ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2026 ಮಹೋತ್ಸವವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆರಂಭವಾಯಿತು. ಶುಭ ಧನುರ್ ಲಗ್ನದಲ್ಲಿ ಕೊಪ್ಪಳದ ಗವಿ ಸಿದ್ದೇಶ್ವರ ಶ್ರೀಗಳು ದಸರಾ ಮಹೋತ್ಸವವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ನಾಡಹಬ್ಬಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಚಾಮುಂಡಿ ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿಯ ದೇವಸ್ಥಾನದ ಆವರಣದಲ್ಲಿ ಜರುಗಿದ ಈ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಸಾಕ್ಷಿಯಾದರು.
ದಸರಾ ಹಬ್ಬಕ್ಕೆ ಚಾಲನೆ ನೀಡಿದ ಬೆನ್ನಲ್ಲೆ, ಇತ್ತ ಮೈಸೂರು ಅರಮನೆಯಲ್ಲಿ ಯದುವೀರ ಒಡೆಯರ್ ಅವರ ಖಾಸಗಿ ದರ್ಬಾರ್ ಆರಂಭವಾಯಿತು. ಮೊದಲಿಗೆ ಕಳಸ ಪೂಜೆಯನ್ನು ನೆರವೇರಿಸಿದ ಒಡೆಯರ್ ದರ್ಬಾರ್ ಹಾಲ್ ಗೆ ಬರುತ್ತಿದ್ದಂತೆ ವಂಧಿ ಮಾಗಧರುಗಳಿಂದ ಬಹು ಪರಾಕ್ ಮೊಳಗಿತು. ರಾಜ ಗಾಂಭೀರ್ಯ ನಡಿಗೆಯಲ್ಲಿ ಯದುವೀರ್ ಒಡೆಯರ್ ಆಗಮಿಸಿದರು ಮೂರು ಬಾರಿ ಸಿಂಹಾಸನ ಪ್ರದಕ್ಷಿಣೆ ಹಾಕಿ ನಂತರ ಪೂಜಿ ಸಲ್ಲಿಸಿ ಮಂಗಳಾರತಿ ನೆರವೇರಿಸಿದರು. ಸಿಂಹಾಸನದ ಪಕ್ಕದಲ್ಲಿಯೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆ ನೆರವೇರಿಸಿದರು. ಪೂಜೆ ಸಲ್ಲಿಸಿದ ನಂತರ ಎದುವೀರ್ ಒಡೆಯರ್ ಸಿಂಹಾಸನ ಅಲಂಕರಿಸಿದರು.