ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ‘ಕ್ಯಾಟ್‌ಸೈ’ (KATSEYE) ಸಂಗೀತ ಬಳಗದ ಭಾರತೀಯ ಮೂಲದ ಗಾಯಕಿ ಲಾರಾ ರಾಜ್, ತಮ್ಮ ಪ್ಯಾರಿಸ್ ಫ್ಯಾಷನ್ ವೀಕ್‌ನ ಚೊಚ್ಚಲ ಪ್ರವೇಶದಲ್ಲೇ ಎಲ್ಲರ ಗಮನಸೆಳೆದಿದ್ದಾರೆ. ‘ಲೋಯೆವ್’ (Loewe) ಬ್ರ್ಯಾಂಡ್‌ನ ಶೋನಲ್ಲಿ ಭಾಗವಹಿಸಿದ ಲಾರಾ, ಪಾಶ್ಚಿಮಾತ್ಯ ಉಡುಪಿನ ಜೊತೆಗೆ ಭಾರತೀಯ ಸಾಂಪ್ರದಾಯಿಕ ಶೈಲಿಯ ಆಭರಣಗಳು ಹಾಗೂ ಸಿಂದೂರ ಧರಿಸಿ ಮಿಂಚಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಕ್ಟೋಬರ್ 2 ರಂದು ನಡೆದ ಈ ಫ್ಯಾಷನ್ ಶೋಗೆ ಲಾರಾ ರಾಜ್ ಗಾಢ ಹಳದಿ ಬಣ್ಣದ ಹ್ಯಾಲ್ಟರ್ ಮಿನಿ ಡ್ರೆಸ್ ಧರಿಸಿ ಆಗಮಿಸಿದ್ದರು. ಆದರೆ ಅವರ ಉಡುಪಿಗಿಂತ ಹೆಚ್ಚಾಗಿ ಅವರ ಶೃಂಗಾರ ಎಲ್ಲರ ಕಣ್ಣು ಕುಕ್ಕುವಂತಿತ್ತು. ಹಣೆಗೆ ಕೆಂಪು ಕಲ್ಲಿನ ಬಿಂದಿ, ಮಾಂಗ್ ಟಿಕ್ಕಾ, ಕಿವಿಗಳಿಗೆ ಜುಮುಕಿ, ಮೂಗುತಿ, ಕಾಲಿಗೆ ಕಾಲ್ಗೆಜ್ಜೆ (ಪಾಯಲ್) ಹಾಗೂ ತಲೆಯ ಮಧ್ಯಭಾಗದಲ್ಲಿ ಎದ್ದು ಕಾಣುವಂತೆ ಹಚ್ಚಿದ್ದ ಕೆಂಪು ಸಿಂದೂರ (ಕುಂಕುಮ) ಅವರ ‘ದೇಸಿ’ ಲುಕ್‌ಗೆ ವಿಶೇಷ ಮೆರುಗು ನೀಡಿತ್ತು.
ರೇಖಾ ಅವರಿಂದ ಪ್ರೇರಿತ: ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ಮಹಿಳೆಯರು ಮಾಂಗಲ್ಯದ ಸಂಕೇತವಾಗಿ ಸಿಂದೂರ ಧರಿಸುತ್ತಾರೆ. ಆದರೆ ಅವಿವಾಹಿತೆಯಾಗಿರುವ ಲಾರಾ ಸಿಂದೂರ ಧರಿಸಿದ್ದರ ಬಗ್ಗೆ ‘ಬ್ರಿಟಿಷ್ ವೋಗ್’ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಬಾಲಿವುಡ್‌ನ ಸಾರ್ವಕಾಲಿಕ ಸುಂದರಿ, ನಟಿ ರೇಖಾ ಅವರ ಸಾಂಪ್ರದಾಯಿಕ ಶೈಲಿ ಮತ್ತು ಸಿಂದೂರ ಧರಿಸುವ ಫ್ಯಾಷನ್‌ನಿಂದ ಪ್ರೇರಿತರಾಗಿ ತಾವು ಈ ಶೃಂಗಾರ ಮಾಡಿಕೊಂಡಿದ್ದಾಗಿ ಲಾರಾ ಬಹಿರಂಗಪಡಿಸಿದ್ದಾರೆ.
ಎರಡು ಭಾಗವಾಗಿ ವಿಂಗಡಣೆಯಾದ ನೆಟ್ಟಿಗರು: ಪಾಶ್ಚಿಮಾತ್ಯ ಫ್ಯಾಷನ್ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸಿದ ಲಾರಾ ಅವರ ಪ್ರಯತ್ನವನ್ನು ಹಲವರು ಶ್ಲಾಘಿಸಿದ್ದರೆ, ಇನ್ನು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಕೇವಲ ಫ್ಯಾಷನ್ ಅಥವಾ ಪ್ರದರ್ಶನಕ್ಕಾಗಿ ಬಳಸುವುದು ಸರಿಯಲ್ಲ” ಎಂದು ಕೆಲ ನೆಟ್ಟಿಗರು ಟೀಕಿಸಿದ್ದಾರೆ. ಆದರೆ ಲಾರಾ ಬೆಂಬಲಕ್ಕೆ ನಿಂತ ಮತ್ತಷ್ಟು ಜನರು, “ದಕ್ಷಿಣ ಏಷ್ಯಾದ ಸಂಸ್ಕೃತಿಯಲ್ಲಿ ಸಿಂದೂರ ಕೇವಲ ಮದುವೆಗೆ ಮಾತ್ರ ಸೀಮಿತವಾಗಿಲ್ಲ, ಅದು ಶಕ್ತಿ ಮತ್ತು ಧೈರ್ಯದ ಸಂಕೇತವೂ ಹೌದು” ಎಂದು ಸಮರ್ಥಿಸಿಕೊಂಡಿದ್ದಾರೆ.
ತಮಿಳು ಮೂಲದ ಲಾರಾ ರಾಜ್, ಈ ಹಿಂದೆಯೂ ತಮ್ಮ ಜಾಗತಿಕ ವೇದಿಕೆಗಳಲ್ಲಿ ಬಿಂದಿ ಹಾಗೂ ‘ಓಂ’ ಪದಕದ ಸರ ಧರಿಸುವ ಮೂಲಕ ಭಾರತೀಯ ಮೂಲದ ಹೆಮ್ಮೆಯನ್ನು ಪ್ರದರ್ಶಿಸಿದ್ದರು.