LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

'ಕೈಮಗ್ಗ ಕ್ಷೇತ್ರ'ವೂ ಲಾಭದಾಯಕ: 'ಚರಕ'ದ ಯಶಸ್ಸು ಬಿಚ್ಚಿಟ್ಟ 'ರಂಗಕರ್ಮಿ ಪ್ರಸನ್ನ'

ಶಿವಮೊಗ್ಗ: ಗ್ರಾಮೀಣ ಭಾಗದ ಬಡಜನರ ಬದುಕನ್ನು ಕಟ್ಟಿಕೊಡುವಲ್ಲಿ ಮತ್ತು ಪರಿಸರಸ್ನೇಹಿ ಉತ್ಪಾದನೆಯಲ್ಲಿ ಗ್ರಾಮೋದ್ಯೋಗ ಅತ್ಯಂತ ಯಶಸ್ವಿ ಮಾದರಿಯಾಗಬಲ್ಲದು ಎಂಬುದನ್ನು ಹೆಗ್ಗೋಡಿನ ‘ಚರಕ’ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘವು ಪ್ರತ್ಯಕ್ಷವಾಗಿ ನಿರೂಪಿಸಿದೆ. ಕೈಮಗ್ಗ ಕ್ಷೇತ್ರವೆಂದರೆ ಮುಳುಗುತ್ತಿರುವ ಉದ್ಯಮ ಎಂಬ ಸರ್ಕಾರದ ತಪ್ಪು ಕಲ್ಪನೆಯನ್ನು ಚರಕ ಸಂಸ್ಥೆ ಸುಳ್ಳು ಮಾಡಿದೆ ಎಂದು ಖ್ಯಾತ ರಂಗಕರ್ಮಿ ಹಾಗೂ ಚರಕ ಸಂಸ್ಥೆಯ ಮುಖ್ಯಸ್ಥರಾದಂತ ಪ್ರಸನ್ನ ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊನ್ನೇಸರದಲ್ಲಿರುವಂತ ಶ್ರಮಜೀವಿ ಆಶ್ರಮದಲ್ಲಿ ಚರಕ ಸಂಸ್ಥೆ ಆರಂಭವಾಗಿ ನಾಲ್ಕು ದಶಕಗಳು (40 ವರ್ಷಗಳು) ಸಂದಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳಿಗೆ ಸಂಸ್ಥೆಯ ಸಮಗ್ರ ಕಾರ್ಯವೈಖರಿ, ಗ್ರಾಮೀಣ ಜನರ ಜೀವನೋಪಾಯಕ್ಕೆ ಇದು ಒದಗಿಸಿರುವ ಆಸರೆ ಹಾಗೂ ಉತ್ಪಾದನಾ ಪ್ರಕ್ರಿಯೆಯನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾಲ್ಕು ದಶಕಗಳ ಸಾಧನೆ ಮತ್ತು ಮಾದರಿ

ಚರಕ ಸಂಸ್ಥೆ ಆರಂಭವಾಗಿ 40 ವರ್ಷಗಳಾಗಿವೆ. ಈ ಹಿಂದೆ ವಿವಿಧ ಕಾರ್ಯಕ್ರಮಗಳು ನಡೆದಾಗ ಮಾಧ್ಯಮದವರು ಬಂದು ವರದಿ ಮಾಡಿದ್ದೀರಿ. ಆದರೆ ಚರಕ ಎಂದರೇನು, ಇದನ್ನು ಯಾಕೆ ಮಾಡುತ್ತಿದ್ದೇವೆ, ಇದರಿಂದ ಗ್ರಾಮೀಣ ಬಡವರಿಗೆ ಯಾವ ರೀತಿ ಪ್ರಯೋಜನವಾಗುತ್ತದೆ ಮತ್ತು ಎಷ್ಟು ಜೀವನೋಪಾಯಗಳು (Livelihoods) ಸೃಷ್ಟಿಯಾಗುತ್ತವೆ ಎಂಬುದನ್ನು ಇಲ್ಲಿಯವರೆಗೆ ವಿವರವಾಗಿ ಹೇಳಿರಲಿಲ್ಲ. ಬರೀ ಬಾಯಿಮಾತಿನ ಬೊಗಳೆಯಾಗಬಾರದು, ಮೊದಲು ಒಂದು ಯಶಸ್ವಿ ಮಾದರಿಯನ್ನು ಕಟ್ಟಿ ತೋರಿಸಿ ನಂತರ ಕರೆಯಬೇಕು ಎಂಬ ಕಾರಣಕ್ಕೆ ಕಾಯ್ದಿದ್ದೆವು. ಇಂದು ಆ ಮಾದರಿಯನ್ನು ಕಟ್ಟಿ ಧೈರ್ಯವಾಗಿ ನಿಮ್ಮ ಮುಂದೆ ನಿಂತಿದ್ದೇವೆ ಎಂದರು.

ರಾಷ್ಟ್ರಮಟ್ಟದ ಮನ್ನಣೆ ಮತ್ತು ಬೃಹತ್ ಉತ್ಪಾದನೆ

ಚರಕ ಸಂಸ್ಥೆಗೆ ರಾಷ್ಟ್ರಮಟ್ಟದಲ್ಲಿ ಸಂದಿರುವ ಹೆಗ್ಗಳಿಕೆಗಳನ್ನು ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರದ ನ್ಯಾಷನಲ್ ಹ್ಯಾಂಡ್‌ಲೂಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (NHDC) ಈ ವರ್ಷ ಚರಕ ಸಂಸ್ಥೆಗೆ ‘ಬೆಸ್ಟ್ ಬ್ರಾಂಡ್ ಇನ್ ಹ್ಯಾಂಡ್‌ಲೂಮ್ಸ್’ ಪ್ರಶಸ್ತಿ ನೀಡಿ ಗೌರವಿಸಿದೆ. ಇಡೀ ದೇಶದಲ್ಲೇ ನೈಸರ್ಗಿಕ ಬಣ್ಣ ಹಾಕಿದ ಕೈಮಗ್ಗ ಬಟ್ಟೆಯ ಕ್ಷೇತ್ರದಲ್ಲಿ (Natural dyed handloom) ಚರಕ ಉತ್ಪಾದಿಸುತ್ತಿರುವಷ್ಟು ಪ್ರಮಾಣದ ಬಟ್ಟೆಯನ್ನು ಬೇರೆ ಯಾವ ಸಂಸ್ಥೆಯೂ ಉತ್ಪಾದಿಸುತ್ತಿಲ್ಲ ಎಂಬುದು ನಮ್ಮ ಎರಡನೇ ಹೆಗ್ಗಳಿಕೆ ಎಂದು ವಿವರಿಸಿದರು.

ಸತತ ಲಾಭದ ಹಾದಿಯಲ್ಲಿ ಗ್ರಾಮೀಣ ಸಂಸ್ಥೆ

ಕಳೆದ 40 ವರ್ಷಗಳಲ್ಲಿ ಸಂಸ್ಥೆಯ ಆರಂಭದ ಮೊದಲ ಮೂರು ವರ್ಷಗಳು ಹಾಗೂ ಕೋವಿಡ್ ಸಂಕಷ್ಟದ ಎರಡು ವರ್ಷಗಳನ್ನು ಹೊರತುಪಡಿಸಿದರೆ, ಚರಕ ಪ್ರತಿವರ್ಷವೂ ನಿರಂತರವಾಗಿ ಲಾಭ ಗಳಿಸಿ ತೋರಿಸಿದೆ. ದೇಶವನ್ನಾಳಿದ ಬಿಜೆಪಿ, ಕಾಂಗ್ರೆಸ್, ವಿ.ಪಿ. ಸಿಂಗ್ ಅಥವಾ ದೇವೇಗೌಡರ ಸರ್ಕಾರಗಳಿರಲಿ, ಯಾವುದೇ ರಾಜಕೀಯ ಪಕ್ಷದ ಸರ್ಕಾರಗಳೂ ಈ ಕೈಮಗ್ಗ ಕ್ಷೇತ್ರವನ್ನು ಒಂದು ‘ಸನ್‌ರೈಸ್ ಇಂಡಸ್ಟ್ರಿ’ (ಬೆಳೆಯುತ್ತಿರುವ ಭವಿಷ್ಯದ ಉದ್ಯಮ) ಎಂದು ಪರಿಗಣಿಸಲೇ ಇಲ್ಲ. ಬದಲಿಗೆ ಇದು ‘ಸನ್‌ಸೆಟ್ ಇಂಡಸ್ಟ್ರಿ’ (ಮುಳುಗುತ್ತಿರುವ ಉದ್ಯಮ) ಎಂಬಂತೆ ನೋಡಿ, ಸಾಯುತ್ತಿರುವವರಿಗೆ ಬಾಯಿಗೆ ಹನಿ ನೀರು ಬಿಟ್ಟಂತೆ ಸಣ್ಣಪುಟ್ಟ ಸಹಾಯ ಮಾಡುತ್ತಾ ಬಂದಿವೆ ಎಂದರು.

ಟಾಟಾ, ಬಿರ್ಲಾ, ಅಂಬಾನಿ, ಅದಾನಿಗಳ ಬೃಹತ್ ಕಾರ್ಪೊರೇಟ್ ಉದ್ದಿಮೆಗಳೇ ನಾಳಿನ ಉದ್ದಿಮೆಗಳು ಎಂಬ ತಪ್ಪು ಕಲ್ಪನೆ ಸರ್ಕಾರಗಳಲ್ಲಷ್ಟೇ ಅಲ್ಲದೆ ಸಾಮಾನ್ಯ ಜನರಲ್ಲೂ ಬೇರೂರಿದೆ. ಆದರೆ, ಗ್ರಾಮೋದ್ಯೋಗವೂ ವರ್ಷದಿಂದ ವರ್ಷಕ್ಕೆ ಲಾಭದಾಯಕವಾಗಿ ನಡೆಯಬಲ್ಲದು ಎಂಬುದನ್ನು ಚರಕ ಸಾಬೀತುಪಡಿಸಿದೆ ಎಂದು ಸರ್ಕಾರದ ನೀತಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಕಾರ್ಮಿಕರ ಕಲ್ಯಾಣ ಮತ್ತು ಸೌಲಭ್ಯಗಳು

ಸಂಸ್ಥೆಗೆ ಬಂದ ಲಾಭದ ಪ್ರತಿಯೊಂದು ಪೈಸೆಯನ್ನೂ ಇಲ್ಲಿ ಕೆಲಸ ಮಾಡುವ ಬಡ ಕಾರ್ಮಿಕರಿಗೇ ಮರಳಿಸಲಾಗಿದೆ. ಕರ್ನಾಟಕ ಹ್ಯಾಂಡ್‌ಲೂಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (KHDC) ನೀಡುವ ವೇತನಕ್ಕಿಂತಲೂ ಹೆಚ್ಚಿನ ವರಮಾನವನ್ನು ಚರಕದಲ್ಲಿ ಪೀಸ್ ಬೇಸಿಸ್ ಆಧಾರದ ಮೇಲೆ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ದುಡಿಯುತ್ತಿರುವ ಸುಮಾರು 800 ಕಾರ್ಮಿಕರಿಗೆ ಪ್ರತಿವರ್ಷ ಬೋನಸ್, ಪಿಎಫ್ ಮತ್ತು ಉತ್ತಮ ಗುಣಮಟ್ಟದ ಪೌಷ್ಟಿಕ ಊಟದ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕಾರ್ಮಿಕರ ಆರ್ಥಿಕ ಭದ್ರತೆಗಾಗಿ ಪ್ರತ್ಯೇಕ ಬ್ಯಾಂಕ್ ತೆರೆದು ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಹಳ್ಳಿಗಳ ಶ್ರೀಮಂತಿಕೆ ಮತ್ತು ಪರ್ಯಾಯ ಕಾಯಕ

ಪಟ್ಟಣಗಳಿಗೆ ಗುಳೆ ಹೋಗಿರುವ ಬಡವರು ಮತ್ತೆ ಹಳ್ಳಿಗಳಿಗೆ ಮರಳಬೇಕು; ಹಳ್ಳಿಯ ಭಾಷೆ, ಸಂಸ್ಕೃತಿ ಮತ್ತು ಜನಜೀವನ ಶ್ರೀಮಂತಗೊಳ್ಳಬೇಕು ಎಂಬುದು ಸಂಸ್ಥೆಯ ಮೂಲ ಆಶಯ. ಜನರ ವರಮಾನ ಹೆಚ್ಚಿಸಲು ಕೈಮಗ್ಗದ ಜೊತೆಗೆ ಸಾವಯವ ಗೊಬ್ಬರ ತಯಾರಿಕೆ, ಶುದ್ಧ ತರಕಾರಿ ಬೆಳೆಯುವುದು ಸೇರಿದಂತೆ ಹಲವು ಸುಸ್ಥಿರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರಸ್ತುತ ದೇಶದಲ್ಲಿ ಸಾಫ್ಟ್‌ವೇರ್, ಮೊಬೈಲ್ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರಗಳನ್ನು ಬಿಟ್ಟರೆ ಬೇರೆ ಯಾವ ಉದ್ದಿಮೆಗಳೂ ಆರೋಗ್ಯಕರವಾಗಿ ನಡೆಯುತ್ತಿಲ್ಲ. ನಿರುದ್ಯೋಗ ದಿನೇ ದಿನೇ ಮಿತಿಮೀರುತ್ತಿದೆ, ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯ ಹೆಚ್ಚುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪ್ರಕೃತಿ, ಪುರುಷರು ಹಾಗೂ ಮಹಿಳೆಯರನ್ನೆಲ್ಲ ಒಳಗೊಂಡು ಯಾರೊಬ್ಬರಿಗೂ ಹಾನಿಯಾಗದಂತೆ ಸಮೃದ್ಧವಾಗಿ ಬಾಳಿಸಬಲ್ಲ ಶಕ್ತಿ ಗ್ರಾಮೋದ್ಯೋಗಕ್ಕಿದೆ ಎಂದು ಪ್ರತಿಪಾದಿಸಿದರು.

news_1790263240_0_686.webp

ಚರಕದ ನಾಯಕತ್ವ ಮತ್ತು ತಜ್ಞರ ತಂಡ

ಗ್ರಾಮೋದ್ಯೋಗ ಯಶಸ್ವಿಯಾಗಬಲ್ಲದು ಎಂಬ ಈ ಸತ್ಯವನ್ನು ಮಾಧ್ಯಮಗಳು ಜನರಿಗೆ ಮುಟ್ಟಿಸಿದರೆ ನಾಡಿಗೆ ದೊಡ್ಡ ಉಪಕಾರವಾಗಲಿದೆ ಎಂದ ಪ್ರಸನ್ನ ಅವರು, ಸಂಸ್ಥೆಯ ಮುಂಚೂಣಿಯಲ್ಲಿರುವ ತಜ್ಞರ ತಂಡವನ್ನು ಪರಿಚಯಿಸಿದರು. ಸಾಗರದವರೇ ಆದ, ವಿದೇಶಗಳಲ್ಲಿ ಶಿಕ್ಷಣ ಮುಗಿಸಿ ಬಂದು ಸಂಸ್ಥೆಯ ಸಿಇಓ ಆಗಿ ಸೇವೆ ಸಲ್ಲಿಸುತ್ತಿರುವ ಟೆರೆನ್ಸ್ ಪೀಟರ್, ಕಾರ್ಯದರ್ಶಿ ರಮೇಶ್, ಅಧ್ಯಕ್ಷರಾದ ಮಹಾಲಕ್ಷ್ಮಿ ಹಾಗೂ ಡಿಸೈನಿಂಗ್ ಮತ್ತು ಮಾರ್ಕೆಟಿಂಗ್ ವಿಭಾಗವನ್ನು ಮುನ್ನಡೆಸುತ್ತಿರುವ ಕಾರ್ಯಾಧ್ಯಕ್ಷೆ ಪದ್ಮಶ್ರೀ ಅವರನ್ನೊಳಗೊಂಡ ಪರಿಣಿತ ತಂಡವು ಸಂಸ್ಥೆಯನ್ನು ದಕ್ಷತೆಯಿಂದ ಮುನ್ನಡೆಸುತ್ತಿದೆ ಎಂದು ತಿಳಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪನೀರ್’ ಹೆಸರಿನಲ್ಲಿ ಹಾಲು ಹೊರತಾದ ಉತ್ಪನ್ನಗಳ ಮಾರಾಟಕ್ಕೆ FSSAI ನಿಷೇಧ ಪ್ರಸ್ತಾವನೆ; ಲೇಬಲಿಂಗ್ ನಲ್ಲಿ ಬದಲಾವಣೆ ಕೋರಿಕೆಸಾಗರ ನಗರ DSS ಸಂಚಾಲಕರಾಗಿ ವೆಂಕಟೇಶ್ ಗಾಂಧಿನಗರ ನೇಮಕ: ಸಂಘಟನೆ ಬಲವರ್ಧನೆಗೆ ಲಕ್ಷ್ಮಣ್ ಸಾಗರ್ ಕರೆBREAKING: ಸೌಜನ್ಯ ಕೊಲೆ ಕೇಸ್: ರಾಜ್ಯ ಸರ್ಕಾರದಿಂದ ಮರುತನಿಖೆಗೆ IPS ಅಧಿಕಾರಿ ಶಶಿಕುಮಾರ್ ನೇತೃತ್ವದಲ್ಲಿ SIT ರಚಿಸಿ ಆದೇಶರಾಜ್ಯದಲ್ಲಿ 'ರೈತರ ಸಾಲ ಮನ್ನಾ' ಬಗ್ಗೆ ಸದನದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ?ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಮುಖ ಆರೋಪಿ ಅಭಿಷೇಕ್ ಕುಮಾರ್ ಅರೆಸ್ಟ್ಶಿವಮೊಗ್ಗದಲ್ಲಿ 1 ಲಕ್ಷ ಲಂಚ ಸ್ವೀಕರಿಸುವಾಗಲೇ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ'ಕೈಮಗ್ಗ ಕ್ಷೇತ್ರ'ವೂ ಲಾಭದಾಯಕ: 'ಚರಕ'ದ ಯಶಸ್ಸು ಬಿಚ್ಚಿಟ್ಟ 'ರಂಗಕರ್ಮಿ ಪ್ರಸನ್ನ'ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಗವಿ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟನೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆBREAKING: ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ: ಸಿಎಂ ಡಿ.ಕೆ ಶಿವಕುಮಾರ್ ಘೋಷಣೆಆರ್ಥಿಕ ಇಲಾಖೆಯ ಸಲಹೆಯನ್ನು ಸರ್ಕಾರ ದಿವಾಳಿಯಾಗಿದೆ ಎಂದು ಅರ್ಥೈಸಲಾಗದು: ಡಾ. ಜಿ. ಪರಮೇಶ್ವರ