ಆರ್ಥಿಕ ಅಗತ್ಯಗಳಿಗಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯುವಾಗ ಹಲವರಿಗೆ ಜಾಮೀನುದಾರರ (ಗ್ಯಾರಂಟರ್) ಅವಶ್ಯಕತೆ ಇರುತ್ತದೆ. ಆದರೆ, ಬೇರೆಯವರ ಸಾಲಕ್ಕೆ ಜಾಮೀನು ಸಹಿ ಹಾಕಲು ಹೆಚ್ಚಿನವರು ಹಿಂದೇಟು ಹಾಕುತ್ತಾರೆ. ಸಾಲ ಪಡೆದ ವ್ಯಕ್ತಿ ಸರಿಯಾಗಿ ಹಣ ಮರುಪಾವತಿ ಮಾಡದಿದ್ದರೆ ಆ ಹೊರೆ ಎಲ್ಲಿ ತಮ್ಮ ಮೇಲೆಯೇ ಬೀಳುತ್ತದೆಯೋ ಎಂಬ ಭಯವೇ ಇದಕ್ಕೆ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ, ಸಾಲ ಮರುಪಾವತಿಯಾಗದಿದ್ದಾಗ ಗ್ಯಾರಂಟರ್‌ಗಳ ಮೇಲೆ ಬೀರುವ ಪರಿಣಾಮಗಳೇನು ಮತ್ತು ನಿಯಮಗಳೇನು ಎಂಬ ಸಂಪೂರ್ಣ ವಿವರ ಇಲ್ಲಿದೆ.
ಸಾಲ ಪಡೆದ ವ್ಯಕ್ತಿಯು ನಿಗದಿತ ಸಮಯಕ್ಕೆ ಇಎಂಐ ಅಥವಾ ಸಾಲವನ್ನು ಮರುಪಾವತಿ ಮಾಡದಿದ್ದರೆ, ಆ ಸಂಪೂರ್ಣ ಜವಾಬ್ದಾರಿ ಜಾಮೀನುದಾರನ ಹೆಗಲೇರುತ್ತದೆ. ಕೇವಲ ಹೆಸರಿಗೆ ಸಹಿ ಹಾಕಿದರೆ ಮುಗಿಯಿತು ಅಂದುಕೊಂಡರೆ ಅದು ತಪ್ಪು ಕಲ್ಪನೆ. ಭಾರತೀಯ ಒಪ್ಪಂದ ಕಾಯ್ದೆಯ (Indian Contract Act) ಸೆಕ್ಷನ್ 128ರ ಪ್ರಕಾರ, ಸಾಲಗಾರನಷ್ಟೇ ಜಾಮೀನುದಾರನಿಂದಲೂ ಹಣ ವಸೂಲಿ ಮಾಡುವ ಸಂಪೂರ್ಣ ಹಕ್ಕು ಬ್ಯಾಂಕ್‌ಗಳಿಗೆ ಇರುತ್ತದೆ. ಅಸಲು ಮೊತ್ತ ಮಾತ್ರವಲ್ಲದೆ, ಅದಕ್ಕೆ ತಗಲುವ ಬಡ್ಡಿ ಮತ್ತು ದಂಡದ ಮೊತ್ತವನ್ನೂ ಜಾಮೀನುದಾರನೇ ಭರಿಸಬೇಕಾಗುತ್ತದೆ.
ಇದರಿಂದ ಜಾಮೀನುದಾರರ ಕ್ರೆಡಿಟ್ ಸ್ಕೋರ್ (CIBIL) ತೀವ್ರವಾಗಿ ಕುಸಿಯುತ್ತದೆ. ಪರಿಣಾಮವಾಗಿ, ಭವಿಷ್ಯದಲ್ಲಿ ಗ್ಯಾರಂಟರ್ ಸ್ವತಃ ಗೃಹ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲ ಪಡೆಯಲು ಅರ್ಜಿ ಸಲ್ಲಿಸಿದರೆ ಬ್ಯಾಂಕ್‌ಗಳು ಅದನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಜಾಮೀನು ಸಹಿ ಹಾಕುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು:
ಸಾಲ ಪಡೆಯುತ್ತಿರುವ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಆದಾಯದ ಮೂಲ ಮತ್ತು ಹಿಂದಿನ ಸಾಲ ಮರುಪಾವತಿಯ ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸಿ.
ಒಟ್ಟು ಸಾಲದ ಮೊತ್ತ, ಬಡ್ಡಿದರ ಮತ್ತು ತಿಂಗಳ ಇಎಂಐ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
ನೀವು ನೀಡುತ್ತಿರುವ ಗ್ಯಾರಂಟಿ ಸೀಮಿತ ಮೊತ್ತಕ್ಕೋ ಅಥವಾ ಸಂಪೂರ್ಣ ಸಾಲದ ಹೊಣೆಗಾರಿಕೆಗೋ ಎಂಬುದನ್ನು ಖಚಿತಪಡಿಸಿಕೊಳ್ಳಿ.
ದಾಖಲೆಗಳನ್ನು ಸರಿಯಾಗಿ ಓದದೆ, ಕೇವಲ ಸ್ನೇಹ ಅಥವಾ ಪರಿಚಯದ ಮುಲಾಜಿಗೆ ಬಿದ್ದು ಸಹಿ ಹಾಕಬೇಡಿ.
ಸಾಲ ಪಡೆದ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಸಾಮರ್ಥ್ಯವಿಲ್ಲ ಎಂಬ ಅನುಮಾನವಿದ್ದರೆ, ಅಂಥವರಿಗೆ ಗ್ಯಾರಂಟರ್ ಆಗದಿರುವುದೇ ಆರ್ಥಿಕ ಸುರಕ್ಷತೆಯ ದೃಷ್ಟಿಯಿಂದ ಉತ್ತಮ.