LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಕಠಿಣ ಕ್ರಮ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಗೃಹ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಜಂಟಿ ವಿಮರ್ಶಾ ಸಭೆ ಇಂದು ವಿಕಾಸಸೌಧದಲ್ಲಿ ನಡೆಯಿತು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಾರಿಗೆ ಸಚಿವ ಭೈರತಿ ಸುರೇಶ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಂಚಾರಿ ವ್ಯವಸ್ಥೆಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಸಂಚಾರಿ ನಿಯಮಗಳನ್ನು ಪದೇಪದೇ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯದ ಕುರಿತು ಸಭೆಯಲ್ಲಿ ಒತ್ತು ನೀಡಲಾಯಿತು. ವಿವಿಧ ಸಂಚಾರಿ ಉಲ್ಲಂಘನೆಗಳಿಗೆ ಅಂಕಗಳನ್ನು ನಿಗದಿಪಡಿಸಿ, ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ಅಂಕಾಧಾರಿತ ಚಾಲನಾ ಪರವಾನಗಿ ವ್ಯವಸ್ಥೆ ಜಾರಿಗೆ ತರುವ ಕುರಿತು ಚರ್ಚಿಸಲಾಯಿತು. ಈ ವ್ಯವಸ್ಥೆ ಜಾರಿಗೆ ಅಗತ್ಯವಿರುವ ಕಾನೂನು ಕ್ರಮಗಳ ಬಗ್ಗೆಯೂ ಪರಿಶೀಲಿಸಲಾಯಿತು.

ಸಾರಥಿ–ಇ-ಚಲನ್ ವ್ಯವಸ್ಥೆ ಸಂಯೋಜನೆ

ಚಾಲನಾ ಪರವಾನಗಿ ಅಮಾನತು ಹಾಗೂ ಸಂಚಾರಿ ಉಲ್ಲಂಘನೆಗಳ ಮಾಹಿತಿಯ ಸಮಗ್ರ ನಿರ್ವಹಣೆಗಾಗಿ ಸಾರಿಗೆ ಇಲಾಖೆಯ ಸಾರಥಿ ವ್ಯವಸ್ಥೆಯನ್ನು ಬೆಂಗಳೂರು ಸಂಚಾರ ಪೊಲೀಸರ ಇ-ಚಲನ್ ವ್ಯವಸ್ಥೆಯೊಂದಿಗೆ ನೇರವಾಗಿ ಸಂಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ವ್ಯವಸ್ಥೆಯಿಂದ ಸಂಚಾರಿ ಪೊಲೀಸರಿಗೆ ಸ್ಥಳದಲ್ಲಿಯೇ ಚಾಲನಾ ಪರವಾನಗಿಯ ಸಿಂಧುತ್ವ ಪರಿಶೀಲಿಸಲು, ಚಾಲಕರ ಹಿಂದಿನ ಉಲ್ಲಂಘನೆಗಳ ವಿವರ ಪಡೆಯಲು ಹಾಗೂ ಹೊಸದಾಗಿ ದಾಖಲಿಸುವ ಪ್ರಕರಣಗಳನ್ನು ಚಾಲಕರ ಡಿಜಿಟಲ್ ದಾಖಲೆಯೊಂದಿಗೆ ನೇರವಾಗಿ ಜೋಡಿಸಲು ಸಾಧ್ಯವಾಗಲಿದೆ. ಇದರಿಂದ ಕಾಗದ ಆಧಾರಿತ ಪ್ರಕ್ರಿಯೆ ಕಡಿಮೆಯಾಗಿ, ಸಂಚಾರಿ ನಿಯಮಗಳ ಜಾರಿ ಮತ್ತಷ್ಟು ಪರಿಣಾಮಕಾರಿಯಾಗುವ ನಿರೀಕ್ಷೆಯಿದೆ.

ಸಂಚಾರಿ ನಿಯಮ ಉಲ್ಲಂಘನೆಗಳಿಗೆ ದಂಡ ಹೆಚ್ಚಳ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ತೊಂದರೆ ಉಂಟುಮಾಡುವ ಸಂಚಾರಿ ಉಲ್ಲಂಘನೆಗಳಿಗೆ ವಿಧಿಸಲಾಗುತ್ತಿರುವ ದಂಡದ ಮೊತ್ತವನ್ನು ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ, ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ, ಅನಧಿಕೃತ ವಾಹನ ನಿಲುಗಡೆ, ನಿಲುಗಡೆ ನಿಷೇಧಿತ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಸಂಚಾರ ಸಂಕೇತ ಉಲ್ಲಂಘಿಸುವುದು ಹಾಗೂ ಸಾರ್ವಜನಿಕ ಸಂಚಾರದ ಮುಕ್ತ ಹರಿವಿಗೆ ಅಡ್ಡಿಪಡಿಸುವಂತಹ ಉಲ್ಲಂಘನೆ ಹಾಗೂ ಮರುಉಲ್ಲಂಘನೆಗೆ ದಂಡ ಹೆಚ್ಚಿಸುವ ಪ್ರಸ್ತಾವನೆ ಸಭೆಯಲ್ಲಿ ಚರ್ಚಿಸಲಾಯಿತು. ಅಪಾಯಕಾರಿ ಚಾಲನೆಗೆ ಸಂಬಂಧಿಸಿದಂತೆ ದ್ವಿಚಕ್ರ ದಂಡ ಹೆಚ್ಚಿಸುವ ಪ್ರಸ್ತಾವನೆಯೂ ಸಭೆಯ ಚರ್ಚೆಯಲ್ಲಿತ್ತು.

ಪದೇಪದೇ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ

ಐದು ಅಥವಾ ಅದಕ್ಕಿಂತ ಹೆಚ್ಚು ಸಂಚಾರಿ ಉಲ್ಲಂಘನೆಗಳನ್ನು ಮಾಡಿರುವವರನ್ನು ಗುರುತಿಸಿ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ಬಾಕಿ ಇರುವ ದಂಡ ವಸೂಲಿ ಮಾಡುವುದು ಹಾಗೂ ಅಗತ್ಯವಿರುವಲ್ಲಿ ವಾಹನಗಳನ್ನು ತಡೆಹಿಡಿಯುವುದು ಅಥವಾ ಕಪ್ಪುಪಟ್ಟಿಗೆ ಸೇರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪದೇಪದೇ ಬಾಕಿ ದಂಡ ಪಾವತಿಸದ ವಾಹನಗಳ ವಿರುದ್ಧವೂ ಸೂಕ್ತ ನಿರ್ಬಂಧಗಳನ್ನು ಜಾರಿಗೊಳಿಸುವ ಕುರಿತು ಪರಿಶೀಲಿಸಲಾಯಿತು. ಸಂಬಂಧಿತ ಕಾನೂನು ಮತ್ತು ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡುವ ಸಾಧ್ಯತೆಯನ್ನೂ ಸಭೆಯಲ್ಲಿ ಚರ್ಚಿಸಲಾಯಿತು.

ಚಾಲನಾ ಪರವಾನಗಿ ಅಮಾನತಿಗೆ ಮುನ್ನ ಕಡ್ಡಾಯ ತರಬೇತಿ

ಚಾಲನಾ ಪರವಾನಗಿ ಅಮಾನತು ಅಥವಾ ರದ್ದುಪಡಿಸುವ ಪ್ರಕ್ರಿಯೆಗೆ ಒಳಪಡುವ ಪದೇಪದೇ ನಿಯಮ ಉಲ್ಲಂಘಿಸುವ ಚಾಲಕರಿಗೆ ಕಡ್ಡಾಯ ರಸ್ತೆ ಸುರಕ್ಷತಾ ತರಬೇತಿ ಮತ್ತು ಅರಿವು ಕಾರ್ಯಕ್ರಮ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ರಕ್ಷಣಾತ್ಮಕ ಚಾಲನೆ, ರಸ್ತೆ ಸುರಕ್ಷತಾ ನಿಯಮಗಳು ಹಾಗೂ ಚಾಲಕರ ವರ್ತನೆಯಲ್ಲಿ ಸುಧಾರಣೆ ತರಲು ಅಗತ್ಯ ತರಬೇತಿ ನೀಡುವುದು ಇದರ ಉದ್ದೇಶವಾಗಿದ್ದು, ತರಬೇತಿ ಪೂರ್ಣಗೊಳಿಸಿರುವ ಮಾಹಿತಿಯನ್ನು ಸಂಬಂಧಿತ ಡಿಜಿಟಲ್ ವ್ಯವಸ್ಥೆಯಲ್ಲಿ ದಾಖಲಿಸುವ ಕುರಿತು ಸಹ ಪರಿಶೀಲಿಸಲಾಯಿತು.

ಅರೆ ಹೆಲ್ಮೆಟ್‌ಗಳ ಉತ್ಪಾದನೆಗೆ ಕಡಿವಾಣ

ನಗರದಲ್ಲಿ ಅರೆ ಹೆಲ್ಮೆಟ್‌ಗಳನ್ನು ಧರಿಸಿ ದ್ವಿಚಕ್ರ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಹೆಲ್ಮೆಟ್‌ಗಳ ಉತ್ಪಾದನೆ ಹಾಗೂ ಮಾರಾಟದ ಮೇಲೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ರಸ್ತೆ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರದ ಅರೆ ಹೆಲ್ಮೆಟ್‌ಗಳ ಉತ್ಪಾದನೆಯನ್ನೇ ನಿಷೇಧಿಸುವುದು, ಇಂತಹ ಹೆಲ್ಮೆಟ್‌ಗಳನ್ನು ತಯಾರಿಸುವ ಉತ್ಪಾದಕರು ಹಾಗೂ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.

ಅದೇ ರೀತಿ, ಶಬ್ದ ಮಾಲಿನ್ಯ ಹಾಗೂ ರಸ್ತೆ ಸುರಕ್ಷತೆಗೆ ಕಾರಣವಾಗುವ ಅನಧಿಕೃತ ಹಾರ್ನ್‌ಗಳು, ಮಾರ್ಪಡಿಸಿದ ಸೈಲೆನ್ಸರ್‌ಗಳು ಹಾಗೂ ಅತಿಯಾದ ಬೆಳಕು ನೀಡುವ ಎಲ್‌ಇಡಿ ದೀಪಗಳ ಮಾರಾಟ ಮತ್ತು ಬಳಕೆಯ ವಿರುದ್ಧವೂ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.

ಕಡಿಮೆ ವೇಗದ ಬ್ಯಾಟರಿ ಚಾಲಿತ ವಾಹನಗಳಿಗೂ ಅಗತ್ಯ ನಿಯಮ

ಕಡಿಮೆ ವೇಗದ ಬ್ಯಾಟರಿ ಚಾಲಿತ ವಿದ್ಯುತ್‌ ದ್ವಿಚಕ್ರ ವಾಹನಗಳಿಗೆ ಪ್ರಸ್ತುತ ಕೆಲವು ಸಂಚಾರಿ ನಿಯಮಗಳು, ಹೆಲ್ಮೆಟ್‌ ಧರಿಸುವಿಕೆ ಹಾಗೂ ನೋಂದಣಿ ಸೇರಿದಂತೆ ನಿರ್ದಿಷ್ಟ ನಿಯಂತ್ರಣಗಳು ಅನ್ವಯಿಸದಿರುವ ಹಿನ್ನೆಲೆಯಲ್ಲಿ, ಇಂತಹ ವಾಹನಗಳ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳು ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ರಸ್ತೆ ಸುರಕ್ಷತೆ ಹಾಗೂ ಸಂಚಾರ ಶಿಸ್ತು ಕಾಪಾಡುವ ದೃಷ್ಟಿಯಿಂದ ಇಂತಹ ವಾಹನಗಳಿಗೂ ಅಗತ್ಯ ಸಂಚಾರಿ ನಿಯಮಗಳನ್ನು ಅನ್ವಯಿಸುವುದು, ವಾಹನಗಳ ಗುರುತಿಸುವಿಕೆ ಹಾಗೂ ಚಾಲಕರ ಹೊಣೆಗಾರಿಕೆಯನ್ನು ಖಚಿತಪಡಿಸುವುದು ಸೇರಿದಂತೆ ಸೂಕ್ತ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಒಂದು ನಗರ–ಒಂದು ದರ ನೀತಿ

ನಗರದಲ್ಲಿ ವಿವಿಧ ಸಾರಿಗೆ ಸಂಸ್ಥೆಗಳು ಹಾಗೂ ಸಂಚಾರ ಸೇವಾ ಸಂಸ್ಥೆಗಳು ವಿಧಿಸುವ ದರಗಳಲ್ಲಿ ವ್ಯತ್ಯಾಸ ಇರುವ ಹಿನ್ನೆಲೆಯಲ್ಲಿ “ಒಂದು ನಗರ–ಒಂದು ದರ” ನೀತಿ ಜಾರಿಗೆ ತರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಯಾಣಿಕರಿಗೆ ಕೈಗೆಟುಕುವ ಮತ್ತು ಸ್ಪಷ್ಟ ದರ ವ್ಯವಸ್ಥೆ ಒದಗಿಸುವುದು, ದರ ಏರಿಳಿತವನ್ನು ನಿಯಂತ್ರಿಸುವುದು, ವಿವಿಧ ಸೇವಾ ಸಂಸ್ಥೆಗಳ ನಡುವೆ ನ್ಯಾಯಯುತ ಸ್ಪರ್ಧೆಗೆ ಅವಕಾಶ ಕಲ್ಪಿಸುವುದು ಹಾಗೂ ಅನಗತ್ಯ ವಾಹನ ಸಂಚಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನೀತಿಯ ಕುರಿತು ಪರಿಶೀಲಿಸಲಾಯಿತು.

ಕಾರ್ ಹಂಚಿಕೆ ವ್ಯವಸ್ಥೆಗೆ ಉತ್ತೇಜನ

ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕಾರ್ ಹಂಚಿಕೆ ಮತ್ತು ಪ್ರಯಾಣ ಹಂಚಿಕೆ ವ್ಯವಸ್ಥೆಗೆ ರಾಜ್ಯ ಮಟ್ಟದಲ್ಲಿ ಸೂಕ್ತ ನೀತಿ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಪ್ಲಿಕೇಶನ್‌ ಆಧಾರಿತ ಕಾರ್ ಹಂಚಿಕೆ ಸೇವೆಗಳಿಗೆ ಅಗತ್ಯ ನೀತಿ ರೂಪಿಸುವುದು, ಪಾರ್ಕ್‌–ಆ್ಯಂಡ್‌–ರೈಡ್‌ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಹಂಚಿಕೆ ಸಾರಿಗೆಗೆ ಉತ್ತೇಜನ ನೀಡುವ ಕುರಿತು ಪರಿಶೀಲಿಸಲಾಯಿತು.

ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಕ್ಕೆ ಕಟ್ಟುನಿಟ್ಟಿನ ಅನುಷ್ಠಾನ

ಎಲ್ಲ ಅರ್ಹ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಕಡ್ಡಾಯಗೊಳಿಸುವುದು ಹಾಗೂ ಪ್ರಮಾಣಪತ್ರ ಪಡೆಯದ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬಾಕಿ ಇರುವ ಸಂಚಾರಿ ದಂಡ ಪಾವತಿಸದಿದ್ದಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡದಿರುವುದು ಹಾಗೂ ಸಾರಿಗೆ ಮತ್ತು ಸಂಚಾರಿ ಪೊಲೀಸ್ ಇಲಾಖೆಗಳ ಜಂಟಿ ಕಾರ್ಯಾಚರಣೆ ಕೈಗೊಳ್ಳುವ ಕುರಿತು ಪರಿಶೀಲಿಸಲಾಯಿತು.

ಹಳೆಯ ಹಾಗೂ ಅನರ್ಹ ವಾಹನಗಳ ಸ್ಕ್ರ್ಯಾಪ್ ನೀತಿ

ಹಳೆಯ, ಹೆಚ್ಚಿನ ಮಾಲಿನ್ಯ ಉಂಟುಮಾಡುವ ಹಾಗೂ ಯಾಂತ್ರಿಕವಾಗಿ ಅನರ್ಹವಾಗಿರುವ ವಾಹನಗಳನ್ನು ಹಂತ ಹಂತವಾಗಿ ರಸ್ತೆಗಳಿಂದ ತೆರವುಗೊಳಿಸುವ ಉದ್ದೇಶದಿಂದ ವಾಹನ ಸ್ಕ್ರ್ಯಾಪ್‌ ನೀತಿ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ತೆರಿಗೆ ರಿಯಾಯಿತಿ ಸೇರಿದಂತೆ ಲಭ್ಯವಿರುವ ಪ್ರೋತ್ಸಾಹಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಕುರಿತು ಚರ್ಚಿಸಲಾಯಿತು.

ಮೆಟ್ರೊಗೆ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ

ಮೆಟ್ರೊ ಸೇವೆ ಬಳಸುವ ಪ್ರಯಾಣಿಕರಿಗೆ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಲಭಗೊಳಿಸುವ ಉದ್ದೇಶದಿಂದ ಹಂಚಿಕೆ ಆಟೋ ಸೇವೆಗಳಿಗೆ ಸೂಕ್ತ ಮಾರ್ಗ, ನಿಗದಿತ ದರ ಹಾಗೂ ಪರವಾನಗಿ ವ್ಯವಸ್ಥೆ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದರಿಂದ ಮೆಟ್ರೊ ಬಳಕೆ ಹೆಚ್ಚಿಸುವುದರ ಜೊತೆಗೆ ಖಾಸಗಿ ವಾಹನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.

ಬಿಎಂಟಿಸಿ ವಿದ್ಯುತ್ ಬಸ್‌ಗಳ ತ್ವರಿತ ತೆರವಿಗೆ ಕ್ರಮ

ನಗರದ ಪ್ರಮುಖ ರಸ್ತೆಗಳ ಮೇಲೆ ಬಿಎಂಟಿಸಿ ವಿದ್ಯುತ್ ಬಸ್‌ಗಳು ಕೆಟ್ಟು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅಂತಹ ವಾಹನಗಳನ್ನು ತ್ವರಿತವಾಗಿ ತೆರವುಗೊಳಿಸಲು ವಿಶೇಷ ತಾಂತ್ರಿಕ ತಂಡ ಹಾಗೂ ತುರ್ತು ಸ್ಪಂದನಾ ವ್ಯವಸ್ಥೆ ರೂಪಿಸುವ ಕುರಿತು ಚರ್ಚಿಸಲಾಯಿತು. ಬಿಎಂಟಿಸಿ ಮತ್ತು ಸಂಚಾರಿ ಪೊಲೀಸರ ನಡುವೆ ಸಮನ್ವಯ ವ್ಯವಸ್ಥೆ ರೂಪಿಸಿ, ಬಸ್‌ಗಳ ದುರಸ್ತಿಗೆ ಹಾಗೂ ರಸ್ತೆ ತೆರವುಗೊಳಿಸುವಿಕೆಗೆ ತ್ವರಿತ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸಲಾಯಿತು.

ಹೊರ ವರ್ತುಲ ರಸ್ತೆಯ ತಂತ್ರಜ್ಞಾನ ವಲಯಗಳಲ್ಲಿ ಸಂಚಾರ ನಿರ್ವಹಣೆ ಸುಧಾರಿಸುವ ನಿಟ್ಟಿನಲ್ಲಿ ಬಿಎಂಟಿಸಿ ಸೇವೆ ವಿಸ್ತರಣೆ, ಮೆಟ್ರೊ ನಿಲ್ದಾಣಗಳಿಂದ ತಂತ್ರಜ್ಞಾನ ಉದ್ಯಾನಗಳಿಗೆ ಪೂರಕ ಬಸ್ ಸೇವೆ, ಗರಿಷ್ಠ ಸಂಚಾರದ ಅವಧಿಯಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಸಂಸ್ಥೆಗಳ ಹಂಚಿಕೆ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಗೃಹ ಮತ್ತು ಸಾರಿಗೆ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಸಂಚಾರಿ ನಿಯಮಗಳ ಪರಿಣಾಮಕಾರಿ ಅನುಷ್ಠಾನ, ರಸ್ತೆ ಸುರಕ್ಷತೆ ಬಲಪಡಿಸುವುದು ಹಾಗೂ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ಒತ್ತು ನೀಡಲಾಯಿತು.

ಸಭೆಯಲ್ಲಿ ಗೃಹ ಇಲಾಖೆ ಅಪರ ಕಾರ್ಯದರ್ಶಿ ರಾಜೇಂದರ್ ಸಿಂಗ್‌ ಕಠಾರಿಯ, ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ, ಸಾರಿಗೆ ಆಯುಕ್ತೆ ಡಾ.ಸೆಲ್ವಮಣಿ, ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಶಿವಕುಮಾರ್‌, ಬಿಎಂಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ ಮೂರ್ತಿ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಪೊಲೀಸ್‌ ಜಂಟಿ ಆಯುಕ್ತ ಕಾರ್ತೀಕ್‌ ರೆಡ್ಡಿ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಗಳೂರು MRPL ಸ್ಫೋಟ: ಕೇಂದ್ರದಿಂದ ಉನ್ನತ ಮಟ್ಟದ ತನಿಖೆಗೆ ಸಚಿವ ಯು.ಟಿ.ಖಾದರ್ ಆಗ್ರಹ!BREAKING: ಬೆಂಗಳೂರಲ್ಲಿ ಸಿನಿಮಾ ಪ್ರದರ್ಶನದ ವೇಳೆ ಥಿಯೇಟರ್ ಮೇಲ್ಛಾವಣಿ ಕುಸಿದು ಮೂವರಿಗೆ ಗಾಯಜೋಗ ಜಲಪಾತವನ್ನು ಸರ್ವಋತು ಪ್ರವಾಸಿ ತಾಣವಾಗಿಸುವ ಕಾಮಗಾರಿ ಚುರುಕುಗೊಳಿಸಿ: ಸಚಿವ ಕೆ.ಜೆ.ಜಾರ್ಜ್ ಸೂಚನೆಜಂತರ್ ಮಂತರ್‌ನಲ್ಲಿ ಮಹಿಳೆಯ ಹೈಡ್ರಾಮಾ; “ವಿಜಯ್ ಬಂದು ತಬ್ಬಿಕೊಳ್ಳುವವರೆಗೆ ನಾನು ಕದಲಲ್ಲ” ಎಂದ ಅಭಿಮಾನಿರೈತರಿಗೆ ಗುಡ್ ನ್ಯೂಸ್: ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣಕ್ಕಾಗಿ 5,547.99 ಕೋಟಿ ರೂ. ಮೌಲ್ಯದ ಬೇಳೆಕಾಳು, ಎಣ್ಣೆಬೀಜಗಳ ಖರೀದಿಗೆ ಅನುಮೋದನೆಮಾಹಿತಿ ಸುರಕ್ಷತೆಯ ವ್ಯವಸ್ಥೆಗಾಗಿ ಬೆಸ್ಕಾಂಗೆ ISO ಪ್ರಮಾಣಪತ್ರಮಂಗಳೂರು ಎಂಆರ್‌ಪಿಎಲ್‌ನಲ್ಲಿ ಭೀಕರ ಬಾಯ್ಲರ್ ಸ್ಫೋಟ: ಓರ್ವ ಸಾವು, 8 ಮಂದಿಗೆ ಗಾಯಮಂಗಳೂರು MRPL ಸ್ಫೋಟ ದುರಂತಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಸಂತಾಪ: ಸಮಗ್ರ ತನಿಖೆಗೆ ಆದೇಶಬಾವಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆಗೆ ಶರಣುಮಣಿಪಾಲ ಕೆಎಂಸಿ ಆಸ್ಪತ್ರೆ ಕಟ್ಟಡದಿಂದ ಜಿಗಿದು ರೋಗಿ ಆತ್ಮಹತ್ಯೆಗೆ ಯತ್ನ: ಐಸಿಯುನಲ್ಲಿ ಚಿಕಿತ್ಸೆ, ಸ್ಥಿತಿ ಗಂಭೀರ!