ಶಿವಮೊಗ್ಗ: ಹಿರಿಯರು ತೋರಿದ ಆದರ್ಶ ಹಾಗೂ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಯುವಪೀಳಿಗೆಗೆ ನಿಜವಾದ ಯಶಸ್ಸು ದಕ್ಕಲು ಸಾಧ್ಯ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅಭಿಪ್ರಾಯಪಟ್ಟರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸಾಗರ ತಾಲೂಕು ಘಟಕದ ಆಶ್ರಯದಲ್ಲಿ ಸ್ಥಳೀಯ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕಾರ-ಪರಂಪರೆ ಮರೆತರೆ ಯಶಸ್ಸು ಅಸಾಧ್ಯ
ಆಧುನಿಕತೆಯ ಪ್ರಭಾವದಿಂದ ಇತ್ತೀಚಿನ ದಿನಗಳಲ್ಲಿ ಹಿರಿಯರ ಮೇಲಿನ ಗೌರವ, ಪ್ರೀತಿ ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಸಂಸ್ಕೃತಿ ಮತ್ತು ಸಂಸ್ಕಾರದ ಬೇರುಗಳನ್ನು ಕಡಿದುಕೊಂಡು ಸಾಗುವ ವ್ಯಕ್ತಿಗೆ ಎಂದಿಗೂ ಪರಿಪೂರ್ಣ ಗೆಲುವು ಸಿಗದು. ಹಿರಿಯರ ಅನುಭವದ ಮಾತುಗಳಿಗೆ ಕಿರಿಯರು ಮನ್ನಣೆ ನೀಡುವಂತೆಯೇ, ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಹಿರಿಯರೂ ಯುವಜನರೊಂದಿಗೆ ಹೊಂದಿಕೊಂಡು ಮುನ್ನಡೆಯುವ ಅಗತ್ಯವಿದೆ ಎಂದ ಅವರು, ನಿವೃತ್ತ ನೌಕರರ ಸಂಘವು ಸತತವಾಗಿ ಇಂತಹ ಸಾರ್ಥಕ ಕಾರ್ಯಕ್ರಮ ಆಯೋಜಿಸುತ್ತಿರುವುದನ್ನು ಶ್ಲಾಘಿಸಿದರು.
ಸಾಗರದಲ್ಲಿ ವೃದ್ಧಾಶ್ರಮಗಳಿಲ್ಲದಿರುವುದೇ ಸಂಸ್ಕೃತಿಗೆ ಸಾಕ್ಷಿ: ಸಂತೋಷ್ ಕುಮಾರ್
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಸಂತೋಷ್ ಕುಮಾರ್ ಮಾತನಾಡಿ, ನಿವೃತ್ತ ನೌಕರರ ಸಂಘದ ಸಮಾಜಮುಖಿ ಹೆಜ್ಜೆಗಳು ಸೇವಾ ನಿರತ ನೌಕರರಿಗೆ ಪ್ರೇರಣಾದಾಯಕವಾಗಿವೆ. ನಮ್ಮ ಸಂಘದ ಕಟ್ಟಡದಲ್ಲೇ ಇವರ ಚಟುವಟಿಕೆಗಳಿಗೆ ಸೂಕ್ತ ಸ್ಥಳಾವಕಾಶ ನೀಡಲಾಗುವುದು ಎಂದರು. ಸಾಗರ ತಾಲೂಕಿನಲ್ಲಿ ಯಾವುದೇ ವೃದ್ಧಾಶ್ರಮಗಳಿಲ್ಲದಿರುವುದು ಇಲ್ಲಿನ ಜನರಲ್ಲಿ ಇಂದಿಗೂ ಹಿರಿಯರ ಬಗ್ಗೆ ಇರುವ ಕಾಳಜಿ ಹಾಗೂ ಗೌರವಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ನುಡಿದರು.
ಸಂಘದ ಸಮಾಜಮುಖಿ ಹೆಜ್ಜೆಗೆ ಶ್ಲಾಘನೆ
ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷೆ ಸರಸ್ವತಿ ನಾಗರಾಜ್ ಮಾತನಾಡಿ, ಕೇವಲ ನೌಕರರ ಹಕ್ಕುಗಳಿಗೆ ಸೀಮಿತವಾಗದೆ, ಕಳೆದ ಎರಡು ದಶಕಗಳಿಂದ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸುತ್ತಾ 50ಕ್ಕೂ ಹೆಚ್ಚು ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಸಂಘದ ಬದ್ಧತೆ ಅತ್ಯಂತ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಧಕರಿಗೆ ಸನ್ಮಾನ, ಬಹುಮಾನ ವಿತರಣೆ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರಂಗಕರ್ಮಿ ಫಣಿಯಮ್ಮ ಹೆಗ್ಗೋಡು, ನಿವೃತ್ತ ಯೋಧ ಅಶೋಕ ಕುಮಾರ್ ಹಾಗೂ ಹಿರಿಯ ಪತ್ರಕರ್ತ ಟಿ.ಎಂ. ಶೇಷಗಿರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಹಿರಿಯ ನಾಗರಿಕರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕ ಮಹಾವೀರ ಜೈನ್ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಪ್ರಮುಖರಾದ ಟಿ.ವಿ. ಪಾಂಡುರಂಗ, ವಿ.ಟಿ. ಸ್ವಾಮಿ, ಮಾ.ಸ. ನಂಜುಂಡಸ್ವಾಮಿ ಉಪಸ್ಥಿತರಿದ್ದರು. ಶ್ರೀಧರ ಅವಧಾನಿ ಪ್ರಾರ್ಥಿಸಿದರು, ನಾಗಪ್ಪ ಸ್ವಾಗತಿಸಿದರು. ಡಿ. ಗಣಪತಪ್ಪ ವಂದನಾರ್ಪಣೆ ಮಾಡಿದರು, ಎಚ್.ಜಿ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರ್ವಹಿಸಿದರು.