮುಂದೆಯೂ ನಿರಂತರವಾಗಿ ಮುಂದುವರಿಯಲಿವೆ ಎಂದು ಅವರು ವೇದಿಕೆ ಮೂಲಕ ಜನತೆಗೆ ಸ್ಪಷ್ಟಪಡಿಸಿದರು.