ಬೆಂಗಳೂರು: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಗೆ ಕರ್ನಾಟಕ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.
ಕರಡಿನಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ರಾಜ್ಯ ಮಟ್ಟದಲ್ಲಿ ಉನ್ನತ ಸಮಿತಿ ರಚನೆ ಹಾಗೂ ಶೀಘ್ರದಲ್ಲೇ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ತೀರ್ಮಾನಗಳು:
-
ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತ: ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಕೇವಲ ಅಧಿಸೂಚಿತ ಮತ್ತು ಕಂದಾಯ ಅರಣ್ಯಗಳನ್ನು ಮಾತ್ರ ಸೇರಿಸಬೇಕು. ಈಗಾಗಲೇ ಕಾನೂನುಬದ್ಧವಾಗಿ ಮಂಜೂರಾದ ಜಮೀನುಗಳು, ಕೃಷಿ, ತೋಟಗಾರಿಕೆ, ಜನವಸತಿ ಹಾಗೂ ಸಾರ್ವಜನಿಕ ಬಳಕೆ ಪ್ರದೇಶಗಳನ್ನು ಇದರಿಂದ ಹೊರಗಿಡಬೇಕು.
-
ಸ್ಥಳೀಯರ ಹಕ್ಕುಗಳ ರಕ್ಷಣೆ: ಬಗರ್ ಹುಕುಂ, ಅರಣ್ಯ ಹಕ್ಕು ಕಾಯಿದೆ, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ ಹಾಗೂ ಪ್ರಸ್ತುತ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿರ್ಧಾರ ತಳೆಯಬೇಕು.
-
ಸರ್ವೆ ನಂಬರ್‌ವಾರು ಪರಿಶೀಲನೆ: ತಜ್ಞರ ತಂಡದ ಮೂಲಕ ಪ್ರತಿಯೊಂದು ಸರ್ವೆ ನಂಬರ್ ಆಧಾರದಲ್ಲಿ ಭೌತಿಕ ತಪಾಸಣೆ ನಡೆಸಿ, ಅರಣ್ಯ ಗಡಿ ಮತ್ತು ಜನವಸತಿ/ಕೃಷಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಲು ರಾಜ್ಯ ಸರ್ಕಾರವೇ ಸ್ವತಃ ಸರ್ವೆ ನಡೆಸಲಿದೆ.
-
ಪರ್ಯಾಯ ಜೀವನೋಪಾಯ: ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ರೈತರು ಮತ್ತು ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಸೂಕ್ತ ಆರ್ಥಿಕ ನೆರವು ಮತ್ತು ಮಾರ್ಗಸೂಚಿ ರೂಪಿಸುವುದು.
-
ಉನ್ನತ ಮಟ್ಟದ ಸಮಿತಿ ರಚನೆ: ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು, ರೈತ ಮತ್ತು ಉದ್ಯಮ ರಂಗದ ಪ್ರತಿನಿಧಿಗಳು ಹಾಗೂ ಪರಿಸರ ವಿಜ್ಞಾನಿಗಳನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ರಚನೆಯಾಗಲಿದೆ. ಇದಲ್ಲದೆ, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜನಪ್ರತಿನಿಧಿಗಳನ್ನೊಳಗೊಂಡ ಸಹಾಯಕ ಸಮಿತಿಗಳು ಕಾರ್ಯಾಚರಿಸಲಿವೆ.
ಕೇಂದ್ರಕ್ಕೆ ಮನವಿ: ಸರ್ವೆ ಪ್ರಕ್ರಿಯೆ ಪೂರ್ಣಗೊಳಿಸಿ ಸಮಗ್ರ ವರದಿ ಸಲ್ಲಿಸಲು ರಾಜ್ಯಕ್ಕೆ ಕನಿಷ್ಠ ಒಂದು ವರ್ಷದ ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಯಾವುದೇ ಅಂತಿಮ ಅಧಿಸೂಚನೆ ಹೊರಡಿಸಬಾರದು. ರಾಜ್ಯದ ವರದಿ ಸಲ್ಲಿಕೆಯಾದ ನಂತರ ಸರ್ಕಾರಗಳ ನಡುವೆ ಸವಿಸ್ತಾರ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರವನ್ನು ಒತ್ತಾಯಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.