ಬೆಂಗಳೂರು : ಭೂಮಿಯ ಮೇಲೆ ನಾನಾ ಜಾತಿಯ ಹಾವುಗಳಿದ್ದು, ಅವುಗಳಲ್ಲಿ ಕೆಲವು ಅತ್ಯಂತ ವಿಷಪೂರಿತವಾಗಿವೆ. ಪ್ರಸ್ತುತ ಪ್ರಾಣಿಗಳ ರಕ್ತದಿಂದ ತಯಾರಿಸಿದ ಆ್ಯಂಟಿ-ವೆನಮ್ ಅನ್ನೇ ಹಾವು ಕಡಿತಕ್ಕೆ ಚಿಕಿತ್ಸೆಯಾಗಿ ಬಳಸಲಾಗುತ್ತಿದೆ. ಆದರೆ, ಈ ಶತಮಾನಗಳ ಹಳೆಯ ಸಂಪ್ರದಾಯಕ್ಕೆ ತೆರೆ ಎಳೆದಿರುವ ವಿಜ್ಞಾನಿಗಳು, ಲ್ಯಾಬ್‌ನಲ್ಲೇ ಬಯೋಟೆಕ್ನಾಲಜಿ ನೆರವಿನಿಂದ 'ರೀಕಾಂಬಿನೆಂಟ್ ಆ್ಯಂಟಿ-ವೆನಮ್' ಎಂಬ ಹೊಸ ವಿಷ ನಿರೋಧಕವನ್ನು ಸಿದ್ಧಪಡಿಸಿದ್ದಾರೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯದ (DTU) ಸಂಶೋಧಕರು ಜಂಟಿಯಾಗಿ ಈ ಸಂಶೋಧನೆ ನಡೆಸಿದ್ದಾರೆ. ಇಲಿಗಳ ಮೇಲೆ ನಡೆಸಿದ ಈ ಪ್ರಯೋಗದಲ್ಲಿ ಹೊಸ ಆ್ಯಂಟಿ-ವೆನಮ್, ನಾಗರಹಾವು ಹಾಗೂ ರಕ್ತಪಿಂಜರಗಳ ವಿಷವನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ.
100 ವರ್ಷಗಳ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು
ಕಳೆದ ಒಂದು ಶತಮಾನದಿಂದ ಕುದುರೆ ಅಥವಾ ಕುರಿಗಳಿಗೆ ಹಾವಿನ ವಿಷವನ್ನು ಚುಚ್ಚಿ, ಅವುಗಳಲ್ಲಿ ಉತ್ಪತ್ತಿಯಾಗುವ ಆ್ಯಂಟಿಬಾಡಿಗಳ ಮೂಲಕ ಆ್ಯಂಟಿ-ವೆನಮ್ ತಯಾರಿಸಲಾಗುತ್ತಿದೆ. ಆದರೆ ಈ ಪದ್ಧತಿಯಿಂದ ಅಡ್ಡಪರಿಣಾಮಗಳು ಹೆಚ್ಚು, ಉತ್ಪಾದನಾ ವೆಚ್ಚ ದುಬಾರಿ ಹಾಗೂ ಒಂದು ಜಾತಿಯ ಹಾವಿನ ವಿಷಕ್ಕೆ ತಯಾರಿಸಿದ ಔಷಧ ಮತ್ತೊಂದು ಜಾತಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಎರಡು ಜಾತಿಯ ನಾಗರಹಾವಿನ ವಿಷ ನಿಷ್ಕ್ರಿಯ
ಸಂಶೋಧಕರು ಒಂಟೆ ಜಾತಿಗೆ ಸೇರಿದ ಪ್ರಾಣಿಗಳಲ್ಲಿ ಆಫ್ರಿಕನ್ ಹಾವಿನ ವಿಷದ ಮೂಲಕ ಉತ್ಪತ್ತಿಯಾದ ಆ್ಯಂಟಿಬಾಡಿಗಳ ಹಗುರವಾದ ಭಾಗಗಳನ್ನು ಬೇರ್ಪಡಿಸಿ, ಐದು ನ್ಯಾನೋಬಾಡಿಗಳ ಕಾಕ್‌ಟೇಲ್ (ಮಿಶ್ರಣ) ರೂಪಿಸಿದ್ದಾರೆ. ಈ ಮಿಶ್ರಣವನ್ನು ಭಾರತದಲ್ಲಿ ಹೆಚ್ಚಾಗಿ ಕಂಡುಬರುವ 'ಸ್ಪೆಕ್ಟಿಕಲ್ಡ್ ಕೋಬ್ರಾ' ಮತ್ತು 'ಮೊನೊಕ್ಲ್ಡ್ ಕೋಬ್ರಾ'ಗಳ ವಿಷದ ಮೇಲೆ ಪರೀಕ್ಷಿಸಲಾಗಿದ್ದು, ಅದು ವಿಷದ ಪರಿಣಾಮವನ್ನು ಸುಲಭವಾಗಿ ತಟಸ್ಥಗೊಳಿಸಿದೆ.
ಇಲಿಗಳ ಮೇಲಿನ ಪ್ರಯೋಗ ಯಶಸ್ವಿ
ಪ್ರಯೋಗಾಲಯದಲ್ಲಿ ಇಲಿಗಳಿಗೆ ಮೊದಲು ಹಾವಿನ ವಿಷವನ್ನು ನೀಡಿ, ನಂತರ ಈ ಆ್ಯಂಟಿಬಾಡಿ ಕಾಕ್‌ಟೇಲ್ ಅನ್ನು ಇಂಜೆಕ್ಟ್ ಮಾಡಲಾಯಿತು. ಅಚ್ಚರಿಯೆಂದರೆ, ವಿಷ ನೀಡಿದ ಅರ್ಧ ಗಂಟೆಯ ನಂತರ ಚಿಕಿತ್ಸೆ ನೀಡಿದರೂ ಇಲಿಗಳು ಅಪಾಯದಿಂದ ಪಾರಾಗಿವೆ. ವಿಷದ ತೀವ್ರತೆಯಿಂದ ನರ ದೌರ್ಬಲ್ಯ ಮತ್ತು ಪಾರ್ಶ್ವವಾಯು ಲಕ್ಷಣಗಳು ಕಾಣಿಸಿಕೊಂಡಿದ್ದ ಇಲಿಗಳು ಕೂಡ ಅತ್ಯಂತ ವೇಗವಾಗಿ ಗುಣಮುಖವಾಗಿವೆ ಎಂದು ಐಐಎಸ್‌ಸಿ ಸಹ ಪ್ರಾಧ್ಯಾಪಕ ಕಾರ್ತಿಕ್ ತಿಳಿಸಿದ್ದಾರೆ.
ಮುಂದಿನ ಪೀಳಿಗೆಗೆ ಸಂಜೀವಿನಿ
ಪ್ರಸ್ತುತ ಆ್ಯಂಟಿ-ವೆನಮ್ ತಯಾರಿಕೆಗೆ ಪ್ರಾಣಿಗಳನ್ನು ಪದೇ ಪದೇ ಹಿಂಸೆಗೆ ಒಳಪಡಿಸಬೇಕಾದ ಅನಿವಾರ್ಯತೆಯಿದೆ. ಆದರೆ ಬ್ಯಾಕ್ಟೀರಿಯಾ ಅಥವಾ ಕೃತಕ ವ್ಯವಸ್ಥೆಗಳ ಮೂಲಕ ಪ್ರಯೋಗಾಲಯದಲ್ಲೇ ಬೃಹತ್ ಪ್ರಮಾಣದಲ್ಲಿ ಈ ಹೊಸ ಔಷಧವನ್ನು ಉತ್ಪಾದಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ಹಾವು ಕಡಿತದಿಂದ ಹೆಚ್ಚಿನ ಸಾವು-ನೋವುಗಳು ಸಂಭವಿಸುವ ಭಾರತದಂತಹ ದೇಶಗಳಲ್ಲಿ ಈ ಹೊಸ ಆವಿಷ್ಕಾರವು ಜೀವ ಉಳಿಸುವ ಸಂಜೀವಿನಿಯಾಗಲಿದೆ.