ಸಾಗರ: ನಿಮ್ಮ ಪರವಾಗಿ ನಾನಿದ್ದೇನೆ. ಹೊಸ ಪಿಎಫ್ ನೀತಿ ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಕಾರ್ಮಿಕರ ಬೆವರಿನ ಹಣಕ್ಕೆ ಅನ್ಯಾಯವಾಗಲು ಬಿಡೋದಿಲ್ಲ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಭಯ ನೀಡಿದ್ದಾರೆ.
ನೌಕರರ ಭವಿಷ್ಯ ನಿಧಿಗೆ (EPFO) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕಠಿಣ ನಿಯಮಾವಳಿಗಳನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ಸಾಗರದ ಷಾಹಿ ಗಾರ್ಮೆಂಟ್ಸ್‌ನ ನೂರಾರು ಮಹಿಳಾ ಕಾರ್ಮಿಕರು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ವೇಳೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಾಹನವನ್ನು ಅಡ್ಡಗಟ್ಟಿದ ನೌಕರರು ತಮ್ಮ ಅಳಲು ತೋಡಿಕೊಂಡರು. ಕಾರ್ಮಿಕರ ಪರ ದೃಢವಾಗಿ ನಿಲ್ಲುವುದಾಗಿ ಭರವಸೆ ನೀಡಿದ ಶಾಸಕರು, ಹೊಸ ನೀತಿ ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಘೋಷಿಸಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನೂರಾರು ಮಹಿಳಾ ನೌಕರರು ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಈ ವೇಳೆ ಇದೇ ಮಾರ್ಗವಾಗಿ ತೆರಳುತ್ತಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಕಾರಿಗೆ ನೌಕರರು ಮುತ್ತಿಗೆ ಹಾಕಿದರು. ತಕ್ಷಣವೇ ವಾಹನದಿಂದ ಕೆಳಗಿಳಿದು ರಸ್ತೆಯಲ್ಲೇ ನಿಂತು ಕಾರ್ಮಿಕರ ಅಹವಾಲುಗಳನ್ನು ಆಲಿಸಿದ ಶಾಸಕರು, ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಕಾರ್ಮಿಕರ ಪರ ನಾನಿದ್ದೇನೆ; ಸಂಘಟಿತ ಹೋರಾಟಕ್ಕೆ ಶಾಸಕರ ಕರೆ
ನೌಕರರನ್ನುದ್ದೇಶಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ಬೆವರು ಸುರಿಸಿ ದುಡಿಯುವ ಹಣಕ್ಕೆ ಕೇಂದ್ರದ ನೀತಿಗಳಿಂದ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ನ್ಯಾಯಯುತ ಹಕ್ಕಿನ ಹೋರಾಟದಲ್ಲಿ ನಿಮ್ಮೊಂದಿಗೆ ನಾನಿದ್ದೇನೆ ಎಂದರು.
ನೌಕರರ ಹಿತದೃಷ್ಟಿಯಿಂದ ಈ ಕರಾಳ ನೀತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವಾಲಯಕ್ಕೆ ಕೂಡಲೇ ಪತ್ರ ಬರೆಯುತ್ತೇನೆ. ಅಷ್ಟೇ ಅಲ್ಲದೆ, ಶೀಘ್ರದಲ್ಲೇ ಶಾಹಿ ಗಾರ್ಮೆಂಟ್ಸ್ ಘಟಕಕ್ಕೆ ನಾನೇ ಖುದ್ದು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸುತ್ತೇನೆ. ಯಾವುದೇ ಕಾರಣಕ್ಕೂ ಧೃತಿಗೆಡದೆ ಸಂಘಟಿತರಾಗಿ ಹಕ್ಕೊತ್ತಾಯ ಮುಂದುವರಿಸಿ ಎಂದು ಧೈರ್ಯ ತುಂಬಿದರು. ಶಾಸಕರ ಭರವಸೆಯ ಮಾತುಗಳನ್ನು ಕೇಳಿದ ಪ್ರತಿಭಟನಾನಿರತ ನೌಕರರು ಸ್ಥಳದಲ್ಲೇ ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.

ಏನಿದು ನೂತನ ಪಿಎಫ್ ನೀತಿ? ನೌಕರರ ತೀವ್ರ ವಿರೋಧವೇಕೆ?
ಇತ್ತೀಚೆಗೆ ಇಪಿಎಫ್‌ಒ ಜಾರಿಗೆ ತಂದಿರುವ ನೂತನ ನಿಯಮಗಳ ಪ್ರಕಾರ, ನೌಕರರು ಕೆಲಸ ಬಿಟ್ಟ ತಕ್ಷಣವೇ ತಮ್ಮ ಸಂಪೂರ್ಣ ಪಿಎಫ್ ಮೊತ್ತವನ್ನು ಹಿಂಪಡೆಯುವುದಕ್ಕೆ ಕಠಿಣ ಮಿತಿಗಳನ್ನು ಹೇರಲಾಗಿದೆ. ಕಡ್ಡಾಯವಾಗಿ ಶೇಕಡಾ 25ರಷ್ಟು ಮೊತ್ತವನ್ನು ನಿವೃತ್ತಿಯವರೆಗೂ ಉಳಿಸಿಕೊಳ್ಳಬೇಕು ಎಂಬ ಷರತ್ತು, ಉದ್ಯೋಗ ಕಳೆದುಕೊಂಡ ನಂತರ ಅಂತಿಮ ಇಪಿಎಫ್ ಕ್ಲೈಮ್ ಮಾಡಲು 12 ತಿಂಗಳ ಕಾಯುವಿಕೆ ಹಾಗೂ ಪಿಂಚಣಿ (ಇಪಿಎಸ್) ಹಿಂಪಡೆಯಲು ಈ ಹಿಂದೆ ಇದ್ದ 2 ತಿಂಗಳ ಕಾಯುವಿಕೆಯ ಅವಧಿಯನ್ನು ಬರೋಬ್ಬರಿ 36 ತಿಂಗಳಿಗೆ (3 ವರ್ಷ) ಹೆಚ್ಚಿಸಿರುವುದು ನೌಕರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಗಾರ್ಮೆಂಟ್ಸ್ ವಲಯದಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ಅನಿವಾರ್ಯ ಕೌಟುಂಬಿಕ ತುರ್ತು ಸಂದರ್ಭಗಳಲ್ಲಿ, ಮಕ್ಕಳ ಮದುವೆ ಅಥವಾ ಅನಾರೋಗ್ಯದ ವೇಳೆ ಕೆಲಸ ಬಿಟ್ಟು ಪಿಎಫ್ ಹಣವನ್ನೇ ಆಶ್ರಯಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವರ್ಷಗಟ್ಟಲೆ ಹಣ ಸಿಗದಂತೆ ಲಾಕ್ ಮಾಡುವ ಈ ನಿಯಮ ನಮಗೆ ಮಾರಕವಾಗಿದ್ದು, ತಕ್ಷಣವೇ ಹಳೆಯ ನಿಯಮಾವಳಿಗಳನ್ನೇ ಮುಂದುವರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹವಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...