ಸಾಗರ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಆಡಳಿತ ವರ್ಗದ ನಿರ್ಲಕ್ಷ್ಯದ ವಿರುದ್ಧ ಸಮಿತಿ ಸದಸ್ಯ ನಾಗರಾಜ ಕಲ್ಮನೆ ತೀವ್ರ ಆಕ್ರೋಶ ಹೊರಹಾಕಿದರು. ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂದು ಅವರು ನೇರ ವಾಗ್ದಾಳಿ ನಡೆಸಿದರು.
ಪಡಿತರ ಮಳಿಗೆಗಳಲ್ಲಿ ಫಲಕ ಅಳವಡಿಸದ್ದಕ್ಕೆ ಕಿಡಿ
ಸಭೆಯಲ್ಲಿ ಆಹಾರ ಇಲಾಖೆಯ ಧೋರಣೆಯನ್ನು ತೀವ್ರವಾಗಿ ಪ್ರಶ್ನಿಸಿದ ನಾಗರಾಜ ಕಲ್ಮನೆ, "ರಾಜ್ಯ ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿ ಮೂರು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಸಮಿತಿ ಸದಸ್ಯರ ಹೆಸರುಗಳನ್ನು ಪ್ರದರ್ಶಿಸದಿರಲು ಕಾರಣವೇನು?" ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಹಾರ ಇಲಾಖೆ ಅಧಿಕಾರಿಗಳ ಕರ್ತವ್ಯಲೋಪವೇ ಇದಕ್ಕೆ ಕಾರಣ ಎಂದು ಆರೋಪಿಸಿದಾಗ, ಅಧಿಕಾರಿಗಳು ಉತ್ತರಿಸಲಾಗದೆ ತಬ್ಬಿಬ್ಬಾದರು.
ಪಿಡಿಒಗಳ ವಿರುದ್ಧ ಅಸಮಾಧಾನ; ಪ್ರತ್ಯೇಕ ಸಭೆಗೆ ಪಟ್ಟು
ಗ್ರಾಮೀಣ ಭಾಗಗಳಲ್ಲಿ ಭಾರತ್ ಜೋಡೋ ಸಂಘಟನೆಗಳನ್ನು ರೂಪಿಸುವ ಸರ್ಕಾರದ ನಿರ್ದೇಶನವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕಡೆಗಣಿಸುತ್ತಿದ್ದಾರೆ. ಅಧಿಕಾರಿಗಳ ಇಂತಹ ನಿಷ್ಕ್ರಿಯತೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಜನಪರ ಕಾರ್ಯಕ್ರಮಗಳು ಹಳ್ಳ ಹಿಡಿಯುತ್ತಿವೆ ಎಂದು ಹೇಳಿದರು.
ಈ ಮಾತಿಗೆ ಸಭೆಯಲ್ಲಿದ್ದ ಇತರ ಸದಸ್ಯರೂ ಧ್ವನಿಗೂಡಿಸಿ, ಎಲ್ಲಾ ಗ್ರಾಮ ಪಂಚಾಯ್ತಿ ಪಿಡಿಒಗಳ ತುರ್ತು ಸಭೆ ಕರೆಯುವಂತೆ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ಅವರಿಗೆ ಒಕ್ಕೊರಲಿನಿಂದ ಒತ್ತಾಯಿಸಿದರು.
ಭಾಗ್ಯಜ್ಯೋತಿ ಫಲಾನುಭವಿಗಳಿಗೆ ತಪ್ಪಿದ 'ಗೃಹಜ್ಯೋತಿ'
ಬಡ ಕುಟುಂಬಗಳ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ಭಾಗ್ಯಜ್ಯೋತಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿಲ್ಲ. ಆನ್‌ಲೈನ್ ಅರ್ಜಿ ಸಲ್ಲಿಕೆ ವೇಳೆ ಅರ್ಜಿಗಳು ತಿರಸ್ಕೃತಗೊಳ್ಳುತ್ತಿರುವುದರಿಂದ ಅತ್ಯಂತ ಬಡವರ್ಗದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರಕ್ಕೆ ಪತ್ರ ಬರೆದು ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಾಗರ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬಿ.ಆರ್. ಜಯಂತ್ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೌನೇಶ್ ಬಡಿಗೇರ್, ಸಮಿತಿ ಸದಸ್ಯರಾದ ಅಶೋಕ್ ಬೇಳೂರು, ಮಕ್ಬೂಲ್ ಅಹಮದ್, ಮಹಾಬಲ ಕೌತಿ, ಓಂಕಾರ ಜೈನ, ಮೈಕೆಲ್ ಜೆ. ಡಿಸೋಜಾ, ಅನ್ವರ್ ಭಾಷ, ನಂದಗೊಜನೂರ್, ಭವ್ಯ ಕೃಷ್ಣಮೂರ್ತಿ, ಶಿರಿಜಾನ್, ಮಹಾಬಲೇಶ್ವರ ಕುಗ್ವೆ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.