ಸಾಗರ: ವಿದ್ಯಾರ್ಥಿಗಳಲ್ಲಿ ಕೇವಲ ಚುರುಕುತನ ಮೂಡಿಸುವುದಷ್ಟೇ ಅಲ್ಲದೆ, ಅವರಲ್ಲಿ ಒಗ್ಗಟ್ಟು, ನಾಯಕತ್ವದ ಗುಣ ಹಾಗೂ ತಂಡಸ್ಪೂರ್ತಿಯನ್ನು ಕ್ರೀಡೆಗಳು ಬೆಳೆಸುತ್ತವೆ. ಆದ್ದರಿಂದ ಮಕ್ಕಳಿಗೆ ಶೈಕ್ಷಣಿಕ ಪಠ್ಯದಷ್ಟೇ ಕ್ರೀಡಾ ಚಟುವಟಿಕೆಗಳೂ ಅತ್ಯಗತ್ಯ ಎಂದು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅಭಿಪ್ರಾಯಪಟ್ಟರು.
ನಗರದ ನೆಹರೂ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೋಲು ಗೆಲುವಿಗೆ ಮುನ್ನುಡಿ
ಮಕ್ಕಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಭದ್ರ ಬುನಾದಿ ಹಾಕುತ್ತವೆ ಎಂದ ತಹಶೀಲ್ದಾರ್, ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಹಜ. ಪ್ರತಿಯೊಂದು ಸೋಲೂ ಹೊಸ ಪಾಠ ಕಲಿಸಿ ಮುಂದಿನ ಗೆಲುವಿಗೆ ದಾರಿದೀಪವಾಗುತ್ತದೆ ಎಂದರು. ಜಾಗತಿಕ ಮಟ್ಟದಲ್ಲಿ ಹಾಗೂ ಒಲಿಂಪಿಕ್ಸ್‌ನಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಭಾರತ ಇನ್ನಷ್ಟು ಗಮನಾರ್ಹ ಸಾಧನೆ ಮಾಡಬೇಕಿದೆ. ನಮ್ಮ ಗ್ರಾಮೀಣ ಭಾಗದ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲು ಸೂಕ್ತ ವಾತಾವರಣ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳನ್ನು ತರಬೇತುಗೊಳಿಸುತ್ತಿರುವ ದೈಹಿಕ ಶಿಕ್ಷಕರ ಸೇವೆ ಅನನ್ಯ ಎಂದು ಪ್ರಶಂಸಿಸಿದರು.

ಕ್ರೀಡೆ-ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು: ಮಾಲತೇಶಪ್ಪ
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಶಿಕ್ಷಣ ಮತ್ತು ಕ್ರೀಡೆ ಪರಸ್ಪರ ಪೂರಕ. ಪೋಷಕರು ಕೇವಲ ಅಂಕಗಳಿಕೆಯ ಒತ್ತಡ ಹೇರದೆ, ಮಕ್ಕಳ ಕ್ರೀಡಾಸಕ್ತಿಗೂ ಸಮಾನ ಪ್ರೋತ್ಸಾಹ ನೀಡಬೇಕು. ತಾಲೂಕು ಮಟ್ಟದ ಸ್ಪರ್ಧೆಗಳೇ ಭವಿಷ್ಯದ ರಾಷ್ಟ್ರೀಯ ಕ್ರೀಡಾಪಟುಗಳ ಉಗಮಕ್ಕೆ ಪ್ರಮುಖ ವೇದಿಕೆಯಾಗಿದ್ದು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಸಂಘದಿಂದ ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಭೂಮೇಶ್ ಎ.ಎಸ್., ಪ್ರಮುಖರಾದ ಭೂಕೇಶ್ವರಪ್ಪ, ರಮೇಶ್, ವಿಜಯಕುಮಾರಿ, ರಾಮಚಂದ್ರಪ್ಪ, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. ಶಂಕರ್ ಸ್ವಾಗತಿಸಿದರೆ, ಮುಕ್ತಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಚಂದ್ರಪ್ಪ ಅಳೂರು ವಂದನಾರ್ಪಣೆ ಮಾಡಿದರು.