ಶಿವಮೊಗ್ಗ: ಸಾಗರ ನಗರಸಭೆಯ ನಿಕಟಪೂರ್ವ ಸದಸ್ಯ ಹಾಗೂ ಜನಪ್ರಿಯ ಯುವ ಮುಖಂಡ ಸೈಯದ್ ಜಾಕೀರ್ ಅವರ 42ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ಸ್ನೇಹಿತರ ಬಳಗ ನಗರದ ಗ್ರೀನ್ ಎಂಬೆಸ್ಸಿ ಸಭಾಂಗಣದಲ್ಲಿ ಸಾಗರ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಅರ್ಥಪೂರ್ಣ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು.
ಮೊದಲು ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದ ಜಾಕೀರ್
ಕಾರ್ಯಕ್ರಮದಲ್ಲಿ ಸ್ವತಃ ತಾವೇ ಪ್ರಥಮವಾಗಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಸೈಯದ್ ಜಾಕೀರ್, ಹುಟ್ಟುಹಬ್ಬದ ಆಚರಣೆ ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ಕೆ ನಾಂದಿಯಾಗಬೇಕು ಎಂದರು.

ಜನ್ಮದಿನದ ನೆಪದಲ್ಲಿ ಅನಗತ್ಯ ದುಂದುವೆಚ್ಚ ಮಾಡುವ ಬದಲು, ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ರಕ್ತದಾನದಂತಹ ಪವಿತ್ರ ಕಾರ್ಯ ಕೈಗೊಂಡಿರುವುದು ತಮಗೆ ಅತೀವ ತೃಪ್ತಿ ತಂದಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಆರೋಗ್ಯವಂತ ಯುವಕ-ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು ಹಾಗೂ ಸಮಾಜದ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸ್ನೇಹಿತರು ಹಾಗೂ ಮುಖಂಡರಿಂದ ಮೆಚ್ಚುಗೆಯ ಮಾತುಗಳು
ಶಿಬಿರದಲ್ಲಿ ಪಾಲ್ಗೊಂಡಿದ್ದ ಸಾಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ ಲ್ಯಾವಿಗೆರೆ ಮಾತನಾಡಿ, ಜಾಕೀರ್ ಅವರು ಸದಾ ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸುವ ಜನಪರ ಕಾಳಜಿಯುಳ್ಳ ಯುವ ಮುಖಂಡರಾಗಿದ್ದು, ತಮ್ಮ ಹುಟ್ಟುಹಬ್ಬವನ್ನು ರಕ್ತದಾನದಂತಹ ಜೀವಪರ ಕಾರ್ಯದ ಮೂಲಕ ಆಚರಿಸಿಕೊಳ್ಳುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ರಾಜಕೀಯದ ಜೊತೆಗೆ ಸಮಾಜಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಜಾಕೀರ್ ಅವರ ಸ್ನೇಹಪರ ಮತ್ತು ಸರಳ ವ್ಯಕ್ತಿತ್ವ ಯುವಪೀಳಿಗೆಗೆ ಪ್ರೇರಣೆಯಾಗಿದೆ. ಅವರ ಸಮಾಜಮುಖಿ ಸೇವೆಗಳು ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಮುಖಂಡ ಕಿರಣ್ ದೊಡ್ಮನೆ ಮಾತನಾಡಿ, ಸೈಯದ್ ಜಾಕೀರ್ ಅವರು ಜಾತಿ-ಮತ ಬೇಧವಿಲ್ಲದೆ ಜನರ ಹಿತಕ್ಕಾಗಿ ಶ್ರಮಿಸುತ್ತಿರುವ ನಾಯಕರಾಗಿದ್ದು, ಇಂತಹ ಅರ್ಥಪೂರ್ಣ ಶಿಬಿರದ ಮೂಲಕ ಹಲವು ಜೀವಗಳನ್ನು ಉಳಿಸುವ ಕೆಲಸಕ್ಕೆ ಅವರ ಅಭಿಮಾನಿಗಳು ಕೈಜೋಡಿಸಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

ರಕ್ತದಾನ ಮಾಡಿದ ಸೈಯದ್ ಜಾಕೀರ್ ಅವರ ಆಪ್ತ ಸ್ನೇಹಿತ ಪುರುಷೋತ್ತಮ್ (ಪುಚ್ಚಿ) ಮಾತನಾಡಿ, "ಜಾಕೀರ್ ಕೇವಲ ಒಬ್ಬ ನಾಯಕನಷ್ಟೇ ಅಲ್ಲ, ನಮ್ಮೆಲ್ಲರ ಹೃದಯ ಗೆದ್ದಿರುವ ನಿಷ್ಠಾವಂತ ಸ್ನೇಹಿತ. ಯಾರೇ ಕಷ್ಟ ಎಂದು ಬಂದರೂ ಜಾತಿ, ಮತ, ಭೇದ ನೋಡದೆ ಮುಂಚೂಣಿಯಲ್ಲಿ ನಿಂತು ಸಹಾಯ ಮಾಡುವ ಗುಣ ಅವರದ್ದು. ಸ್ನೇಹಿತರ ಹುಟ್ಟುಹಬ್ಬ ಎಂದರೆ ಸಾಮಾನ್ಯವಾಗಿ ಸಂಭ್ರಮಾಚರಣೆ, ಪಾರ್ಟಿ ಮಾಡುವುದು ವಾಡಿಕೆ. ಆದರೆ ಜಾಕೀರ್ ತಮ್ಮ 42ನೇ ಜನ್ಮದಿನವನ್ನು ಜೀವ ಉಳಿಸುವ ರಕ್ತದಾನ ಶಿಬಿರದ ಮೂಲಕ ಆಚರಿಸಿಕೊಳ್ಳಲು ನಿರ್ಧರಿಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.

ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ ಕಾಂಗ್ರೆಸ್ ಮುಖಂಡೆ ಭವ್ಯ ಕೃಷ್ಣಮೂರ್ತಿ ಅವರು ಮಾತನಾಡಿ, "ಸೈಯದ್ ಜಾಕೀರ್ ಅವರು ಸದಾ ಸಾರ್ವಜನಿಕರ ನೋವು-ನಲಿವುಗಳಿಗೆ ಮಿಡಿಯುವ ಅಪರೂಪದ ಯುವ ನಾಯಕ. ಹುಟ್ಟುಹಬ್ಬವನ್ನು ಕೇವಲ ಆಡಂಬರದಿಂದ ಆಚರಿಸಿಕೊಳ್ಳುವ ಇಂದಿನ ದಿನಗಳಲ್ಲಿ, ರಕ್ತದಾನ ಶಿಬಿರದಂತಹ ಅತ್ಯಂತ ಅಗತ್ಯ ಹಾಗೂ ಪವಿತ್ರ ಕಾರ್ಯಕ್ರಮದ ಮೂಲಕ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿಸಿದ್ದಾರೆ. ಒಂದು ಯೂನಿಟ್ ರಕ್ತವು ತುರ್ತು ಸಂದರ್ಭದಲ್ಲಿ ಓರ್ವ ವ್ಯಕ್ತಿಯ ಜೀವವನ್ನಷ್ಟೇ ಅಲ್ಲ, ಒಂದು ಇಡೀ ಕುಟುಂಬವನ್ನೇ ಉಳಿಸುತ್ತದೆ ಎಂದು ಕೊಂಡಾಡಿ, ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದರು..

42 ಯೂನಿಟ್ ರಕ್ತ ಸಂಗ್ರಹ
ಜಾಕೀರ್ ಅವರ 42ನೇ ಜನ್ಮದಿನದ ಸವಿನೆನಪಿಗೆ ಸಾಂಕೇತಿಕವಾಗಿ ಒಟ್ಟು 42 ಯೂನಿಟ್ ರಕ್ತ ಸಂಗ್ರಹವಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಹನೀಫ್ ಕುಂಜಾಲಿ, ಮಹಾಬಲ ಕೌತಿ, ಶ್ರೀನಿವಾಸ್, ಆನಂದ ಭೀಮನೇರಿ, ಅನ್ವರ್ ಭಾಷಾ ಸೇರಿದಂತೆ ನೂರಾರು ಅಭಿಮಾನಿಗಳು ಹಾಗೂ ಹಿತೈಷಿಗಳು ಭಾಗವಹಿಸಿ ಜಾಕೀರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..