ರಾಮನಗರ: ಕನಕಪುರದಲ್ಲಿ ನಾಳೆ ನಡೆಯಲಿರುವ ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಂದು ಕನಕಪುರದ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮಾರ್ಗಮಧ್ಯೆ ಕನಕಪುರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಬಿಸಿಎಂ) ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಯಾವುದೇ ಮುನ್ಸೂಚನೆ ಇಲ್ಲದೆ ಹಾಸ್ಟೆಲ್‌ಗೆ ಆಗಮಿಸಿದ ಸಿಎಂ, ಅಲ್ಲಿನ ಮೂಲಸೌಕರ್ಯ ಹಾಗೂ ಶೈಕ್ಷಣಿಕ ವಾತಾವರಣವನ್ನು ಖುದ್ದಾಗಿ ಪರಿಶೀಲನೆ ನಡೆಸಿದರು.
ಹಾಸ್ಟೆಲ್‌ನಲ್ಲಿದ್ದ ವ್ಯವಸ್ಥೆಗಳ ಕುರಿತು ಸ್ವತಃ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ಬಳಿಕ ವಿದ್ಯಾರ್ಥಿಗಳೊಂದಿಗೆ ಕುಳಿತು ರಾಗಿಮುದ್ದೆ ಊಟ ಸವಿದರು. ಊಟ ಮಾಡುವ ವೇಳೆ ವಿದ್ಯಾರ್ಥಿಗಳ ಕ್ಷೇಮಸಮಾಚಾರ ವಿಚಾರಿಸಿ, ಹಾಸ್ಟೆಲ್‌ನಲ್ಲಿ ಸಿಗುತ್ತಿರುವ ಊಟದ ಗುಣಮಟ್ಟ ಮತ್ತು ಇತರ ಸೌಲಭ್ಯಗಳ ಬಗ್ಗೆ ಮುಕ್ತವಾಗಿ ಮಾತುಕತೆ ನಡೆಸಿದರು.
ಸಿಎಂ ಅವರ ಈ ಅನಿರೀಕ್ಷಿತ ಭೇಟಿಯ ವೇಳೆ ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದು, ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು. ಊಟದ ನಂತರ ಕನಕಪುರದ ತಮ್ಮ ನಿವಾಸಕ್ಕೆ ತೆರಳಿದ ಡಿ.ಕೆ. ಶಿವಕುಮಾರ್ ಅವರು ಇಂದು ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.