ನವದೆಹಲಿ: ಭಾರತೀಯ ಚಿತ್ರರಂಗದ ಅತ್ಯುನ್ನತ ಪುರಸ್ಕಾರವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್ ನಾಗ್, ತಮ್ಮ ನಟನಾ ಪಯಣ ಹಾಗೂ ಕರ್ನಾಟಕದೊಂದಿಗಿನ ಬಂಧವನ್ನು ನೆನಪಿಸಿಕೊಂಡು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಗುಜರಾತ್‌ನ ಕೆವಾಡಿಯಾದಲ್ಲಿ (ಏಕತಾ ನಗರ) ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ಯಾಂಡಲ್ ವುಡ್ ಹಿರಿಯ ನಟ ಅನಂತ್ ನಾಗ್ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ಪೀಕರಿಸಿದ ಬಳಿಕ ಮಾತನಾಡಿದರು..
ರಂಗಭೂಮಿಯಿಂದ ಆರಂಭವಾದ ಪಯಣ:
ತಮ್ಮ ಆರಂಭಿಕ ದಿನಗಳನ್ನು ಸ್ಮರಿಸಿದ ಅನಂತ್ ನಾಗ್, "ನನ್ನ ವೃತ್ತಿಜೀವನ ನಟನಾಗಿ ಆರಂಭವಾಯಿತು. ಸುಮಾರು 5 ವರ್ಷಗಳ ಕಾಲ 50ಕ್ಕೂ ಹೆಚ್ಚು ವಿವಿಧ ನಾಟಕಗಳಲ್ಲಿ ಅಭಿನಯಿಸಿದೆ. ರಂಗಭೂಮಿಯೇ ನನಗೆ ನಟನೆಯ ನಿಜವಾದ ತರಬೇತಿ ಕೇಂದ್ರವಾಗಿತ್ತು. ಆ ನಂತರ ಚಿತ್ರರಂಗದಿಂದ ಕರೆ ಬಂತು. ಮೊದಲು ಕನ್ನಡ, ಬಳಿಕ ಶ್ಯಾಮ್ ಬೆನೆಗಲ್ ಹಾಗೂ ಎಂ.ಎಸ್. ಸತ್ಯು ಅವರಂತಹ ದಿಗ್ಗಜರ ನಿರ್ದೇಶನದಲ್ಲಿ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು" ಎಂದು ಹೇಳಿದರು.
ಕರ್ನಾಟಕವೇ ನನ್ನ ಕರ್ಮಭೂಮಿ:
ಕನ್ನಡ ಚಿತ್ರರಂಗದೊಂದಿಗಿನ ತಮ್ಮ ಸುದೀರ್ಘ ಬಂಧದ ಕುರಿತು ಮಾತನಾಡುತ್ತಾ, "ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿದರೂ, ನನಗೆ ಅತ್ಯುತ್ತಮ ಅವಕಾಶಗಳು ಸಿಕ್ಕಿದ್ದು ಕರ್ನಾಟಕದಲ್ಲಿ. ಹೀಗಾಗಿ ಬೆಂಗಳೂರಿಗೆ ಬಂದು ನೆಲಸಲು ತೀರ್ಮಾನಿಸಿದೆ. ಕಳೆದ 50 ವರ್ಷಗಳಿಂದ ಕರ್ನಾಟಕವೇ ನನ್ನ ಕರ್ಮಭೂಮಿಯಾಗಿದೆ. ಇತರೆ ಭಾಷೆಗಳ ಸಿನಿಮಾಗಳಲ್ಲೂ ನಾನು ಕರ್ನಾಟಕದ ರಾಯಭಾರಿಯಾಗಿ ಅಭಿನಯಿಸಿದ್ದೇನೆ. ಆದರೆ, ನನ್ನ ಅಭಿನಯಕ್ಕೆ ಅತ್ಯಂತ ದೊಡ್ಡ ಮಟ್ಟದ ಅವಕಾಶಗಳನ್ನು ಕೊಟ್ಟಿದ್ದು ಕನ್ನಡ ಚಿತ್ರರಂಗ" ಎಂದು ಕೃತಜ್ಞತೆ ಸಲ್ಲಿಸಿದರು.
ರಾಷ್ಟ್ರಪತಿಗಳ ಕೈಯಿಂದ ಸಿಕ್ಕ ಗೌರವ:
ತಮಗೆ ಸಿಕ್ಕ ರಾಷ್ಟ್ರೀಯ ಪುರಸ್ಕಾರಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, "ಕಳೆದ ವರ್ಷ ದೇಶದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ 'ಪದ್ಮಭೂಷಣ' ಪ್ರಶಸ್ತಿ ಸ್ವೀಕರಿಸುವ ಸೌಭಾಗ್ಯ ನನ್ನದಾಗಿತ್ತು. ಈಗ ಚಿತ್ರರಂಗದ ಅತ್ಯುನ್ನತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನೂ ಮತ್ತೆ ಅವರ ಕೈಯಿಂದಲೇ ಸ್ವೀಕರಿಸುತ್ತಿರುವುದು ನನ್ನ ಭಾಗ್ಯ. ನಾನು ಅತ್ಯಂತ ಅದೃಷ್ಟವಂತ ಎಂದು ಭಾವಿಸುತ್ತೇನೆ" ಎಂದು ಅತ್ಯಂತ ವಿನಮ್ರವಾಗಿ ಹೇಳಿದರು.
https://twitter.com/PTI_News/status/2102376029599719874
ಡಾ. ರಾಜ್‌ಕುಮಾರ್ ಬಳಿಕ ಈ ಗೌರವ ಪಡೆದ 2ನೇ ಕನ್ನಡ ನಟ
1995ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತ್ತು. ಅದಾಗಿ ಸುದೀರ್ಘ 31 ವರ್ಷಗಳ ಬಳಿಕ ನಟನೆಯ ಕ್ಷೇತ್ರದಿಂದ ಈ ಗೌರವ ಪಡೆಯುತ್ತಿರುವ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆಗೆ ಅನಂತ್ ನಾಗ್ ಪಾತ್ರರಾಗಿದ್ದಾರೆ. (2008ರಲ್ಲಿ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರಿಗೂ ಈ ಪ್ರಶಸ್ತಿ ಒಲಿದಿತ್ತು).
300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಮುಂಬೈನ ರಂಗಭೂಮಿಯಿಂದ ನಟನಾ ಪಯಣ ಆರಂಭಿಸಿದ ಅನಂತ್ ನಾಗ್, 1973ರ 'ಸಂಕಲ್ಪ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. 'ಅಂಕುರ್', 'ಮಂಥನ್', 'ಮಿಂಚಿನ ಓಟ', 'ನಾ ನಿನ್ನ ಬಿಡಲಾರೆ', 'ಗೌರಿ ಗಣೇಶ' ಮುಂತಾದ ಜನಪ್ರಿಯ ಸಿನಿಮಾಗಳ ಜೊತೆಗೆ 'ಮಾಲ್ಗುಡಿ ಡೇಸ್' ಧಾರಾವಾಹಿಯ ಮೂಲಕವೂ ಅಪಾರ ಜನಪ್ರಿಯತೆ ಗಳಿಸಿದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.