ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಗಳ ಕುರಿತು ಸಾರ್ವಜನಿಕರಲ್ಲಿ ಆಗಾಗ ಹಲವು ಅನುಮಾನಗಳು ಮೂಡುವುದು ಸಾಮಾನ್ಯ. ಅದರಲ್ಲೂ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ಲಾಸ್ಟಿಕ್ ಮೊಟ್ಟೆಗಳ ಕುರಿತಾದ ವೀಡಿಯೋಗಳು ಗ್ರಾಹಕರಲ್ಲಿ ತೀವ್ರ ಭೀತಿ ಹುಟ್ಟಿಸಿವೆ. ಆದರೆ, ಮೊಟ್ಟೆಯು ತಾಜಾವಾಗಿದೆಯೇ ಅಥವಾ ಹಳೆಯದೇ ಎಂಬುದನ್ನು ಮನೆಯಲ್ಲೇ ಅತಿ ಸರಳವಾಗಿ ಪತ್ತೆಹಚ್ಚುವ ಉಪಾಯವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಂಚಿಕೊಂಡಿದೆ.
ನೀರಿನ ಪರೀಕ್ಷೆ ಮೂಲಕ ತಾಜಾತನ ತಿಳಿಯಿರಿ
ಮೊಟ್ಟೆಯ ನೈಜತೆಯನ್ನು ಪರಿಶೀಲಿಸಲು ಎಫ್‌ಎಸ್‌ಎಸ್‌ಎಐ ಅತ್ಯಂತ ಹಳೆಯ ಮತ್ತು ಸರಳವಾದ ‘ವಾಟರ್ ಟೆಸ್ಟ್’ (ನೀರಿನ ಪರೀಕ್ಷೆ) ವಿಧಾನವನ್ನು ಸೂಚಿಸಿದೆ. ಇದಕ್ಕೆ ಯಾವುದೇ ತಾಂತ್ರಿಕ ಉಪಕರಣಗಳ ಅಗತ್ಯವಿಲ್ಲ. ಒಂದು ಆಳವಾದ ಪಾತ್ರೆ ಅಥವಾ ಗಾಜಿನ ಲೋಟದಲ್ಲಿ ನೀರನ್ನು ತುಂಬಿ, ಅದರಲ್ಲಿ ಮೊಟ್ಟೆಯನ್ನು ಹಾಕಿ ಗಮನಿಸಬೇಕು.
ಮೊಟ್ಟೆಯು ಸಂಪೂರ್ಣವಾಗಿ ತಾಜಾವಾಗಿದ್ದರೆ, ಅದು ನೀರಿನ ತಳಭಾಗಕ್ಕೆ ಹೋಗಿ ಅಡ್ಡಲಾಗಿ ಕುಳಿತುಕೊಳ್ಳುತ್ತದೆ. ಒಂದು ವೇಳೆ ಮೊಟ್ಟೆಯು ಹಳೆಯದಾಗಿದ್ದರೆ, ಅದು ನೀರಿನ ಮೇಲೆ ತೇಲಲು ಪ್ರಾರಂಭಿಸುತ್ತದೆ ಅಥವಾ ನೀರಿನ ತಳದಲ್ಲಿ ನೆಟ್ಟಗೆ ನಿಲ್ಲುತ್ತದೆ.
ಹಳದಿ ಮತ್ತು ಬಿಳಿ ಭಾಗ ಮಿಶ್ರಣವಾದರೆ ಅದು ಪ್ಲಾಸ್ಟಿಕ್ ಮೊಟ್ಟೆಯೇ ?
ಮೊಟ್ಟೆಯನ್ನು ಒಡೆದ ತಕ್ಷಣವೇ ಅದರೊಳಗಿನ ಹಳದಿ ಲೋಳೆ ಮತ್ತು ಬಿಳಿ ಭಾಗ ಪರಸ್ಪರ ಮಿಶ್ರಣವಾದರೆ ಅದು ಪ್ಲಾಸ್ಟಿಕ್ ಮೊಟ್ಟೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಎಫ್‌ಎಸ್‌ಎಸ್‌ಎಐ ಈ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.
ಮೊಟ್ಟೆಯು ಹಳೆಯದಾಗುತ್ತಿದ್ದಂತೆ ಅದರೊಳಗಿನ ಪದರಗಳು ಹಾಗೂ ಜಿಡ್ಡಿನಂಶದ ಸಾಂದ್ರತೆ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದಾಗಿ ಹಳದಿ ಹಾಗೂ ಬಿಳಿ ಭಾಗಗಳು ಸುಲಭವಾಗಿ ಒಂದಕ್ಕೊಂದು ಬೆರೆಯುತ್ತವೆ. ಇದು ಮೊಟ್ಟೆಯ ನೈಸರ್ಗಿಕ ಪ್ರಕ್ರಿಯೆಯೇ ಹೊರತು, ಅದು ಪ್ಲಾಸ್ಟಿಕ್ ಅಥವಾ ನಕಲಿ ಮೊಟ್ಟೆ ಎಂದರ್ಥವಲ್ಲ.
ಮೊಟ್ಟೆಯು ನೀರಿನ ಮೇಲೆ ತೇಲಲು ಕಾರಣವೇನು ?
ಮೊಟ್ಟೆಯ ಹೊರಗಿನ ಕವಚ ಗಟ್ಟಿಯಾಗಿ ಕಂಡರೂ, ಅದರ ಮೇಲೆ ಸಾವಿರಾರು ಸಣ್ಣ ರಂಧ್ರಗಳಿರುತ್ತವೆ. ದಿನಕಳೆದಂತೆ ಮೊಟ್ಟೆಯೊಳಗಿನ ತೇವಾಂಶವು ಈ ರಂಧ್ರಗಳ ಮೂಲಕ ಆವಿಯಾಗಿ ಹೊರಹೋಗುತ್ತದೆ ಮತ್ತು ಆ ಜಾಗಕ್ಕೆ ಗಾಳಿ ತೂರಿಕೊಳ್ಳುತ್ತದೆ. ಮೊಟ್ಟೆಯೊಳಗೆ ಗಾಳಿಯ ಗುಳ್ಳೆ ದೊಡ್ಡದಾಗುತ್ತಿದ್ದಂತೆ ಮೊಟ್ಟೆಯ ತೂಕ ಕಡಿಮೆಯಾಗಿ ಅದು ನೀರಿನ ಮೇಲೆ ತೇಲಲು ಪ್ರಾರಂಭಿಸುತ್ತದೆ.
ಆದ್ದರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಪ್ಲಾಸ್ಟಿಕ್ ಮೊಟ್ಟೆಗಳ ಕುರಿತಾದ ವೀಡಿಯೋಗಳನ್ನು ನೋಡಿ ಗಾಬರಿಯಾಗುವ ಅಗತ್ಯವಿಲ್ಲ. ಕೇವಲ ಒಂದು ಲೋಟ ನೀರಿನ ಸಹಾಯದಿಂದ ಮನೆಯಲ್ಲೇ ಮೊಟ್ಟೆಯ ತಾಜಾತನವನ್ನು ಸ್ವತಃ ಪರೀಕ್ಷಿಸಿಕೊಳ್ಳಬಹುದು.