ಸಾಗರ: ದೆಹಲಿಯಲ್ಲಿ ಪ್ರತಿಭಟನೆಯ ವರದಿಗಾರಿಕೆಗೆ ತೆರಳಿದ್ದ ಮಹಿಳಾ ಪತ್ರಕರ್ತೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವುದನ್ನು ಖಂಡಿಸಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲೂಕು ಘಟಕದ ವತಿಯಿಂದ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಭಾರತದ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ವರದಿಗಾರಿಕೆಗೆ ತೆರಳಿದ್ದಾಗ ಅನುಚಿತ ವರ್ತನೆ, ದೂರು ದಾಖಲಿಸದೆ ಸತಾಯಿಸಿದ ದೆಹಲಿ ಪೊಲೀಸರು:
ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಮೂವರು ಮಹಿಳಾ ಪತ್ರಕರ್ತೆಯರ ಮೇಲೆ ಪೊಲೀಸರು ಹಲ್ಲೆ ನಡೆಸಿ, ಅನುಚಿತವಾಗಿ ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಮಹಿಳಾ ಪತ್ರಕರ್ತೆಯರು ಅಧಿಕೃತ ಗುರುತಿನ ಚೀಟಿ (Press ID) ಹೊಂದಿದ್ದರೂ ಪೊಲೀಸರು ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಅಲ್ಲದೆ, ಕಿರುಕುಳ ನೀಡಿದ ಅಧಿಕಾರಿಯ ವಿರುದ್ಧ ದೂರು ದಾಖಲಿಸಲು ಠಾಣೆಗೆ ಹೋದಾಗ ಪೊಲೀಸರು ಗಂಟೆಗಟ್ಟಲೆ ಕಾಯಿಸಿ, ಎಫ್‌ಐಆರ್ ದಾಖಲಿಸದೆ ಸತಾಯಿಸಿ, ಆಕೆಯನ್ನು ವಶಕ್ಕೆ ಪಡೆದು ಕಾನೂನುಬಾಹಿರವಾಗಿ ನಡೆದುಕೊಂಡಿದ್ದಾರೆ. ಈ ಹಿಂದೆ ನೀಟ್ (NEET) ಪರೀಕ್ಷೆ ಸಂದರ್ಭದಲ್ಲೂ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತೆಯರ ಮೇಲೆ ಇದೇ ರೀತಿ ದೌರ್ಜನ್ಯ ಎಸಗಲಾಗಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ: ಸಂಘದ ಅಧ್ಯಕ್ಷ ಮಹೇಶ್ ಹೆಗಡೆ ಕಳವಳ
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಾಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಹೆಗಡೆ ಅವರು, "ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನ್ಯಾಯಾಂಗ ಮತ್ತು ರಕ್ಷಣಾ ವ್ಯವಸ್ಥೆಯ ಭಾಗವಾಗಿರುವ ಪೊಲೀಸರೇ ಮಹಿಳಾ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಅತ್ಯಂತ ಕೆಟ್ಟ ನಡವಳಿಕೆಯಾಗಿದ್ದು, ನಾವೆಲ್ಲರೂ ತಲೆತಗ್ಗಿಸುವಂತಹ ಘಟನೆಯಾಗಿದೆ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
"ದೆಹಲಿಯ ಘಟನೆ ಕೇವಲ ಒಂದು ಉದಾಹರಣೆಯಷ್ಟೇ. ಸಾಗರದಿಂದ ಹಿಡಿದು ದೆಹಲಿ ಮಟ್ಟದವರೆಗೂ ಎಲ್ಲ ಹಂತಗಳಲ್ಲೂ ಇಂದು ಪತ್ರಕರ್ತರಿಗೆ ಸೂಕ್ತ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಪತ್ರಕರ್ತರು ಭಯದ ವಾತಾವರಣದಲ್ಲೇ ಕಾರ್ಯನಿರ್ವಹಿಸುವ ದುಸ್ಥಿತಿ ಇದೆ. ಮಹಿಳಾ ಪತ್ರಕರ್ತೆ ಠಾಣೆಗೆ ದೂರು ನೀಡಲು ಹೋದಾಗ ಎಫ್‌ಐಆರ್ ದಾಖಲಿಸದೆ ಸತಾಯಿಸಿದ್ದು ನಾಚಿಕೆಗೇಡಿನ ಸಂಗತಿ ಎಂದರು.
ಸರ್ಕಾರ ಮತ್ತು ಉನ್ನತ ಪ್ರಾಧಿಕಾರಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ದೌರ್ಜನ್ಯ ಎಸಗಿದ ಅಧಿಕಾರಿಯ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮಾಧ್ಯಮದವರು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಪೂರಕ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸಬೇಕು" ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೀಪಕ್ ಸಾಗರ್, ನಾಗೇಶ್.ಜಿ, ಎಂ.ಜಿ ರಾಘವನ್, ಮಾ.ಸಾ ನಂಜುಂಡಸ್ವಾಮಿ, ಶಿವನಗೌಡ, ಲೋಕೇಶ್ ಗುಡಿಗಾರ್, ಗಿರೀಶ್ ರಾಯ್ಕರ್, ಇಮ್ರಾನ್ ಸಾಗರ್, ಮೂರನೇ ಕಣ್ಣು ನಾಗರಾಜ್, ರಫೀಕ್ ಕೊಪ್ಪ, ಬಿ.ಡಿ ರವಿಕುಮಾರ್, ರಾಜೇಶ್ ಬಡ್ತಿ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..