LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೀಗಿದೆ ಇಂದಿನ ಮಂಗಳೂರಲ್ಲಿ ಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ | Karnataka Cabinet Meeting

ಮಂಗಳೂರು: ಇಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಂಗಳೂರಿನ ಡಿಸಿ ಕಚೇರಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮಂಗಳೂರಿಗೆ ಬಂಫರ್ ಗಿಫ್ಟ್ ಅನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ. ಆ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ..

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಬಂದರು, ಸಾರಿಗೆ, ಮೂಲಸೌಕರ್ಯ ಹಾಗೂ ರಾಜ್ಯದಾದ್ಯಂತ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭಾರಿ ಮೊತ್ತದ ಅನುಮೋದನೆ ದೊರೆತಿದೆ. ಜತೆಗೆ ಮುಂಬರುವ ಪಂಚಾಯತ್ ರಾಜ್ ಚುನಾವಣೆ ಹಾಗೂ ಅರಣ್ಯ ಇಲಾಖೆ ನೇಮಕಾತಿಯಲ್ಲಿ ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿ ವಿಸ್ತರಿಸುವ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಮೀನುಗಾರಿಕೆ, ಬಂದರು ಮತ್ತು ಬೃಹತ್ ಹಡಗು ನಿರ್ಮಾಣ ಯೋಜನೆಗಳು

ಕರಾವಳಿಯ ಮೀನುಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಂಗಳೂರು ಮೀನುಗಾರಿಕಾ ಬಂದರಿನ ಅಳಿವೆ ಬಾಗಿಲಿನಿಂದ ಕೋಟೆಪುರದವರೆಗೆ ಹೂಳೆತ್ತುವ ಕಾಮಗಾರಿಗೆ ಅನುಮತಿ ನೀಡಲಾಗಿದ್ದು, ಬೋಟುಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ನೇವಿಗೇಷನ್ ಬಾಯ್ಸ್ ಅಳವಡಿಸಲು ನಿರ್ಧರಿಸಲಾಗಿದೆ.

ಬಂದರಿನ ಮೇಲಿನ ಒತ್ತಡ ಕಡಿಮೆ ಮಾಡಲು ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜಿನ ಜಾಗದಲ್ಲಿ ₹30 ಕೋಟಿ ವೆಚ್ಚದಲ್ಲಿ ಸಗಟು ಮೀನು ಮಾರುಕಟ್ಟೆ ನಿರ್ಮಾಣವಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿಯನ್ನು 'ವಿಶೇಷ ಸಮುದ್ರ ವಲಯ' (SMZ) ಎಂದು ಗುರುತಿಸಲಾಗಿದ್ದು, ಮುಲ್ಕಿ ತಾಲೂಕಿನ ಬಳ್ಕುಂಜೆಯಲ್ಲಿ ಮೀನುಗಾರಿಕಾ ಪಾರ್ಕ್‌ಗೆ ಮೀಸಲಿಟ್ಟ ಜಾಗದಲ್ಲಿ ₹30 ಕೋಟಿ ವೆಚ್ಚದಲ್ಲಿ ವಿಶೇಷ ಸಂಸ್ಕರಣಾ ವಲಯ (SPZ) ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ.

ಜತೆಗೆ ₹60 ಕೋಟಿ ವೆಚ್ಚದಲ್ಲಿ ಕಡಲ ಜೈವಿಕ ತಂತ್ರಜ್ಞಾನ ನೀತಿ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರನ್ನು ಪಿಪಿಪಿ ಮಾದರಿಯಲ್ಲಿ ₹6,925 ಕೋಟಿ ವೆಚ್ಚದಲ್ಲಿ ಬಹುಉಪಯೋಗಿ ಬಂದರು ಹಾಗೂ ಹಡಗು ನಿರ್ಮಾಣ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಿಂದ ರಾಜ್ಯಕ್ಕೆ ₹2,900 ಕೋಟಿಗೂ ಅಧಿಕ ಆದಾಯ ಮತ್ತು 44,800 ಉದ್ಯೋಗ ಸೃಷ್ಟಿಯಾಗುವ ಅಂದಾಜಿದೆ. ಕುಂದಾಪುರದ ಗಂಗೊಳ್ಳಿಯಲ್ಲಿ ₹322 ಕೋಟಿ ವೆಚ್ಚದಲ್ಲಿ ಗ್ರೀನ್‌ಫೀಲ್ಡ್ ಹಡಗು ನಿರ್ಮಾಣ ಅಂಗಳ ನಿರ್ಮಾಣಕ್ಕೂ ಅನುಮತಿ ದೊರೆತಿದೆ.

ಮಂಗಳೂರು ಜಲ ಮೆಟ್ರೋ ಮತ್ತು ಕರಾವಳಿ ದೋಣಿ ಸಾರಿಗೆ

ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಪಿಪಿಪಿ ಮಾದರಿಯಡಿ 'ಮಂಗಳೂರು ಜಲ ಮೆಟ್ರೋ' ಆರಂಭಿಸುವ ನಿಟ್ಟಿನಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ತಯಾರಿಸಲು ತಾತ್ವಿಕ ಸಮ್ಮತಿ ನೀಡಲಾಗಿದೆ. ಈ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿಗೆ ಸಂಪೂರ್ಣ ಅಧಿಕಾರ ವಹಿಸಲಾಗಿದೆ. ಕರಾವಳಿಯುದ್ದಕ್ಕೂ ಪ್ರಯಾಣಿಕರ ದೋಣಿ ಸಾರಿಗೆ ಸೇವೆ ಜಾರಿಗೆ ತರಲು ವ್ಯವಹಾರ ಸಲಹೆಗಾರರನ್ನು ನೇಮಿಸಲು ಸಂಪುಟ ಸಭೆ ಸಮ್ಮತಿಸಿದೆ.

ಗ್ರಾಮೀಣ ರಸ್ತೆಗಳ ಕಾಯಕಲ್ಪಕ್ಕೆ ₹16,000 ಕೋಟಿ

'ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆ'ಯಡಿ ರಾಜ್ಯದ ಹಳ್ಳಿಗಳನ್ನು ಸಂಪರ್ಕಿಸುವ 15,000 ಕಿಲೋಮೀಟರ್ ರಸ್ತೆಗಳ ಅಭಿವೃದ್ಧಿಗಾಗಿ ₹10,000 ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಕಲ್ಪಿಸಲಾಗಿದೆ. ಇದರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ಸುಗಮಗೊಳಿಸಲು ಮತ್ತು ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ₹6,000 ಕೋಟಿ ಮೊತ್ತದಲ್ಲಿ ಸಿಮೆಂಟಿಂಗ್ (ಸಿಸಿ) ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.

ಮತಪೆಟ್ಟಿಗೆ ಮೂಲಕವೇ ಪಂಚಾಯತ್ ಚುನಾವಣೆ: ₹151 ಕೋಟಿ ಮೀಸಲು

ಅವಧಿ ಪೂರ್ಣಗೊಂಡಿರುವ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಇದೇ ವರ್ಷದ ಡಿಸೆಂಬರ್ ಒಳಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಚುನಾವಣೆಯಲ್ಲಿ ಇವಿಎಂ ಯಂತ್ರಗಳ ಬದಲು ಸಾಂಪ್ರದಾಯಿಕ ಮತಪೆಟ್ಟಿಗೆಗಳನ್ನು ಬಳಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಚುನಾವಣೆ ಪ್ರಕ್ರಿಯೆಗಾಗಿ ಹೊಸ ಮತಪೆಟ್ಟಿಗೆ ಖರೀದಿ ಹಾಗೂ ಚುನಾವಣಾ ಕೇಂದ್ರಗಳಲ್ಲಿ ಪಾರದರ್ಶಕತೆಗಾಗಿ ಲೈವ್ ವೆಬ್‌ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲು ₹151.31 ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ. ಕೇಂದ್ರ ನೆರವಿನೊಂದಿಗೆ ರಾಜ್ಯದ ಹೊಸ ಗ್ರಾಮೀಣ ಗ್ರಂಥಾಲಯಗಳಿಗೆ 6,350 ಕಂಪ್ಯೂಟರ್ ಮತ್ತು ಯುಪಿಎಸ್ ಉಪಕರಣ ಒದಗಿಸಲು ₹57.15 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

ಸ್ಥಳೀಯ ಬುಡಕಟ್ಟುಗಳಿಗೆ ಅರಣ್ಯ ಇಲಾಖೆ ಉದ್ಯೋಗದಲ್ಲಿ ಪ್ರಾತಿನಿಧ್ಯ

ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕ ಮತ್ತು ಅರಣ್ಯ ವೀಕ್ಷಕರ ನೇರ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಅರಣ್ಯದಂಚಿನ ಸ್ಥಳೀಯ ಬುಡಕಟ್ಟು ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಪ್ರಾತಿನಿಧ್ಯ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ಪಟ್ಟಿಯಲ್ಲಿದ್ದ 13 ಬುಡಕಟ್ಟುಗಳ ಜೊತೆಗೆ ಹಲಸರು, ಸಿದ್ಧಿ, ಕುಡಿಯ, ಬೆಟ್ಟಕುರುಬ ಹಾಗೂ ಪಣಿಯನ್ ಸಮುದಾಯಗಳನ್ನು ಈ ಮೀಸಲಾತಿ ವ್ಯಾಪ್ತಿಗೆ ತರಲಾಗಿದ್ದು, ನೂತನ ಕನಕಪುರ ವನ್ಯಜೀವಿ ವಿಭಾಗವನ್ನೂ ಇದಕ್ಕೆ ಒಳಪಡಿಸಲಾಗಿದೆ.

ಶಾಲೆ, ಆಸ್ಪತ್ರೆ ಮತ್ತು ಕ್ರೀಡಾಂಗಣ ಮೇಲ್ದರ್ಜೆಗೆ ಕ್ರಮ

ರಾಜ್ಯದಲ್ಲಿ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಕರಾವಳಿ ಭಾಗದ 49 ಶಾಲೆಗಳ ನವೀಕರಣಕ್ಕೆ ₹245 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ದಕ್ಷಿಣ ಕನ್ನಡ, ನೆರೆಯ ಜಿಲ್ಲೆಗಳು ಹಾಗೂ ಕೇರಳದ ರೋಗಿಗಳಿಗೆ ಅನುಕೂಲವಾಗುವಂತೆ ಮಂಗಳೂರಿನ ಪ್ರಸಿದ್ಧ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲ ಹಂತವಾಗಿ 200 ಬೆಡ್‌ಗಳ ಸಾಮರ್ಥ್ಯ ವಿಸ್ತರಣೆ, ವೈದ್ಯಕೀಯ ಉಪಕರಣ ಮತ್ತು ಅಗತ್ಯ ಸಿಬ್ಬಂದಿ ಒದಗಿಸಲು ಸಮ್ಮತಿಸಲಾಗಿದೆ. ನಗರದ ಮಂಗಳಾ ಕ್ರೀಡಾಂಗಣವನ್ನು ₹20 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲು ಮತ್ತು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ₹10 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಅನುಮೋದನೆ ಸಿಕ್ಕಿದೆ.

ಕುಡಿಯುವ ನೀರು, ನಗರಾಭಿವೃದ್ಧಿ ಮತ್ತು ಭೂ ಮಂಜೂರಾತಿ

ವಿಟ್ಲ ಪಟ್ಟಣಕ್ಕೆ ₹94 ಕೋಟಿ ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆ ಜತೆಗೆ 5 ವರ್ಷಗಳ ನಿರ್ವಹಣೆಗೆ ಅನುಮೋದಿಸಲಾಗಿದೆ. ಕಾಪು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಉದ್ಯಾವರ ನದಿಯಿಂದ ಶಾಶ್ವತ ನೀರು ಒದಗಿಸಲು ₹62.31 ಕೋಟಿ ಪರಿಷ್ಕೃತ ವೆಚ್ಚಕ್ಕೆ ಸಮ್ಮತಿ ನೀಡಲಾಗಿದೆ. ಮಂಗಳೂರು ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲು ₹400 ಕೋಟಿ ವಿಶೇಷ ಅನುದಾನ, ಸುರತ್ಕಲ್ ಮತ್ತು ಮಂಗಳೂರಿನ ಹಳೆಯ ಒಳಚರಂಡಿ ನವೀಕರಣಕ್ಕೆ ₹100 ಕೋಟಿ ಹಾಗೂ ನೂತನ ಜೈಲಿನ ಕಂಪೌಂಡ್ ನಿರ್ಮಾಣಕ್ಕೆ ₹10 ಕೋಟಿ ನಿಗದಿಪಡಿಸಲಾಗಿದೆ.

ಇದೇ ವೇಳೆ ಪಿಲಿಕುಳ ನಿಸರ್ಗಧಾಮದ 339.90 ಎಕರೆ ಜಮೀನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವರ್ಗಾಯಿಸಲು ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳಾದ ಅತ್ತೂರು ಚರ್ಚ್ (7.30 ಎಕರೆ), ಶ್ರೀ ನಾರಾಯಣ ಧರ್ಮಸಂಘಂ ಟ್ರಸ್ಟ್ (6.51 ಎಕರೆ), ಮುರ್ಗೀಕರ್ಳ ದೇವಸ್ಥಾನ (29 ಸೆಂಟ್ಸ್) ಮತ್ತು ಕರಾವಳಿ ಲೇಖಕಿಯರ ವಾಚಕಿಯರ ಸಂಘಕ್ಕೆ (0.05 ಎಕರೆ) ಭೂಮಿ ಮಂಜೂರು ಮಾಡಲು ಸಂಪುಟ ಅಸ್ತು ಎಂದಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೀಗಿದೆ ಇಂದಿನ ಮಂಗಳೂರಲ್ಲಿ ಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ | Karnataka Cabinet Meetingಮಂಗಳೂರು ನೂತನ ಕೇಂದ್ರ ಕಾರಾಗೃಹದ ಮುಖ್ಯ ಗೋಡೆ ನಿರ್ಮಾಣಕ್ಕೆ ₹10 ಕೋಟಿ ಅನುದಾನಕ್ಕೆ ಸಂಪುಟ ಅನುಮೋದನೆಮತದಾರರ ಕರಡು ಪಟ್ಟಿಯಲ್ಲಿ ಭಾರೀ ಲೋಪ: ಚುನಾವಣಾ ಆಯೋಗಕ್ಕೆ ಬಿಕೆ ಹರಿಪ್ರಸಾದ್ ಪತ್ರಮಂಗಳೂರಿಗೆ ಸಿಎಂ ಡಿಕೆಶಿ ಬಂಪರ್ ಗಿಫ್ಟ್: ಜಲ ಮೆಟ್ರೋ, ಬಂದರು, ರಸ್ತೆ ಯೋಜನೆಗಳಿಗೆ ಸಂಪುಟ ಅಸ್ತು, ಇಲ್ಲಿದೆ ಸಂಪೂರ್ಣ ಹೈಲೈಟ್ಸ್BREAKING: ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ 'ಮಂಗಳೂರು ಜಿಲ್ಲೆ': ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರBIG BREAKING: ತುಳುವಿಗೆ ರಾಜ್ಯದ 2ನೇ ಭಾಷೆ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ವಕೀಲರ ನಿಯೋಗದಿಂದ ಮನವಿ ಸಲ್ಲಿಕೆKPSC ನೇಮಕಾತಿ ಅಕ್ರಮದ ಜಾಲ ಭೇದಿಸಿದ CID: 13 ಬೇನಾಮಿ ಖಾತೆಗಳಲ್ಲಿದ್ದ 67 ಲಕ್ಷ ಸೀಜ್!BREAKING : ನಟ ದರ್ಶನ್ ಗೆ ಬಿಗ್ ರಿಲೀಫ್ : ಕ್ರಾಸ್ ಎಕ್ಸಾಮಿನೇಷನ್ ವೇಳೆ, ಖುದ್ದು ಹಾಜರಾತಿಗೆ ಅನುಮತಿ ನೀಡಿದ ಹೈಕೋರ್ಟ್ತೆರವುಗೊಳಿಸಿದ್ದ ಫುಟ್‌ಪಾತ್ ಮೇಲೆ ಮತ್ತೆ ವ್ಯಾಪಾರ ಮಾಡಿದ್ರೆ FIR, ಸಾಮಗ್ರಿ ಜಪ್ತಿ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ