ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳ ಸ್ಥಳಬದಲಾವಣೆ ನಡೆದಿದ್ದು, ಚಿತ್ರದುರ್ಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ಐಪಿಎಸ್ ಅಧಿಕಾರಿ ಕುಶಾಲ್ ಚೌಕ್ಸೆ ಅವರನ್ನು ನೇಮಕ ರಾಜ್ಯ ಸರ್ಕಾರ ಬುಧವಾರ (ಸೆಪ್ಟೆಂಬರ್ 23, 2026) ಅಧಿಕೃತ ಆದೇಶ ಹೊರಡಿಸಿದೆ.
ಬೆಂಗಳೂರಿನಿಂದ ಕೋಟೆನಾಡಿಗೆ ನಿಯೋಜನೆ:
2018ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಕುಶಾಲ್ ಚೌಕ್ಸೆ (Kushal Chouksey) ಅವರು ಇದುವರೆಗೂ ಬೆಂಗಳೂರು ನಗರ ಪೊಲೀಸ್ ಆಡಳಿತ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ - Administration) ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ವರ್ಗಾಯಿಸಿ, ಮುಂದಿನ ಆದೇಶದವರೆಗೆ ಹುದ್ದೆಯಲ್ಲಿ ಮುಂದುವರಿಯಲು ಸೂಚಿಸಲಾಗಿದೆ.
ರಂಜಿತ್ ಕುಮಾರ್ ಬಂಡಾರು ವರ್ಗಾವಣೆ:
ಚಿತ್ರದುರ್ಗ ಜಿಲ್ಲಾ ಎಸ್‌ಪಿಯಾಗಿದ್ದ ರಂಜಿತ್ ಕುಮಾರ್ ಬಂಡಾರು (Ranjit Kumar Bandaru) ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಕುಶಾಲ್ ಚೌಕ್ಸೆ ಅವರ ನಿಯೋಜನೆಯಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಅವರು ರಾಜ್ಯಪಾಲರ ಆದೇಶದ ಮೇರೆಗೆ ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..
