ಅದು 2005ರ ಸಮಯ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಇನ್ನು ದಂಪತಿಗಳಾಗಿರಲಿಲ್ಲ. ಆದರೆ, ಇವರಿಬ್ಬರ ಜೊತೆಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿ ತೆರೆಮೇಲೆ ತಂದಿದ್ದ ‘ಕಜ್ರಾರೆ’ ಹಾಡಿನ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ. ‘ಬಂಟಿ ಔರ್ ಬಬ್ಲಿ’ ಸಿನಿಮಾದ ಈ ಐಕಾನಿಕ್ ಹಾಡು ತೆರೆಕಂಡು 21 ವರ್ಷಗಳು ಕಳೆದಿದ್ದರೂ, ಅಭಿಮಾನಿಗಳಲ್ಲಿ ಅದರ ಗುಂಗು ಮಾತ್ರ ಹಾಗೆಯೇ ಇದೆ.
ಇತ್ತೀಚೆಗೆ ‘ಬಿಸಿಬಿಸಿ ಏಷ್ಯನ್ ನೆಟ್‌ವರ್ಕ್’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ನಟ ಅಭಿಷೇಕ್ ಬಚ್ಚನ್, ‘ಕಜ್ರಾರೆ’ ಹಾಡಿನ ಚಿತ್ರೀಕರಣದ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಜೊತೆಗೆ ಈ ಸೂಪರ್ ಹಿಟ್ ಹಾಡಿನ 2.0 ಆವೃತ್ತಿ (Kajra Re 2.0) ಮಾಡಲು ತಾವು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ.
ಹಾಡಿನ 2.0 ಆವೃತ್ತಿ ಮಾಡುವ ಆಸಕ್ತಿ ಇದೆಯೇ ಎಂದು ಕೇಳಿದಾಗ ಉತ್ತರಿಸಿದ ಅಭಿಷೇಕ್, “ನನಗೆ ಖಂಡಿತವಾಗಿಯೂ ಇಷ್ಟವಿದೆ. ನಾನು ಅದಕ್ಕೆ ತಯಾರಾಗಿದ್ದೇನೆ. ಆದರೆ ಅದಕ್ಕಿಂತ ಮುಂಚೆ ನೀವು ಐಶ್ವರ್ಯಾ ಮತ್ತು ನಮ್ಮ ಅಪ್ಪನನ್ನು ಒಪ್ಪಿಸಬೇಕಾಗುತ್ತದೆ” ಎಂದು ತಮಾಷೆಯಾಗಿ ಹೇಳಿದ್ದಾರೆ.
ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ಅವರು, “ನನ್ನ ವೃತ್ತಿಜೀವನದಲ್ಲೇ ಇಷ್ಟೊಂದು ಸಂತೋಷದಿಂದ ಶೂಟಿಂಗ್ ಮಾಡಿದ ಮತ್ತೊಂದು ಹಾಡಿಲ್ಲ. ಅದು ಒಂದು ದೊಡ್ಡ ಪಾರ್ಟಿಯಂತಿತ್ತು. ಹಾಡಿನ ಚಿತ್ರೀಕರಣದ ವೇಳೆ ನನ್ನ ಹುಟ್ಟುಹಬ್ಬವೂ ಇತ್ತು, ಚಿತ್ರತಂಡ ಅದನ್ನು ವಿಜೃಂಭಣೆಯಿಂದ ಆಚರಿಸಿತ್ತು” ಎಂದಿದ್ದಾರೆ.
ಚಿತ್ರದ ನಿರ್ದೇಶಕ ಶಾದ್ ಅಲಿ ಬಗ್ಗೆ ಮಾತನಾಡುತ್ತಾ, “ಶಾದ್ ಅಲಿ ಸುಮಾರು 4 ಗಂಟೆಗಳ ಕಾಲ ಆ ಹಾಡನ್ನು ಪ್ಲೇ ಮಾಡಿ, ಸೆಟ್‌ನಲ್ಲಿದ್ದ ಎಲ್ಲರೂ ಡ್ಯಾನ್ಸ್ ಮಾಡುವಂತೆ ಮಾಡಿದ್ದರು. ನಾವು ನಿಜವಾಗಿಯೂ ಆನಂದಿಸುತ್ತಾ ತಮಾಷೆ ಮಾಡುತ್ತಿದ್ದ ಆ ದೃಶ್ಯಗಳನ್ನು ಶೂಟ್ ಮಾಡಿ, ನಂತರ ಹಾಡಿನ ಮಧ್ಯೆ ಬಳಸಿಕೊಂಡಿದ್ದರು. ಅದು ಸಾರ್ವಕಾಲಿಕ ಹಿಟ್ ಹಾಡು. ಆ ಶೂಟಿಂಗ್ ನೆನಪುಗಳು ಎಂದಿಗೂ ಮುಗಿಯದಂತವು” ಎಂದು ಹಂಚಿಕೊಂಡಿದ್ದಾರೆ.
‘ಬಂಟಿ ಔರ್ ಬಬ್ಲಿ’ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ವಂಚಕರ ಪಾತ್ರದಲ್ಲಿ ನಟಿಸಿದ್ದರೆ, ಅಮಿತಾಬ್ ಬಚ್ಚನ್ ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಶಂಕರ್-ಎಹ್ಸಾನ್-ಲಾಯ್ ಸಂಗೀತ ಸಂಯೋಜಿಸಿದ್ದ ಈ ಹಾಡಿಗೆ ವೈಭವಿ ಮರ್ಚೆಂಟ್ ಕೊರಿಯೋಗ್ರಫಿ ಮಾಡಿದ್ದರು.