ಬೆಂಗಳೂರು : ಆರ್ಥಿಕ ಇಲಾಖೆಯು ಹಣಕಾಸಿನ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ಮತ್ತು ಎಚ್ಚರಿಕೆಗಳನ್ನು ನೀಡುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ದಿವಾಳಿಯಾಗಿದೆ ಅಥವಾ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸುವ ವೇಳೆ ಸರ್ಕಾರ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷದವರ ಸುಳ್ಳಾರೋಪದ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ತಮ್ಮ ಮಾತಿನ ಆರಂಭದಲ್ಲಿ ಹಣಕಾಸಿನ ವಿಚಾರವನ್ನು ಪ್ರಸ್ತಾಪಿಸಿ, ರಾಜ್ಯ ಸರ್ಕಾರ ದಿವಾಳಿಯಾಗಿದೆ, ಸರ್ಕಾರದಲ್ಲಿ ಹಣವಿಲ್ಲ ಹಾಗೂ ಬರ ನಿರ್ವಹಣೆಗೂ ಹಣವಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ ಆರ್ಥಿಕ ಇಲಾಖೆಯ ಸಲಹೆಯನ್ನು ಆಧಾರವಾಗಿಟ್ಟುಕೊಂಡಿದ್ದಾರೆ. ಆದರೆ ಸರ್ಕಾರ ಆರ್ಥಿಕವಾಗಿ ಎಡವದಂತೆ ನೋಡಿಕೊಳ್ಳುವುದು, ಯಾವುದೇ ರೀತಿಯ ತಪ್ಪುಗಳಾಗದಂತೆ ಎಚ್ಚರಿಸುವುದು ಹಾಗೂ ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳಲು ಸಲಹೆ ನೀಡುವುದು ಆರ್ಥಿಕ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಆರ್ಥಿಕ ಇಲಾಖೆ ಇಂತಹ ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡುತ್ತದೆ. ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸದೆ ಹೆಚ್ಚುವರಿ ಹಣ ಖರ್ಚು ಮಾಡಿದರೆ, ಅದಕ್ಕೆ ಹಣವನ್ನು ಎಲ್ಲಿಂದ ಹೊಂದಿಸಬೇಕು ಎಂಬ ಪ್ರಶ್ನೆಯನ್ನು ಆರ್ಥಿಕ ಇಲಾಖೆ ಮುಂದಿಡುತ್ತದೆ. ಎರಡೂ ಸದನಗಳು ಅನುಮೋದಿಸಿರುವ ಬಜೆಟ್ ಮತ್ತು ಹಣಕಾಸು ಮಸೂದೆಯ ವ್ಯಾಪ್ತಿಯನ್ನು ಮೀರಿ ಖರ್ಚು ಮಾಡಲು ಅವಕಾಶವಿರುವುದಿಲ್ಲ. ಹೆಚ್ಚುವರಿ ವೆಚ್ಚದ ಅಗತ್ಯವಿದ್ದರೆ ಪೂರಕ ಬಜೆಟ್ ಮಂಡಿಸಿ ಸದನದ ಅನುಮೋದನೆ ಪಡೆದು ಖರ್ಚು ಮಾಡಬೇಕು. ಇದು ಸರ್ಕಾರಕ್ಕೆ ಇರಬೇಕಾದ ಕನಿಷ್ಠ ಹಣಕಾಸಿನ ಪ್ರಜ್ಞೆಯಾಗಿದೆ ಎಂದರು.
ಕೆಲವೊಮ್ಮೆ ಸರ್ಕಾರಗಳು ಬಜೆಟ್ ವ್ಯಾಪ್ತಿಯನ್ನು ಮೀರಿ ಹೊಸ ಕಾರ್ಯಕ್ರಮಗಳು ಅಥವಾ ಯೋಜನೆಗಳನ್ನು ಘೋಷಿಸಲು ಮುಂದಾದಾಗ ಆರ್ಥಿಕ ಇಲಾಖೆ ಎಚ್ಚರಿಕೆ ನೀಡುತ್ತದೆ. ಈಗ ಚರ್ಚೆಯಾಗುತ್ತಿರುವ ಸಲಹೆಯೂ ಅದೇ ರೀತಿಯದ್ದಾಗಿದೆ. ಇದನ್ನು ಆಧರಿಸಿ ‘ಸರ್ಕಾರ ದಿವಾಳಿಯಾಗಿದೆ, ಹಣವಿಲ್ಲ’ ಎಂದು ಹೇಳುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸ್ತಾವಿತ ಯೋಜನೆಯನ್ನು 2026-27 ಮತ್ತು 2027-28ನೇ ಸಾಲಿನಲ್ಲಿ ಎರಡು ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದ್ದು, ಬಜೆಟ್‌ನಲ್ಲಿ ಅನುದಾನ ನಿಗದಿಯಾಗದೆ ಹಾಗೂ ಹಣ ಮೀಸಲಿಡದೆ ₹1,000 ಕೋಟಿ ಅಗತ್ಯವಿರುವ ಯೋಜನೆಯನ್ನು ಆರಂಭಿಸುವುದರಿಂದ ನಗದು ಹರಿವು ಮತ್ತು ಹಣಕಾಸು ನಿರ್ವಹಣೆಗೆ ಸಮಸ್ಯೆಯಾಗಬಹುದು ಎಂದು ಆರ್ಥಿಕ ಇಲಾಖೆ ತನ್ನ ಸಲಹೆಯಲ್ಲಿ ತಿಳಿಸಿದೆ ಎಂದರು.
2026-27ನೇ ಸಾಲಿನಲ್ಲಿ ವಿತ್ತೀಯ ಕೊರತೆ ಶೇ.2.95ರಷ್ಟಿದ್ದು, FRBM ಅಡಿ ಅನುಮತಿಸಲಾದ ಮಿತಿ ಶೇ.3ರಷ್ಟಿದೆ. ಆದಾಯ ಕೊರತೆ ₹22,957 ಕೋಟಿಯಷ್ಟಿದೆ. GSDPಗೆ ಒಟ್ಟು ಹೊಣೆಗಾರಿಕೆ ಶೇ.24.94ರಷ್ಟಿದ್ದು, ಅದು ಶೇ.25ರ ಮಿತಿಯ ಸಮೀಪದಲ್ಲಿದೆ. ಹೀಗಾಗಿ ನಿಗದಿತ ಹಣಕಾಸಿನ ಮಿತಿಯನ್ನು ಮೀರದಂತೆ ಎಚ್ಚರಿಸುವುದು ಆರ್ಥಿಕ ಇಲಾಖೆಯ ಕರ್ತವ್ಯ ಎಂದು ಹೇಳಿದರು.
ಹೊಸ ಯೋಜನೆಗಳಿಗೆ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣ ಅಥವಾ ಈಗಾಗಲೇ ಅನುಮೋದಿಸಿರುವ ಅನುದಾನಗಳ ಮರುಹಂಚಿಕೆ ಅಂತಿಮಗೊಳ್ಳುವವರೆಗೆ ಹಣಕಾಸು ಒದಗಿಸುವುದು ಕಷ್ಟವಾಗಬಹುದು. ಹೊಸ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಅಂತಿಮಗೊಳಿಸುವವರೆಗೆ ಸ್ವಲ್ಪ ಸಮಯ ಕಾಯುವುದು ಸೂಕ್ತ ಎಂದು ಆರ್ಥಿಕ ಇಲಾಖೆ ತಿಳಿಸಿದೆ. ಇದು ಆರ್ಥಿಕ ಸಲಹೆಯೇ ಹೊರತು ಸರ್ಕಾರದಲ್ಲಿ ಹಣವಿಲ್ಲ ಎಂಬ ಹೇಳಿಕೆಯಲ್ಲ ಎಂದು ತಿಳಿಸಿದರು.
ಈ ರೀತಿಯ ಸಲಹೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರಕ್ಕೆ ಮಾತ್ರ ನೀಡಲಾಗಿದೆ ಎಂಬುದು ಸರಿಯಲ್ಲ. ಹಿಂದಿನ ಸರ್ಕಾರಗಳಿಗೂ ಆರ್ಥಿಕ ಇಲಾಖೆ ಇದೇ ರೀತಿಯ ಎಚ್ಚರಿಕೆಗಳನ್ನು ನೀಡಿದೆ ಎಂದು ಡಾ. ಜಿ. ಪರಮೇಶ್ವರ ಅವರು ಹೇಳಿದರು.
2022ರ ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಹೆಚ್ಚುತ್ತಿರುವ ಬದ್ಧತಾ ಖರ್ಚು ಮತ್ತು ಸೀಮಿತ ಆದಾಯದ ಆಯ್ಕೆಗಳಿಂದಾಗಿ ಆದಾಯ ಮಿಗತೆ ಬಜೆಟ್ ಮಂಡಿಸುವುದು ಕಷ್ಟವಾಗಬಹುದು ಎಂದು ಆರ್ಥಿಕ ಇಲಾಖೆ ಎಚ್ಚರಿಸಿತ್ತು.
2023ರ ಫೆಬ್ರವರಿಯಲ್ಲಿ ಚುನಾವಣೆ ಸಮೀಪಿಸುತ್ತಿದ್ದ ಸಂದರ್ಭದಲ್ಲಿ ಏಳನೇ ವೇತನ ಆಯೋಗವನ್ನು ಜಾರಿಗೊಳಿಸಲು ಸರ್ಕಾರ ಮುಂದಾದಾಗಲೂ ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿತ್ತು. ಅದನ್ನು ತಕ್ಷಣ ಜಾರಿಗೊಳಿಸಿದರೆ ಮುಂದಿನ ಹಣಕಾಸು ವರ್ಷಕ್ಕೆ ಹೊರೆ ವರ್ಗಾವಣೆಯಾಗಬಹುದು, FRBM ಮಿತಿಯ ಮೇಲೆ ಪರಿಣಾಮ ಬೀರಬಹುದು ಹಾಗೂ ಗಣನೀಯ ಪ್ರಮಾಣದ ಹೆಚ್ಚುವರಿ ಸಾಲದ ಅಗತ್ಯ ಎದುರಾಗಬಹುದು ಎಂದು ತಿಳಿಸಿತ್ತು ಎಂದರು.
ಅದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಸಲಹೆ. ಹಾಗೆಂದು ಆ ಸರ್ಕಾರ ದಿವಾಳಿಯಾಗಿತ್ತು ಎಂದು ಹೇಳಲು ಸಾಧ್ಯವೇ? ಆರ್ಥಿಕ ಇಲಾಖೆ ಇಂತಹ ಸಲಹೆ ನೀಡುವುದು ಅದರ ಸಹಜ ಕಾರ್ಯವಿಧಾನ ಎಂದು ಹೇಳಿದರು.
ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿಯೂ ಆರ್ಥಿಕ ಇಲಾಖೆ ಸಲಹೆ ನೀಡಿತ್ತು. 2020ರ ಜನವರಿಯಲ್ಲಿ ರಾಜ್ಯದ ಸ್ವಂತ ಆದಾಯ ಸಂಗ್ರಹ ಗುರಿಯ ಸುಮಾರು ಶೇ.70ರ ಮಟ್ಟಕ್ಕೆ ಕುಸಿದಿದ್ದು, ಕೇಂದ್ರದ ತೆರಿಗೆ ವರ್ಗಾವಣೆ ಸುಧಾರಿಸದಿದ್ದರೆ ರಾಜ್ಯ ಗಂಭೀರ ಹಣಕಾಸಿನ ಸಂಕಷ್ಟ ಎದುರಿಸಬಹುದು ಎಂದು ಎಚ್ಚರಿಸಲಾಗಿತ್ತು. ಅದು ಕೋವಿಡ್ ಸಂದರ್ಭವೂ ಆಗಿರಬಹುದು. ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವುದು ಆರ್ಥಿಕ ಇಲಾಖೆಯ ಕರ್ತವ್ಯವಾಗಿದೆ ಎಂದರು.
ಹೀಗಾಗಿ, ಆರ್ಥಿಕ ಇಲಾಖೆಯ ಸಲಹೆಯನ್ನು ಮುಂದಿಟ್ಟುಕೊಂಡು ‘ರಾಜ್ಯ ಸರ್ಕಾರ ದಿವಾಳಿಯಾಗಿದೆ’ ಅಥವಾ ‘ಸರ್ಕಾರದ ಹಣಕಾಸಿನ ಸ್ಥಿತಿ ಚೆನ್ನಾಗಿಲ್ಲ’ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತು ಎಂದು ಡಾ. ಜಿ. ಪರಮೇಶ್ವರ ಅವರು ಸದನದಲ್ಲಿ ಸ್ಪಷ್ಟಪಡಿಸಿದರು.