ಸಾಗರ: ಸಿಗಂದೂರು ಚೌಡೇಶ್ವರಿ ದೇವಾಲಯದ ನವರಾತ್ರಿ ಉತ್ಸವ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀ ಗೋಸಾಯಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಗಳು ಸಾಗರ ನಗರಕ್ಕೆ ಆಗಮಿಸಿ, ಎಸ್.ಎನ್. ನಗರದಲ್ಲಿರುವ ಮುಖಂಡ ಕೆ.ಆರ್. ನಾರಾಯಣರಾವ್ ಅವರ ನಿವಾಸಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.
ನಾರಾಯಣರಾವ್ ಕುಟುಂಬಸ್ಥರು ತಮ್ಮ ನಿವಾಸದಲ್ಲಿ ಸ್ವಾಮೀಜಿಗಳಿಗೆ ಭಕ್ತಿಪೂರ್ವಕವಾಗಿ ಪಾದಪೂಜೆ ನೆರವೇರಿಸಿದರು. ಅಲ್ಲದೇ ಮರಾಠ ಸಮಾಜದ ಪ್ರಮುಖರನ್ನು ನಾರಾಯಣರಾವ್ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಲಾಯಿತು.

ಬದುಕಿನ ಯಶಸ್ಸಿಗೆ ನವರಾತ್ರಿಯ ಸಾಧನೆ ಅನಿವಾರ್ಯ ಎಂದ ಸ್ವಾಮೀಜಿ
ಆಶೀರ್ವಚನ ನೀಡಿದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಗಳು, ನವರಾತ್ರಿಯ ಒಂಬತ್ತು ದಿನಗಳು ಕೇವಲ ಹಬ್ಬವಾಗಿರದೆ ಆಧ್ಯಾತ್ಮಿಕ ಸಾಧಕರಿಗೆ ಶಕ್ತಿ ತುಂಬುವ ಪವಿತ್ರ ಗಳಿಗೆಗಳಾಗಿವೆ ಎಂದರು. ಈ ದಿನಗಳಲ್ಲಿ ಉಪವಾಸ, ಜಪ, ಸಪ್ತಶತಿ ಪಾರಾಯಣ ಹಾಗೂ ಕುಂಕುಮಾರ್ಚನೆಯಂತಹ ಆರಾಧನೆಗಳಲ್ಲಿ ತೊಡಗುವವರಿಗೆ ಜಗನ್ಮಾತೆಯ ವಿಶೇಷ ಅನುಗ್ರಹ ಲಭಿಸುತ್ತದೆ ಎಂದು ತಿಳಿಸಿದರು. ಪುರಾಣಗಳ ನಿದರ್ಶನ ನೀಡಿದರು.
ಸತ್ಯಯುಗದಲ್ಲಿ ಪ್ರಭು ಶ್ರೀರಾಮಚಂದ್ರರು ರಾವಣನ ವಧೆಗೂ ಮುನ್ನ ನವರಾತ್ರಿಯ ಅಖಂಡ ಸಾಧನೆ ಮಾಡಿದ್ದರು ಎಂದು ಸ್ಮರಿಸಿದರು. ಅದೇ ರೀತಿ ದ್ವಾಪಾರ ಯುಗದಲ್ಲಿ ಸಾಕ್ಷಾತ್ ಶ್ರೀಕೃಷ್ಣನ ಬೆಂಬಲವಿದ್ದರೂ ಕೌರವರಂತಹ ಬಲಿಷ್ಠ ಶಕ್ತಿಗಳನ್ನು ಎದುರಿಸಲು ದೈವಬಲ ಬೇಕೆಂದು ಕೃಷ್ಣನೇ ಪಾಂಡವರಿಗೆ ನವರಾತ್ರಿಯ ಆರಾಧನೆ ಮಾಡುವಂತೆ ಮಾರ್ಗದರ್ಶನ ನೀಡಿದ್ದನು ಎಂದರು. ಮಾನವರು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೂ ಕಠಿಣ ಸಾಧನೆ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದರು.

ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಶ್ರೀಗಳ ಮಾರ್ಗದರ್ಶನ
ಶಿವಮೊಗ್ಗ ಜಿಲ್ಲೆಯಲ್ಲಿ ಲಕ್ಷಕ್ಕೂ ಅಧಿಕ ಮರಾಠ ಸಮಾಜದ ಜನರಿದ್ದು, ಎಲ್ಲರೂ ಒಳಪಂಗಡಗಳನ್ನು ತೊರೆದು ಸಮಾಜವನ್ನು ಒಗ್ಗೂಡಿಸಬೇಕು ಎಂದು ಶ್ರೀಗಳು ಕರೆ ನೀಡಿದರು. ಯುವಜನತೆಯನ್ನು ಯಾವುದೇ ದುಶ್ಚಟ ಹಾಗೂ ವ್ಯಸನಗಳಿಗೆ ಬಲಿಯಾಗಲು ಬಿಡದೆ, ಅವರಿಗೆ ಉನ್ನತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರು ಎಲ್ಲ ಸಮಾಜಗಳನ್ನು ಒಟ್ಟಿಗೆ ಸೇರಿಸಿ ಸ್ವರಾಜ್ಯ ಕಟ್ಟಿದಂತೆ, ನಾವೆಲ್ಲರೂ ಶಾಂತಿಯಿಂದ ಸಮಾಜ ಮತ್ತು ದೇಶದ ಒಳಿತಿಗಾಗಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದ ಶ್ರೀಗಳು, ಸಾಗರದ ಸಮಸ್ತ ಜನತೆಗೆ ಸುಖ, ಶಾಂತಿ ಮತ್ತು ಸಮೃದ್ಧಿ ಸಿಗಲೆಂದು ಚೌಡೇಶ್ವರಿ ಅಮ್ಮನವರಲ್ಲಿ ಪ್ರಾರ್ಥಿಸಿದರು.
ಸಮಾಜಕ್ಕೆ ನಿವೇಶನ, ಅನುದಾನ ನೀಡಲು ಜಿಲ್ಲಾಧ್ಯಕ್ಷ ಸತೀಶ್ ಶಿಂಧೆ ಆಗ್ರಹ
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಮರಾಠ ಸಮಾಜದ ಅಧ್ಯಕ್ಷ ಸತೀಶ್ (ಸಚಿನ್) ಶಿವಾಜಿರಾವ್ ಶಿಂಧೆ, ಜಿಲ್ಲೆಯಲ್ಲಿ ಸಮಿತಿ ರಚನೆಯಾಗಿ ಎರಡು ವರ್ಷಗಳಾಗಿದ್ದು, ಜಿಲ್ಲೆಯಾದ್ಯಂತ ಸಮಾಜವನ್ನು ಬಲಿಷ್ಠವಾಗಿ ಸಂಘಟಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಸುಮಾರು 85 ಸಾವಿರಕ್ಕೂ ಹೆಚ್ಚು ಮರಾಠ ಸಮಾಜದ ಬಾಂಧವರಿದ್ದು, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿರಾವ್ ಅವರ ನೇತೃತ್ವದಲ್ಲಿ ಸರ್ಕಾರದ ಸೌಲಭ್ಯಗಳನ್ನು ತಳಮಟ್ಟದವರೆಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ, ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ-ಕಾಲೇಜು ಹಾಗೂ ಸಮುದಾಯ ಭವನ ನಿರ್ಮಿಸಲು ಸರ್ಕಾರವು ಪ್ರತಿ ತಾಲೂಕಿನಲ್ಲೂ ಜಾಗ ಮಂಜೂರು ಮಾಡಿ ಸೂಕ್ತ ಅನುದಾನ ನೀಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.

ಸ್ವಾಮೀಜಿಗಳ ಭೇಟಿಯಿಂದ ಹೆಮ್ಮೆ ಎಂದ ಕೆ.ಆರ್. ನಾರಾಯಣರಾವ್
ಮರಾಠ ಸಮಾಜದ ಹಿರಿಯ ಮುಖಂಡ ಕೆ.ಆರ್. ನಾರಾಯಣರಾವ್ ಮಾತನಾಡಿ, ಪರಮಪೂಜ್ಯ ಸ್ವಾಮೀಜಿಗಳು ಸಿಗಂದೂರಿಗೆ ತೆರಳಿ ನಂತರ ತಮ್ಮ ನಿವಾಸಕ್ಕೆ ಎರಡನೇ ಬಾರಿಗೆ ಭೇಟಿ ನೀಡಿ ಆಶೀರ್ವದಿಸಿರುವುದು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಅಪಾರ ಹೆಮ್ಮೆ ತಂದಿದೆ ಎಂದು ಸಂತಸ ಹಂಚಿಕೊಂಡರು.
ಈ ವೇಳೆ ಸಾಗರ ತಾಲ್ಲೂಕು ಮರಾಠ ಸಮಾಜದ ಅಧ್ಯಕ್ಷ ವಿಜಯ್ ಕುಮಾರ್ ಪಾಟೀಲ್, ಪ್ರಮುಖರಾದ ಸಂಪತ್ ಕುಮಾರ್, ನಾಗರಾಜ್, ಪ್ರದೀಪ್ (ಎಂ.ಜಿ.), ಪ್ರಶಾಂತ್ ಪಾಟೀಲ್, ರಾಮಚಂದ್ರ ಜಾದವ್, ಪ್ರಶಾಂತ್ ಕೆ.ಎನ್., ಪ್ರವೀಣ್ ಕೆ ಎನ್, ಶಿವಾಜಿ ರಾವ್ ಎಚ್.ವೈ., ಶಾರದಾ ಕೆ. ಆರ್, ನಾರಾಯಣ್, ಸುಲೋಚನಾ, ಶಶಿಕಲಾ ಸಿಂಧೆ ಮತ್ತು ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಪವಿತ್ರಾ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..