ಬೆಂಗಳೂರು: ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಲಿಯುವ, ಸ್ಪರ್ಧಿಸುವ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ಸಮಾನ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಹಲವು ಕ್ರಾಂತಿಕಾರಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣ ಹಾಗೂ ಭವಿಷ್ಯದ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
ಪ್ರಮುಖ ಶೈಕ್ಷಣಿಕ ಯೋಜನೆಗಳ ಮುಖ್ಯಾಂಶಗಳು:
1. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದಲ್ಲಿ ಒಳಮೀಸಲಾತಿ:
1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ, ಪ್ರಸ್ತುತ ಚಾಲ್ತಿಯಲ್ಲಿರುವ ಶೇ. 15 ರಷ್ಟು ಗ್ರಾಮೀಣ ಕೋಟಾದಲ್ಲಿ ಶೇ. 7.5 ರಷ್ಟು ಒಳಮೀಸಲಾತಿ ಕಲ್ಪಿಸಲಾಗಿದೆ.
ಈ ಸೌಲಭ್ಯವು ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ಉನ್ನತ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅನ್ವಯವಾಗಲಿದ್ದು, ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಹೊಸ ಹೆಬ್ಬಾಗಿಲು ತೆರೆದಿದೆ.
2. ಗ್ರಾಮೀಣ ಭಾಗದಲ್ಲಿ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಸ್ಥಾಪನೆ:
ಗ್ರಾಮೀಣ ಕರ್ನಾಟಕದ ಮಕ್ಕಳಿಗೆ ಅತ್ಯುತ್ಕೃಷ್ಟ ಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ಬದ್ಧವಾಗಿದೆ.
ಸರ್ಕಾರ ಮತ್ತು ಸಿಎಸ್‌ಆರ್ (CSR) ಸಹಯೋಗದೊಂದಿಗೆ ರಾಜ್ಯಾದ್ಯಂತ ೧,೦೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ಮಾದರಿ ಶಾಲೆಗಳಾಗಿ ಸ್ಥಾಪಿಸಿ, ಅಭಿವೃದ್ಧಿಪಡಿಸಲಾಗುತ್ತಿದೆ.
3. 'ಸಿಎಂ ವಿದ್ಯಾರ್ಥಿ ಸಹಾಯ ಹಸ್ತ' – ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಲ:
ಐಐಟಿ ಹಾಗೂ ನೀಟ್ (NEET): ಪ್ರಮುಖ ಪ್ರವೇಶ ಪರೀಕ್ಷೆಗಳಿಗೆ ೩ ತಿಂಗಳ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಆನ್‌ಲೈನ್ ತರಬೇತಿ ಮತ್ತು ಕೌನ್ಸೆಲಿಂಗ್ ವ್ಯವಸ್ಥೆ.
ಸರ್ಕಾರಿ ನೇಮಕಾತಿ ಪರೀಕ್ಷೆಗಳು: ವಿವಿಧ ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷೆಯ ೩ ತಿಂಗಳ ಮೊದಲೇ ವಿಶೇಷ ಆನ್‌ಲೈನ್ ಕೋಚಿಂಗ್ ನೀಡಲಾಗುತ್ತದೆ.
ಯುಪಿಎಸ್‌ಸಿ ಪ್ರಿಲಿಮ್ಸ್ ಉತ್ತೀರ್ಣರಿಗೆ ನೆರವು: ಯುಪಿಎಸ್‌ಸಿ (UPSC) ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸರ್ಕಾರಿ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳಲ್ಲಿ ಮುಖ್ಯ ಪರೀಕ್ಷೆಯ ತರಬೇತಿ ಶುಲ್ಕವನ್ನು ಸರ್ಕಾರವೇ ಮರುಪಾವತಿ ಮಾಡಲಿದೆ.
ಸರ್ಕಾರದ ಆಶಯ:
"ಗ್ರಾಮೀಣ ಭಾಗಗಳಲ್ಲಿ ಕಲಿಕಾ ಅವಕಾಶಗಳನ್ನು ಹೆಚ್ಚಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಕಟ್ಟಕಡೆಯ ವಿದ್ಯಾರ್ಥಿಗೂ ತಲುಪಿಸುವುದು ಮತ್ತು ಯುವಜನರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸರ್ಕಾರದ ದೃಢ ಸಂಕಲ್ಪವಾಗಿದೆ."