ವಿಜಯಪುರ: "ಮುಂದೆ ಹೇಗೆ ಶಾಸಕರಾಗುತ್ತೀರಿ ಎಂದು ಧಮ್ಕಿ ಹಾಕಿದರೆ ಇಲ್ಲಿ ನಡೆಯುವುದಿಲ್ಲ. ನಿಮ್ಮ ಹಾಗೆ ಹುಚ್ಚರಂತೆ ಮಾತನಾಡಲು ನನಗೆ ಬರುವುದಿಲ್ಲ" ಎಂದು ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಬಳಿ ಸಿಕ್ಕಾಪಟ್ಟೆ ಹಣವಿದೆ ಎಂಬ ಅಹಂಕಾರ ಸಚಿವರಿಗಿದೆ. ಹಿಂದೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಣ ನೀಡಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದ ಎಂ.ಬಿ. ಪಾಟೀಲ್, ಈಗ ಬಿ. ವೈ. ವಿಜಯೇಂದ್ರ ಅವರಿಗೆ ಹಣ ಕೊಟ್ಟು ಕ್ಯಾಂಡಿಡೇಟ್ ಹಾಕಿ ಗೆದ್ದು ಬರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಶಾಸಕ ಯತ್ನಾಳ್ ತಮ್ಮ ರಾಜಕೀಯ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದು, ಸಚಿವ ಎಂ.ಬಿ. ಪಾಟೀಲ್‌ಗೆ ನೇರ ಸವಾಲು ಎಸೆದಿದ್ದಾರೆ. "ಮುಂದಿನ ವಿಧಾನಸಭಾ ಚುನಾವಣೆಯ ನಂತರ ಸದನದಲ್ಲಿ ನೀವು ಇರುತ್ತೀರೋ ಅಥವಾ ನಾನು ಇರುತ್ತೇನೋ ನೋಡೋಣ. ಮುಂದಿನ ದಿನಗಳಲ್ಲಿ ನಾನು ವಿಧಾನಸಭೆಯ ಮುಂಚೂಣಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ. ಆಗ ನೀವು ಕೆಲಸಕ್ಕಾಗಿ ಕೈಯಲ್ಲಿ ಲೆಟರ್ ಹಿಡಿದುಕೊಂಡು ನನ್ನ ಮುಂದೆ ಬಂದು ನಿಲ್ಲುವ ಪರಿಸ್ಥಿತಿ ಬಂದರೂ ಬರಬಹುದು, ಯಾರಿಗೆ ಗೊತ್ತು?" ಎಂದು ಮಾರ್ಮಿಕವಾಗಿ ಟೀಕಿಸಿದರು.
ಜನಬಲದ ಮುಂದೆ ಹಣಬಲ ನಡೆಯುವುದಿಲ್ಲ ಎಂಬುದಕ್ಕೆ ನಿನ್ನೆಯ ತಾಳಿಕೋಟೆ ಮೆರವಣಿಗೆಯೇ ಸಾಕ್ಷಿ ಎಂದ ಯತ್ನಾಳ್, ಮೆರವಣಿಗೆಯಲ್ಲಿ ತಮ್ಮ ಹಿಂದೆ 12 ಜೇಸಿಬಿಗಳಿದ್ದವು ಎಂಬುದನ್ನು ನೆನಪಿಸಿದರು. ಪ್ರಜೆಗಳು ಮನಸ್ಸು ಮಾಡಿದರೆ ಸಾಮಾನ್ಯ ಅಭ್ಯರ್ಥಿಯನ್ನೂ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುತ್ತಾರೆ. ಕೇವಲ ಹಣ ಮತ್ತು ಮುಸ್ಲಿಮರ ಓಲೈಕೆಯಿಂದ ಸದಾ ಗೆಲ್ಲಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.
ಇದೇ ವೇಳೆ ತಾವು ಮುಸ್ಲಿಂ ಟೋಪಿ ಧರಿಸಿದ್ದ ಹಳೆಯ ಘಟನೆಯ ಕುರಿತು ಸ್ಪಷ್ಟನೆ ನೀಡಿದ ಅವರು, "ನಾನು ಮುಸ್ಲಿಮರ ಟೋಪಿ ಹಾಕಿಕೊಂಡಿದ್ದ ತಪ್ಪಿಗಾಗಿ ತಲೆ ಬೋಳಿಸಿಕೊಂಡು, ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ಪ್ರಾಯಶ್ಚಿತ್ತ ಮಾಡಿಕೊಂಡಿದ್ದೇನೆ. ಇನ್ಮುಂದೆ ಜೀವನದಲ್ಲಿ ಎಂದಿಗೂ ಮುಸ್ಲಿಮರ ಟೋಪಿ ಧರಿಸುವುದಿಲ್ಲ" ಎಂದು ಶಪಥ ಮಾಡಿದರು. ಕಾಂಗ್ರೆಸ್ ದುರಾಡಳಿತದ ವಿರುದ್ಧ ದೇಶಾದ್ಯಂತ ಜನಸಾಮಾನ್ಯರು ವಿಜಯ್ ಅವರನ್ನು ಗೆಲ್ಲಿಸಿದಂತೆ, ಮುಂಬರುವ ದಿನಗಳಲ್ಲಿ ಇಡೀ ಕರ್ನಾಟಕದಲ್ಲೂ ಅದೇ ರೀತಿಯ ಬದಲಾವಣೆ ಗಾಳಿ ಬೀಸಲಿದೆ ಎಂದು ಯತ್ನಾಳ್ ಭವಿಷ್ಯ ನುಡಿದರು.