ಸಾಗರ: ತಾಲ್ಲೂಕಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಒಗ್ಗಟ್ಟಾಗಿ ಕಟ್ಟಿ, ಸಂಘಟನಾತ್ಮಕವಾಗಿ ಮುನ್ನಡೆಸುವ ನಾಯಕರಿಗೆ ಮಾತ್ರ ಬ್ಲಾಕ್ ಕಾಂಗ್ರೆಸ್ ಸಾರಥ್ಯ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೀಶ್ ಸ್ಪಷ್ಟಪಡಿಸಿದರು.
ಇಂದು ಸಾಗರದ ಗಾಂಧಿ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಆಯೋಜಿಸಲಾಗಿದ್ದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು.
‘ಸಂಘಟನಾ ಸೃಜನ್’ ಮೂಲಕ ಪಾರದರ್ಶಕ ಆಯ್ಕೆ
‘ಸಂಘಟನಾ ಸೃಜನ್’ ಅಭಿಯಾನದ ಮೊದಲ ಹಂತದಲ್ಲಿ ನನ್ನನ್ನು ಜಿಲ್ಲಾಧ್ಯಕ್ಷನಾಗಿ ಆಯ್ಕೆ ಮಾಡಲಾಗಿದೆ. ಈಗ ಎರಡನೇ ಹಂತದಲ್ಲಿ ಬ್ಲಾಕ್ ಅಧ್ಯಕ್ಷರ ನೇಮಕವನ್ನು ಅತ್ಯಂತ ಪಾರದರ್ಶಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಎಲ್ಲೋ ಕುಳಿತು ಏಕಪಕ್ಷೀಯವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು ಎಂಬ ದೂರುಗಳಿದ್ದವು. ಆದರೆ ಈಗ ಜಿಲ್ಲಾ ಸಮಿತಿಯೇ ಪ್ರತಿ ತಾಲ್ಲೂಕಿಗೂ ತೆರಳಿ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಆಲಿಸುತ್ತಿದೆ. ಪಕ್ಷಕ್ಕೆ ಸಲ್ಲಿಸಿದ ನಿಷ್ಠಾವಂತ ಸೇವೆಯನ್ನು ಪರಿಗಣಿಸಿಯೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಚುನಾವಣಾ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗುತ್ತಿದ್ದು, ಈ ಹಿಂದೆ ಅಭ್ಯರ್ಥಿಯೇ ಚುನಾವಣೆ ಎದುರಿಸಬೇಕಿತ್ತು. ಆದರೆ ಈಗ ಪಕ್ಷವೇ ಅಭ್ಯರ್ಥಿಯ ಬೆನ್ನಿಗೆ ನಿಂತು ಚುನಾವಣೆ ನಡೆಸಲಿದೆ. ಹಬ್ಬದ ನಂತರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕ ವೀಕ್ಷಕರನ್ನು ನಿಯೋಜಿಸಲಾಗುವುದು ಎಂದರು.

ಅಧ್ಯಕ್ಷ ಗಾದಿಗೆ ಐವರು ಪೈಪೋಟಿ
ಸಭೆಯಲ್ಲಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಕಲಸೆ ಚಂದ್ರಪ್ಪ, ಸೋಮಶೇಖರ ಲ್ಯಾವಿಗೆರೆ, ಭೀಮನೇರಿ ಆನಂದ್, ತಾರಾಮೂರ್ತಿ ಹಾಗೂ ಕೆ.ಎಲ್. ಭೋಜರಾಜ್ ಸೇರಿದಂತೆ ಒಟ್ಟು ಐದು ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು, ದಿನದ 24 ಗಂಟೆಯೂ ಪಕ್ಷಕ್ಕಾಗಿ ದುಡಿಯುವವರಿಗೆ ಮಣೆ ಹಾಕಲಾಗುವುದು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರವಾಸ ಮಾಡಿ ಪಕ್ಷ ಸಂಘಟಿಸುವವರಿಗೆ ಆದ್ಯತೆ ನೀಡಲಾಗುವುದು ಎಂದರು.
ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕ ಲೋಕೇಶ್ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಹಾಲಿ ಅಧ್ಯಕ್ಷ ಕಲಸೆ ಚಂದ್ರಪ್ಪ ಉಪಸ್ಥಿತರಿದ್ದರು.
ಈ ವೇಳೆ ಪ್ರಮುಖರಾದ ಬಿ.ಆರ್. ಜಯಂತ್, ಸುರೇಶ್ ಬಾಬು, ಚೇತನರಾಜ್ ಕಣ್ಣೂರು, ಸುಮಂಗಲ ರಾಮಕೃಷ್ಣ, ಜ್ಯೋತಿ ಕೋವಿ, ಚಂದ್ರಪ್ಪ, ಮಧುಮಾಲತಿ, ಗಿರೀಶ್ ಕೋವಿ, ಅನ್ವರ್, ದಿನೇಶ್ ಡಿ., ಹಮೀದ್, ತುಕಾರಾಮ ಶಿರವಾಳ, ತಸ್ರೀಫ್ ಇಬ್ರಾಹಿಂ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.