ಶಿವಮೊಗ್ಗ: ಜಿಲ್ಲೆಯ ಸಾಗರದ ಆಲಳ್ಳಿ ಗ್ರಾಮದ ಹೊಸಕೆರೆಗೆ ಈಜಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. 13 ವರ್ಷದ ಮತ್ತು 11 ವರ್ಷದ ಇಬ್ಬರು ಎಳೆಯ ಬಾಲಕರು ಜಲಸಮಾಧಿಯಾಗಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
ಈಜಲು ಹೋದಾಗ ಸಂಭವಿಸಿದ ದುರಂತ
ಮೃತ ಬಾಲಕರನ್ನು ಮುಳುಕೇರಿ ಗ್ರಾಮದ ಷಣ್ಮುಖ ಎಂಬುವವರ ಪುತ್ರ ಲೇಖನ್ (13) ಹಾಗೂ ಆಲಳ್ಳಿ ಗ್ರಾಮದ ಗಣೇಶ್ ಎಂಬುವವರ ಪುತ್ರ ಪುನೀತ್ (11) ಎಂದು ಗುರುತಿಸಲಾಗಿದೆ. ಇಬ್ಬರೂ ಒಂದೇ ಕುಟುಂಬದ ಬಾಲಕರಾಗಿದ್ದಾರೆ. ಭಾನುವಾರ ಇಬ್ಬರೂ ಹೊಸಕೆರೆಗೆ ಈಜಲು ತೆರಳಿದ್ದು, ಆಳ ಅರಿಯದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಬೇಸಿಗೆ ರಜೆಗೆ ತಾತನ ಮನೆಗೆ ಬಂದಿದ್ದಾಗ ದುರ್ಘಟನೆ
ಮೃತ ಬಾಲಕರು ಬೇಸಿಗೆ ರಜೆಗಾಗಿ ತಾತನ ಮನೆಗೆ ಆಗಮಿಸಿದ್ದರು. ಇಂದು ಮಧ್ಯಾಹ್ನ ಕೆರೆಗೆ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಬೇಸಿಗೆ ರಜೆಗೂ ಮುನ್ನಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಕೆರೆ, ನದಿಗೆ ಈಜಲು ತೆರಳದಂತೆ ಎಚ್ಚರಿಸಿದ್ದರು. ಆದರೂ ಈ ದುರಂತ ನಡೆದಿದ್ದನ್ನು ಕಂಡ ವಿದ್ಯಾರ್ಥಿಯ ಶಿಕ್ಷಕಿಯೂ ಆಸ್ಪತ್ರೆಗೆ ಆಗಮಿಸಿ ಕಣ್ಣೀರಿಟ್ಟಿದ್ದು ಕಂಡು ಬಂತು. ಜೊತೆಗೆ ಬೇಸಿಗೆ ರಜೆಯಲ್ಲಿ ಯಾವುದೇ ಪೋಷಕರು ಮಕ್ಕಳನ್ನು ಕೆರೆ, ನದಿ ಬಳಿಗೆ ಈಜಲು ಬಿಡದಂತೆ ಎಚ್ಚರ ವಹಿಸಲು ಕಂಬನಿ ಮಿಡಿಯುತ್ತಲೇ ಮನವಿ ಮಾಡಿದರು.
ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ
ದುರ್ಘಟನೆಯ ಬಳಿಕ ಬಾಲಕರ ಮೃತದೇಹಗಳನ್ನು ಹೊರತೆಗೆದು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಆವರಣಕ್ಕೆ ಧಾವಿಸಿದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕೈಗೆ ಬಂದ ಪುಟ್ಟ ಮಕ್ಕಳನ್ನು ಕಳೆದುಕೊಂಡ ತಾಯಂದಿರ ರೋದನ ಮತ್ತು ಕುಟುಂಬದವರ ಕಣ್ಣೀರು ನೆರೆದಿದ್ದವರ ಕರುಳು ಕಿವುಚುವಂತಿತ್ತು. ಇಡೀ ಆಸ್ಪತ್ರೆ ಆವರಣದಲ್ಲಿ ಸೂತಕದ ಛಾಯೆ ಆವರಿಸಿತ್ತು.
ಶಾಸಕ ಗೋಪಾಲಕೃಷ್ಣ ಬೇಳೂರು ಸಂತಾಪ
ಒಂದೇ ಕುಟುಂಬದ ಇಬ್ಬರು ಮುಗ್ಧ ಬಾಲಕರು ಅಕಾಲಿಕವಾಗಿ ಸಾವನ್ನಪ್ಪಿದ ಘಟನೆಗೆ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ಆಘಾತ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..