ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ನೌಕರರಿಗೆ ಮಹತ್ವದ ಮತ್ತು ತುರ್ತು ಸಂದೇಶವೊಂದನ್ನು ರವಾನಿಸಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಗೆ (KASS) ಪ್ರತಿಯೊಬ್ಬ ನೌಕರರು ಮತ್ತು ಅವರ ಕುಟುಂಬ ಸದಸ್ಯರ ವಿವರಗಳನ್ನು ಎಚ್‌ಆರ್‌ಎಂಎಸ್ 1 (HRMS 1) ತಂತ್ರಾಂಶದಲ್ಲಿ ಕಡ್ಡಾಯವಾಗಿ ನಮೂದಿಸುವಂತೆ ಅವರು ಕರೆ ನೀಡಿದ್ದಾರೆ.
ಈಗಾಗಲೇ ನೌಕರರ ವೇತನದಿಂದ ಮಾಸಿಕ ವಂತಿಗೆ ಕಡಿತಗೊಳ್ಳುತ್ತಿದ್ದರೂ, ರಾಜ್ಯದ ಸುಮಾರು 1,98,936 ನೌಕರರು (ಶೇಕಡಾ 35ಕ್ಕೂ ಹೆಚ್ಚು) ಇನ್ನೂ ತಮ್ಮ ಮತ್ತು ಕುಟುಂಬಸ್ಥರ ಆಧಾರ್ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿಲ್ಲ. ಮುಂಬರುವ ತಿಂಗಳಿಂದ ಎಚ್‌ಆರ್‌ಎಂಎಸ್ 1 ತಂತ್ರಾಂಶ ಸ್ಥಗಿತಗೊಳ್ಳಲಿದ್ದು, ನೌಕರರು ತಮ್ಮ ವಿವರ ನಮೂದಿಸಲು ಇದೇ ತಿಂಗಳ 30 ಕೊನೆಯ ದಿನವಾಗಿದೆ. ತಂತ್ರಾಂಶದಲ್ಲಿ ಕುಟುಂಬದ ವಿವರಗಳು ದಾಖಲಾಗದಿದ್ದರೆ ತುರ್ತು ಸಂದರ್ಭಗಳಲ್ಲಿ ಅಥವಾ ಅನಾರೋಗ್ಯದ ಸಮಯದಲ್ಲಿ ನಗದು ರಹಿತ ಚಿಕಿತ್ಸೆ (Free Treatment) ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಈಗಾಗಲೇ ನೋಂದಣಿ ಮಾಡಿಸದ ನೌಕರರ ಪಟ್ಟಿಯನ್ನು (ಹೆಸರು, ಕೆಜಿಐಡಿ ಸಂಖ್ಯೆ ಮತ್ತು ಕಚೇರಿ ವಿವರಗಳ ಸಮೇತ) ಜಿಲ್ಲೆ, ತಾಲೂಕು ಮತ್ತು ಇಲಾಖಾವಾರು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ನೌಕರರು ತಕ್ಷಣವೇ ತಮ್ಮ ಇಲಾಖೆಯ ಡಿಡಿಒ (DDO) ಅಥವಾ ಡ್ರಾಯಿಂಗ್ ಅಧಿಕಾರಿಯನ್ನು ಸಂಪರ್ಕಿಸಿ ಕುಟುಂಬದ ವಿವರ ಹಾಗೂ ಆಧಾರ್ ಮಾಹಿತಿಯನ್ನು ಅಪ್‌ಲೋಡ್ ಮಾಡಿಕೊಳ್ಳಬೇಕು.
ಅದೇ ರೀತಿ ಸಂಘದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಚುನಾಯಿತ ನಿರ್ದೇಶಕರು ತುರ್ತು ಸಭೆ ನಡೆಸಿ, ಕಚೇರಿಗಳಿಗೆ ಭೇಟಿ ನೀಡಿ ಶೇಕಡಾ 100ರಷ್ಟು ಪ್ರಗತಿ ಸಾಧಿಸಬೇಕು ಮತ್ತು ಆ ವರದಿಯನ್ನು ರಾಜ್ಯ ಸಂಘಕ್ಕೆ ಸಲ್ಲಿಸಬೇಕೆಂದು ಷಡಾಕ್ಷರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಭವಿಷ್ಯದಲ್ಲಿ ಉಚಿತ ವೈದ್ಯಕೀಯ ಸೇವೆ ಹಾಗೂ ಹೊಸ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗದಂತೆ ನೌಕರರು ಈ ಕೊನೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ವಿನಂತಿಸಿದ್ದಾರೆ.