LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಾಡಿ ಜನರಿಗೆ ಸೌಲಭ್ಯ ಒದಗಿಸಲು "ವಿಶೇಷ ಪ್ರಜಾಸೇವೆ ಅಭಿಯಾನ: ಸಚಿವ ಟಿ.ರಘುಮೂರ್ತಿ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಹಾಗೂ ಬಿಳಿರಂಗನಬೆಟ್ಟ ಸಮೀಪದಲ್ಲಿರುವ ಹಾಡಿಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷ ಪ್ರಜಾಸೇವೆ ಅಭಿಯಾನ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಸೂಚನೆ ನೀಡಿದ್ದಾರೆ.

ಶನಿವಾರ ಚಾಮರಾಜನಗರದ ಬಿಳಿರಂಗನಬೆಟ್ಟದಲ್ಲಿ ದೇಗುಲ ದರ್ಶನ ಮಾಡಿದ ಸಚಿವ ರಘುಮೂರ್ತಿ ಸಮೀಪದಲ್ಲಿರುವ ಹಾಡಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ ನಂತರ ಈ ವಿಷಯವನ್ನು ತಿಳಿಸಿದರು.

ಬುಡಕಟ್ಟು ಜನರು ವಾಸವಿರುವ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದೇನೆ, ಅವರು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. ಇದನ್ನು ಗಮನಿಸಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸರ್ಕಾರವೇ ಅವರ ಮನೆ ಬಾಗಿಲಿಗೆ ತೆರಳಿ ಸೇವೆ ಒದಗಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಈ ಭಾಗದ ಜನರಿಗಾಗಿ ವಿಶೇಷ ಪ್ರಜಾಸೇವೆ ಅಭಿಯಾನ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಹಾಡಿಗಳಲ್ಲಿ ಕೆಲವರಿಗೆ 40-50 ವರ್ಷಗಳ ಹಿಂದೆ ಮನೆ ನಿರ್ಮಿಸಿಕೊಡಲಾಗಿದೆ. ಅದೀಗ ಶಿಥಿಲಾವಸ್ಥೆಯಲ್ಲಿದೆ. ಇದನ್ನು ಪರಿಶೀಲಿಸಲಾಗಿದ್ದು, ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಸಿಎಂ ಆದಿವಾಸಿ ಗೃಹ ಭಾಗ್ಯ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಅರ್ಹ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ಇದನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಘುಮೂರ್ತಿ ತಿಳಿಸಿದರು.

ಬಂಗ್ಲೆಪೋಡು, ಹಸಪೋಡು, ಎರಕಲಗದ್ದೆ ಪೋಡು ಕಾಲೋನಿ, ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಆದಿವಾಸಿಗಳ ಜ್ವಲಂತ ಸಮಸ್ಯೆಗಳ ಬಗ್ಗೆ ತಾಳ್ಮೆಯಿಂದ ಆಲಿಸಿದರು.

ಬಿಳಿಗಿರಿ ರಂಗನ ಬೆಟ್ಟದ ಮುಖ್ಯ ರಸ್ತೆಯಿಂದ ಮಂಜುಗುಡಿ ಪೋಡು ಹಾಗೂ ಕಲ್ಯಾಣಿ ಪೋಡು ಹಾಡಿಗಳಿಗೆ ಸಂಪರ್ಕ ಸೇತುವೆ ನಿರ್ಮಾಣ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಿಗೆ ಸಚಿವರು ಸೂಚಿಸಿದರು. 

ಮಂಜುಗುಡಿ ಪೋಡು, ಕಲ್ಯಾಣಿ ಪೋಡು ಭಾಗದಲ್ಲಿ ಕರೆಂಟ್‌ ಇಲ್ಲ ಎಂದು ಜನರು ತಿಳಿಸಿದಾಗ, ಕೂಡಲೇ ಚೆಸ್ಕಾಂ ಇಂಜಿನಿಯರ್‌ಗಳೊಂದಿಗೆ ಚರ್ಚೆ ಮಾಡಿದ ಸಚಿವರು, ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಫುಡ್‌ಕಿಟ್‌ಗಳ ವಿತರಣೆ

ಹಾಡಿಗಳ ಬಹುತೇಕ ಮಂದಿ ಫುಡ್‌ಕಿಟ್‌ ಪೂರೈಕೆಯಾಗುತ್ತಿಲ್ಲ ಎಂದು ಅಹವಾಲು ಸಲ್ಲಿಸಿದರು. ಅದಕ್ಕೆ ಉತ್ತರಿಸಿದ ಸಚಿವರು, ಕೆಲವು ತಾಂತ್ರಿಕ ಸಮಸ್ಯೆಗಳಿಂದ ಇದು ವಿಳಂಬವಾಗಿದೆ. ನಾಲ್ಕೈದು ದಿನದಲ್ಲಿ ಬಗೆಹರಿಯಲಿದ್ದು, ಕೂಡಲೇ ಫುಡ್‌ಕಿಟ್‌ ವಿತರಿಸಲಾಗುವುದು ಮತ್ತು ಬಾಕಿ ಬರಬೇಕಾಗಿದ್ದ ಫುಡ್‌ ಕಿಟ್‌ಗಳನ್ನೂ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬುಡಕಟ್ಟು ಜನರಿಗೆ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಹಕ್ಕು ಪತ್ರ,  ಇನ್‌ಕಮ್‌ ಸರ್ಟಿಫಿಕೇಟ್‌ ಸೇರಿದಂತೆ ಸರ್ಕಾರದಿಂದ ಕೊಡಬೇಕಾಗಿರುವ ಎಲ್ಲ ದಾಖಲೆಗಳು ಸಿಗಬೇಕು. ಈ ನಿಟ್ಟಿನಲ್ಲಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಇವುಗಳನ್ನು ವಿತರಿಸಬೇಕು ಎಂದು ತಹಶೀಲ್ದಾರ್‌ ಹಾಗೂ ತಾಲೂಕು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

"ಅಡವಿ" ಉತ್ಪನ್ನಗಳ ವೀಕ್ಷಿಸಿದ ಸಚಿವರು

ಇದೇ ವೇಳೆ ಕಾಡಿನ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡುವ "ಅಡವಿ" ಕೇಂದ್ರಕ್ಕೆ ಸಚಿವರು ಭೇಟಿ ನೀಡಿದರು.

"ಅಡವಿ" ಬ್ರ್ಯಾಂಡ್‌ನ ಶೀಗೆಕಾಯಿ, ನೆಲ್ಲಿಕಾಯಿ ಪೌಡರ್‌, ನೇರಳೆ ಸ್ಕಾಷ್‌ ಹಾಗೂ ಇತರೆ ಉತ್ಪನ್ನಗಳನ್ನು ವೀಕ್ಷಿಸಿ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು.

ಕೊಳ್ಳೇಗಾಲ ಸರ್ಕಾರಿ ಪ್ರವಾಸಿ ಮಂದಿರದಲ್ಲಿ "ಆಶ್ರಮ ಶಾಲೆಗಳ (ಆದಿವಾಸಿ ಮಕ್ಕಳ ವಸತಿ ಶಾಲೆ) ಶಿಕ್ಷಕರನ್ನು ಭೇಟಿ ಮಾಡಿ ಗುಣಮಟ್ಟದ ಶಿಕ್ಷಣ ನೀಡುವಂತೆ ಎಲ್ಲರೂ ಪ್ರಯತ್ನಿಸಬೇಕು. ಈ ವಿಷಯದಲ್ಲಿ ಯಾವುದೇ ರಾಜೀ ಇರಬಾರದು ಎಂದು ತಿಳಿಸಿದರು.

ಕುಡಿಯುವ ನೀರಿಗೆ ತ್ವರಿತ ಕ್ರಮ

ಹಾಡಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕೆಲವರು ಹೇಳಿದಾಗ ಸಂಬಂಧಪಟ್ಟ ಇಂಜಿನಿಯರ್‌ಗಳಿಂದ ಸಚಿವರು ಮಾಹಿತಿ ಪಡೆದರು.

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಇರುವುದರಿಂದ ಕೆಲವು ಸಮಸ್ಯೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ಕೂಡಲೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ಜಲ ಜೀವನ್‌ ಮಿಷನ್‌ ಯೋಜನೆಯಡಿ ನೀರು ಪೂರೈಸಬೇಕು. ತ್ವರಿತವಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಸೂಚನೆ ನೀಡಿದರು.

ನರೇಗಾ ಯೋಜನೆಯಡಿ ಬಾಕಿ ವೇತನ ಪೂರೈಸುವ ವಿಷಯದಲ್ಲಿಯೂ ಸೂಕ್ತ ಕ್ರಮ ತೆಗೆದುಕೊಳ್ಳಲು ಸಚಿವರು ಆದೇಶಿಸಿದ್ದಾರೆ.

ಆದಿವಾಸಿ ಅಭಿವೃದ್ಧಿ ನಿಗಮ ಶೀಘ್ರದಲ್ಲೇ ಕಾರ್ಯಾರಂಭ

ಆದಿವಾಸಿ ಅಭಿವೃದ್ಧಿ ನಿಗಮ ಅತಿ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ರಘುಮೂರ್ತಿ ಸ್ಪಷ್ಟಪಡಿಸಿದರು. 

ನಂತರ ಕೊಣನಕೆರೆ ಆಶ್ರಮ ಶಾಲೆಗೆ ಸಚಿವ ರಘುಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು. ಯಾರು ಕೂಡ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಉತ್ತಮ ಶಿಕ್ಷಣ ದೊರೆತರೆ ಆರ್ಥಿಕವಾಗಿ ಸಬಲರಾಗಬಹುದು. ಈ ನಿಟ್ಟಿನಲ್ಲಿ ಮಕ್ಕಳಿಗೆ ವಿದ್ಯೆ ಕೊಡಿಸಿ, ಸಜ್ಜನರಾಗಿ ರೂಪಿಸಲು ಎಲ್ಲರೂ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಅಶೋಕ್ ಡಿ.ಆರ್, ಜಂಟಿ ನಿರ್ದೇಶಕರಾದ ಕೆ.ಆರ್‌. ರಾಜಕುಮಾರ್‌, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಎಚ್‌. ಷಡಕ್ಷರಯ್ಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್. ಬಿಂದ್ಯಾ, ಆದಿವಾಸಿ ಬುಡಕಟ್ಟು ಜನಾಂಗದ ಮುಖಂಡರಾದ ಮಾದೇಗೌಡ, ಬೊಮ್ಮಯ್ಯು, ಮಾರಮ್ಮ, ಬಸವರಾಜು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಸಚಿವರನ್ನು "ಹಾಡಿ" ಹೊಗಳಿದ ಜನರು

ಸಚಿವ ಟಿ. ರಘಮೂರ್ತಿ ಅವರು ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿಕೊಟ್ಟಿರುವುದಕ್ಕೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರು ಇದೇ ಮೊದಲ ಬಾರಿಗೆ ಬಂದು ನಮ್ಮ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಷ್ಟು ಮಾತ್ರವಲ್ಲ, ಕೆಲವು ಸಮಸ್ಯೆಗಳಿಗೆ ನಮಗೆ ಪರಿಹಾರ ಸಿಕ್ಕಂತಾಗಿದೆ. ಇದಕ್ಕೆ ಕಾರಣಕರ್ತರಾದ ರಘುಮೂರ್ತಿ ಅವರನ್ನು ಜನರು "ಹಾಡಿ" ಹೊಗಳಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!CJP ಪ್ರತಿಭಟನೆ: 3,000ಕ್ಕೂ ಹೆಚ್ಚು ಜನರ ಬಂಧನ; ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ಎಂದ ಸೋನಮ್ ವಾಂಗ್ ಚುಕ್ಬೆಳಗಾವಿ ₹2,165 ಕೋಟಿ ವಂಚನೆ ಕೇಸ್: ಕಿಂಗ್‌ಪಿನ್ ಶಿವಾನಂದ್ ನೀಲಣ್ಣನವರ್ ವಿರುದ್ಧ ED ಚಾರ್ಜ್‌ಶೀಟ್ ಸಲ್ಲಿಕೆ'ಸಾಗರ ಬ್ಲಾಕ್ ಕಾಂಗ್ರೆಸ್' ಸಾರಥ್ಯಕ್ಕೆ ಜನಾನುರಾಗಿ ನಾಯಕ ತಾರಾಮೂರ್ತಿ ಸಜ್ಜು: 'ಅಧ್ಯಕ್ಷ ಗದ್ದು'ಗೆ ಬಹುತೇಕ ಫಿಕ್ಸ್!ಹಾಡಿ ಜನರಿಗೆ ಸೌಲಭ್ಯ ಒದಗಿಸಲು "ವಿಶೇಷ ಪ್ರಜಾಸೇವೆ ಅಭಿಯಾನ: ಸಚಿವ ಟಿ.ರಘುಮೂರ್ತಿ