LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಂಗಳೂರಿಗೆ ಸಿಎಂ ಡಿಕೆಶಿ ಬಂಪರ್ ಗಿಫ್ಟ್: ಜಲ ಮೆಟ್ರೋ, ಬಂದರು, ರಸ್ತೆ ಯೋಜನೆಗಳಿಗೆ ಸಂಪುಟ ಅಸ್ತು, ಇಲ್ಲಿದೆ ಸಂಪೂರ್ಣ ಹೈಲೈಟ್ಸ್

ಮಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಮೂಲಸೌಕರ್ಯ, ಬಂದರು, ಜಲ ಸಾರಿಗೆ, ಗ್ರಾಮೀಣಾಭಿವೃದ್ಧಿ ಹಾಗೂ ಮುಂಬರುವ ಪಂಚಾಯತ್ ರಾಜ್ ಚುನಾವಣೆಗಳಿಗೆ ಸಂಬಂಧಿಸಿದಂತೆ ನೂರಾರು ಕೋಟಿ ರೂಪಾಯಿ ಮೌಲ್ಯದ ಪ್ರಮುಖ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೀನುಗಾರಿಕೆ, ಬಂದರು ಹಾಗೂ ಸಮುದ್ರ ವಲಯ ಅಭಿವೃದ್ಧಿ

ಮಂಗಳೂರು ಮೀನುಗಾರಿಕಾ ಬಂದರಿನ ಅಳಿವೆ ಬಾಗಿಲಿನಿಂದ ಕೋಟೆಪುರದವರೆಗೆ ಹೂಳೆತ್ತುವ ಕಾಮಗಾರಿ ಹಾಗೂ ದೋಣಿಗಳ ಸುರಕ್ಷಿತ ಸಂಚಾರಕ್ಕಾಗಿ ನೇವಿಗೇಷನ್ ಬಾಯ್ಸ್ ಅಳವಡಿಕೆಗೆ ಒಪ್ಪಿಗೆ ಸಿಕ್ಕಿದೆ. ಬಂದರಿನ ದಟ್ಟಣೆ ತಗ್ಗಿಸಲು ಎಕ್ಕೂರಿನ ಮೀನುಗಾರಿಕಾ ಕಾಲೇಜಿನ 3 ಎಕರೆ ಜಾಗದಲ್ಲಿ ₹30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಗಟು ಮೀನು ಮಾರುಕಟ್ಟೆ ನಿರ್ಮಿಸಲು ತೀರ್ಮಾನಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿಯನ್ನು 'ವಿಶೇಷ ಸಮುದ್ರ ವಲಯ' (SMZ) ಎಂದು ಘೋಷಿಸಲು ನಿರ್ಧರಿಸಲಾಗಿದ್ದು, ಮುಲ್ಕಿ ತಾಲೂಕಿನ ಬಳ್ಕುಂಜೆಯ 150 ಎಕರೆಯಲ್ಲಿ ₹30 ಕೋಟಿ ವೆಚ್ಚದಲ್ಲಿ ವಿಶೇಷ ಸಂಸ್ಕರಣಾ ವಲಯವನ್ನು (SPZ) ಸ್ಥಾಪಿಸಲಾಗುವುದು. ಇದಲ್ಲದೆ, ₹10 ಕೋಟಿ ವೆಚ್ಚದಲ್ಲಿ ಸಾಗರ ಜೈವಿಕ ತಂತ್ರಜ್ಞಾನ ವಲಯ, ₹45 ಕೋಟಿ ವೆಚ್ಚದಲ್ಲಿ ಕಡಲ ಕಳೆ ಮೌಲ್ಯವರ್ಧನೆ ಹಾಗೂ ₹5 ಕೋಟಿ ವೆಚ್ಚದಲ್ಲಿ ಬ್ಲೂ ಕಾರ್ಬನ್ ಪ್ರಮಾಣೀಕರಣ ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ಅನುಮೋದನೆ ನೀಡಿದೆ.

ಬೃಹತ್ ಹಡಗು ನಿರ್ಮಾಣ, ಜಲ ಮೆಟ್ರೋ ಮತ್ತು ದೋಣಿ ಸಾರಿಗೆ

ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರಿನಲ್ಲಿ ಪಿಪಿಪಿ ಮಾದರಿಯಡಿ ₹6,925 ಕೋಟಿ ವೆಚ್ಚದಲ್ಲಿ 15 MTPA ಸಾಮರ್ಥ್ಯದ ಬಹುಉಪಯೋಗಿ ಬಂದರು ಮತ್ತು ಹಡಗು ನಿರ್ಮಾಣ ಕೇಂದ್ರದ ಅಭಿವೃದ್ಧಿಗೆ ಹಸಿರು ನಿಶಾನೆ ದೊರೆತಿದೆ. ಇದರಿಂದ ರಾಜ್ಯಕ್ಕೆ ₹2,902.69 ಕೋಟಿ ಆದಾಯ ಹಾಗೂ 44,800 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಜತೆಗೆ ಉಡುಪಿಯ ಗಂಗೊಳ್ಳಿಯಲ್ಲಿ ₹322 ಕೋಟಿ ವೆಚ್ಚದ ಹಡಗು ನಿರ್ಮಾಣ ಅಂಗಳಕ್ಕೆ ಮಂಜೂರಾತಿ ನೀಡಲಾಗಿದೆ. ಕರಾವಳಿಯ ನದಿಗಳಲ್ಲಿ ಸಂಚಾರ ಸುಗಮಗೊಳಿಸಲು ಗುರುಪುರ-ನೇತ್ರಾವತಿ ನದಿಗಳಲ್ಲಿ ಮಂಗಳೂರು ಜಲ ಮೆಟ್ರೋ (Water Metro) ಯೋಜನೆಯ ಕಾರ್ಯಸಾಧ್ಯತಾ ಪರಿಶೀಲನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಕರ್ನಾಟಕ ಜಲಸಾರಿಗೆ ಮಂಡಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಕರಾವಳಿ ಪ್ರಯಾಣಿಕರ ದೋಣಿ ಸೇವೆಗೆ ವ್ಯವಹಾರ ಸಲಹೆಗಾರರ ನೇಮಕಕ್ಕೂ ಒಪ್ಪಿಗೆ ದೊರೆತಿದೆ.

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹16,000 ಕೋಟಿ ಅನುದಾನ

'ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆ' ಅಡಿಯಲ್ಲಿ ₹10,000 ಕೋಟಿ ವೆಚ್ಚದಲ್ಲಿ 15,000 ಕಿ.ಮೀ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಸುಸ್ಥಿರ ಸಂಚಾರ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ₹6,000 ಕೋಟಿ ಅಂದಾಜು ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.

ಪಂಚಾಯತ್ ರಾಜ್ ಚುನಾವಣೆ ಮತ್ತು ಮತಪೆಟ್ಟಿಗೆ ಬಳಕೆ

ಅವಧಿ ಮುಗಿದಿರುವ ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಡಿಸೆಂಬರ್ ಒಳಗೆ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಈ ಬಾರಿ ಇವಿಎಂ ಬದಲಿಗೆ ಮತಪೆಟ್ಟಿಗೆಗಳನ್ನು ಬಳಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮತಪೆಟ್ಟಿಗೆ ಖರೀದಿ ಹಾಗೂ ಪಾರದರ್ಶಕತೆಗಾಗಿ ಲೈವ್ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲು ಒಟ್ಟು ₹151.31 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ಕಲ್ಪಿಸಲಾಗಿದೆ. ಗ್ರಾಮ ಗ್ರಂಥಾಲಯಗಳ ಡಿಜಿಟಲೀಕರಣಕ್ಕಾಗಿ ₹57.15 ಕೋಟಿ ವೆಚ್ಚದಲ್ಲಿ ತಲಾ 6,350 ಕಂಪ್ಯೂಟರ್ ಮತ್ತು ಯುಪಿಎಸ್ ಖರೀದಿಸಲು ಅನುಮೋದನೆ ನೀಡಲಾಗಿದೆ.

ಅರಣ್ಯ ಇಲಾಖೆ ನೇಮಕಾತಿ ನಿಯಮ ತಿದ್ದುಪಡಿ

ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕ ಮತ್ತು ಅರಣ್ಯ ವೀಕ್ಷಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಸ್ಥಳೀಯ ಅರಣ್ಯ ಬುಡಕಟ್ಟು ಸಮುದಾಯಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಈವರೆಗೆ ಇದ್ದ 13 ಸಮುದಾಯಗಳ ಜೊತೆಗೆ ಹಲಸರು, ಸಿದ್ಧಿ, ಕುಡಿಯ, ಬೆಟ್ಟಕುರುಬ ಮತ್ತು ಪಣಿಯನ್ ಸಮುದಾಯಗಳಿಗೂ ಈ ಅವಕಾಶ ವಿಸ್ತರಿಸಲಾಗಿದ್ದು, ಹೊಸ ಕನಕಪುರ ವನ್ಯಜೀವಿ ವಿಭಾಗವನ್ನೂ ಈ ವ್ಯಾಪ್ತಿಗೆ ತರಲಾಗಿದೆ.

ಶಿಕ್ಷಣ, ಆರೋಗ್ಯ ಮತ್ತು ಕ್ರೀಡಾಂಗಣ ಯೋಜನೆಗಳು ರಾಜ್ಯದ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಅಭಿವೃದ್ಧಿಗೆ ಸಿದ್ಧತೆ ಕೈಗೊಳ್ಳಲಾಗಿದ್ದು, ಕರಾವಳಿಯ ದಕ್ಷಿಣ ಕನ್ನಡ (20), ಉಡುಪಿ (12) ಹಾಗೂ ಉತ್ತರ ಕನ್ನಡ (17) ಜಿಲ್ಲೆಗಳ ಒಟ್ಟು 49 ಶಾಲೆಗಳ ಅಭಿವೃದ್ಧಿಗೆ ₹245 ಕೋಟಿ ಮೊತ್ತದ ಟೆಂಡರ್ ಕರೆಯಲು ಅನುಮೋದಿಸಲಾಗಿದೆ. ರೋಗಿಗಳ ದಟ್ಟಣೆ ನಿವಾರಿಸಲು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲ ಹಂತವಾಗಿ 200 ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಲು ಒಪ್ಪಿಗೆ ಸೂಚಿಸಲಾಗಿದೆ. ಇದೇ ವೇಳೆ ಮಂಗಳಾ ಕ್ರೀಡಾಂಗಣವನ್ನು ₹20 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಮತ್ತು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ₹10 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ತೀರ್ಮಾನಿಸಲಾಗಿದೆ.

ಕುಡಿಯುವ ನೀರು ಮತ್ತು ನಗರಾಭಿವೃದ್ಧಿ ಕಾಮಗಾರಿಗಳು

ವಿಟ್ಲ ಪಟ್ಟಣಕ್ಕೆ ₹94 ಕೋಟಿ ವೆಚ್ಚದಲ್ಲಿ 5 ವರ್ಷಗಳ ನಿರ್ವಹಣೆಯೊಂದಿಗೆ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಕಾಪು ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಉದ್ಯಾವರ ನದಿಯಿಂದ ನೀರು ಪೂರೈಸುವ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಮಂಗಳೂರು ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಕಾಂಕ್ರೀಟ್‌ ರಸ್ತೆಗಳನ್ನಾಗಿ ಪರಿವರ್ತಿಸಲು ₹400 ಕೋಟಿ ವಿಶೇಷ ಅನುದಾನ, ಸುರತ್ಕಲ್ ಮತ್ತು ಮಂಗಳೂರಿನ ಒಳಚರಂಡಿ ನವೀಕರಣಕ್ಕೆ ₹100 ಕೋಟಿ ಹಾಗೂ ನೂತನ ಕೇಂದ್ರ ಕಾರಾಗೃಹದ ಗಡಿಗೋಡೆ ನಿರ್ಮಾಣಕ್ಕೆ ₹10 ಕೋಟಿ ಮಂಜೂರು ಮಾಡಲಾಗಿದೆ. ಕಾರ್ಕಳದಲ್ಲಿ ₹20 ಕೋಟಿ ವೆಚ್ಚದ ಶಿಲ್ಪಕಲಾ ಕ್ಲಸ್ಟರ್ ಸ್ಥಾಪನೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಂಸ್ಥೆಗಳಿಗೆ ಭೂ ಮಂಜೂರಾತಿ

ಸಂತ ಲಾರೆನ್ಸ್ ಚರ್ಚ್ ಅತ್ತೂರು ಸಂಸ್ಥೆಗೆ ಕಾರ್ಕಳದ ನಿಟ್ಟೆ ಗ್ರಾಮದಲ್ಲಿ 7.30 ಎಕರೆ, ಶ್ರೀ ನಾರಾಯಣ ಧರ್ಮಸಂಘಂ ಟ್ರಸ್ಟ್‌ಗೆ ಬಂಟ್ವಾಳದ ನಾವೂರು ಗ್ರಾಮದಲ್ಲಿ 6.51 ಎಕರೆ, ಕಾಪು ತಾಲೂಕಿನ ಪಡುಬೆಳ್ಳೆ ಮುರ್ಗೀಕರ್ಳ ದೇವಸ್ಥಾನಕ್ಕೆ 29 ಸೆಂಟ್ಸ್ ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘಕ್ಕೆ 0.05 ಎಕರೆ ಭೂಮಿಯನ್ನು ಮಂಜೂರು ಮಾಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂದಿನ ದಿನಗಳಲ್ಲಿ ರಾಜ್ಯದ 10-12 ಕಡೆ ಸಚಿವ ಸಂಪುಟ ಸಭೆ: ಸಿಎಂ ಡಿ.ಕೆ ಶಿವಕುಮಾರ್ಹೀಗಿದೆ ಇಂದಿನ ಮಂಗಳೂರಲ್ಲಿ ಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ | Karnataka Cabinet Meetingಮಂಗಳೂರು ನೂತನ ಕೇಂದ್ರ ಕಾರಾಗೃಹದ ಮುಖ್ಯ ಗೋಡೆ ನಿರ್ಮಾಣಕ್ಕೆ ₹10 ಕೋಟಿ ಅನುದಾನಕ್ಕೆ ಸಂಪುಟ ಅನುಮೋದನೆಮತದಾರರ ಕರಡು ಪಟ್ಟಿಯಲ್ಲಿ ಭಾರೀ ಲೋಪ: ಚುನಾವಣಾ ಆಯೋಗಕ್ಕೆ ಬಿಕೆ ಹರಿಪ್ರಸಾದ್ ಪತ್ರಮಂಗಳೂರಿಗೆ ಸಿಎಂ ಡಿಕೆಶಿ ಬಂಪರ್ ಗಿಫ್ಟ್: ಜಲ ಮೆಟ್ರೋ, ಬಂದರು, ರಸ್ತೆ ಯೋಜನೆಗಳಿಗೆ ಸಂಪುಟ ಅಸ್ತು, ಇಲ್ಲಿದೆ ಸಂಪೂರ್ಣ ಹೈಲೈಟ್ಸ್BREAKING: ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ 'ಮಂಗಳೂರು ಜಿಲ್ಲೆ': ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರBIG BREAKING: ತುಳುವಿಗೆ ರಾಜ್ಯದ 2ನೇ ಭಾಷೆ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ವಕೀಲರ ನಿಯೋಗದಿಂದ ಮನವಿ ಸಲ್ಲಿಕೆKPSC ನೇಮಕಾತಿ ಅಕ್ರಮದ ಜಾಲ ಭೇದಿಸಿದ CID: 13 ಬೇನಾಮಿ ಖಾತೆಗಳಲ್ಲಿದ್ದ 67 ಲಕ್ಷ ಸೀಜ್!BREAKING : ನಟ ದರ್ಶನ್ ಗೆ ಬಿಗ್ ರಿಲೀಫ್ : ಕ್ರಾಸ್ ಎಕ್ಸಾಮಿನೇಷನ್ ವೇಳೆ, ಖುದ್ದು ಹಾಜರಾತಿಗೆ ಅನುಮತಿ ನೀಡಿದ ಹೈಕೋರ್ಟ್