LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಂಬೂಸವಾರಿ ಆನೆಗಳ ಬಳಿ ಜನ ಸುಳಿಯದಿರುವುದೇ ಕ್ಷೇಮ: ಬ್ಯಾರಿಕೇಡ್ ಒಳಗೆ ಗಜಪಯಣ ಸೂಕ್ತವಲ್ಲವೇ?

ಬೆಂಗಳೂರು: ಜಂಬೂಸವಾರಿ ಆನೆಗಳ ಬಳಿ ಜನ ಸುಳಿಯದಿರುವುದೇ ಕ್ಷೇಮ: ಬ್ಯಾರಿಕೇಡ್ ಒಳಗೆ ಗಜಪಯಣ ಸೂಕ್ತವಲ್ಲವೇ? ಎನ್ನುವ ಬಗ್ಗೆ ಹಿರಿಯ ಪತ್ರಕರ್ತರಾದಂತ ಟಿ.ಎಂ.ಸತೀಶ್ ಅವರ ವಿಶೇಷ ಲೇಖನ ಮುಂದೆ ಓದಿ..

ಘಟನೆ 1- 21 ಅಕ್ಟೋಬರ್ 2026: ಇಂದು ಸಂಜೆ ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಸೋಮಣ್ಣ ಆನೆ ಜನಜಂಗುಳಿ ಮತ್ತು ಗದ್ದಲಕ್ಕೆ ಹೆದರಿ  ಅಡ್ಡಾದಿಡ್ಡಿ ಓಡಿದ ಪರಿಣಾಮ, ಬೆಳ್ಳಿಯ ಅಂಬಾರಿ ನೆಲಕ್ಕೆ ಉರುಳಿದೆ. ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಅದೃಷ್ಟವಶಾತ್ ಯಾವುದೇ  ಅನಾಹುತ ಸಂಭವಿಸಿಲ್ಲ. 

ಘಟನೆ 2- 18 ಮೇ 2026:  ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸುವಾಗ ಏಕಾಏಕಿ ಕಂಜನ್ ಸಾಕಾನೆ, ಮಾರ್ತಾಂಡ ಎಂಬ ಕುಮ್ಕಿ ಆನೆಯ ಮೇಲೆ ದಾಳಿ ಮಾಡಿತು. ಈ ಗಜ ಕಾಳಗದಲ್ಲಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜಿನ್ಶಾ ಮೃತಪಟ್ಟಿದ್ದರು. ನಂತರ ಗಾಯಗೊಂಡಿದ್ದ ಮಾರ್ತಾಂಡ ಆನೆಯೂ ಅಸುನೀಗಿತ್ತು. 

ಘಟನೆ 3- 20 ಸೆಪ್ಟೆಂಬರ್ 2024: ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿಂದ ನಾಡಿಗೆ ಬಂದು ಮೈಸೂರು ಅರಮನೆಯ ಆವರಣದಲ್ಲಿ ಬೀಡುಬಿಟ್ಟಿದ್ದ ಆನೆಗಳ ಪೈಕಿ, ಧನಂಜಯ ಮತ್ತು ಕಂಜನ್ ಎಂಬ ಎರಡು ಆನೆಗಳ ನಡುವೆ ಸಂಘರ್ಷ ಉಂಟಾಗಿ. ಕೋಪಗೊಂಡ ಧನಂಜಯ, ಕಂಜನ್ ಆನೆಯನ್ನು ಅಟ್ಟಿಸಿಕೊಂಡು ಹೋಗಿತ್ತು. ಕಂಜನ್ ಅರಮನೆಯ ಜಯಮಾರ್ತಾಂಡ ದ್ವಾರದ ಕಬ್ಬಿಣದ ತಡೆಕಂಬಿಗಳನ್ನು ಮುರಿದು ಮೈಸೂರು-ನಂಜನಗೂಡು ರಸ್ತೆಗೆ ಓಡಿ ಬಂದಿತ್ತು. ಸಾರ್ವಜನಿಕರು ಪ್ರಾಣಭೀತಿದಿಂದ ದಿಕ್ಕಾಪಾಲಾಗಿ ಓಡಿದ್ದರು. 

ಘಟನೆ 4- 04 ಅಕ್ಟೋಬರ್ 2024: ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಕರೆತರಲಾಗಿದ್ದ ಹಿರಣ್ಯ ಎಂಬ ಆನೆ 2 ಬಾರಿ ಬೆಚ್ಚಿಬಿದ್ದು ಆತಂಕ ಸೃಷ್ಟಿಸಿತ್ತು. ಹಿರಣ್ಯ ಆನೆಯು, ಆವರಣದಲ್ಲಿ ನಿಂತಿದ್ದ ಬಿಳಿ ಕುದುರೆಯನ್ನು ನೋಡಿ ತಬ್ಬಿಬ್ಬಾಗಿತ್ತು. ಮಾರನೇ ದಿನ ಕೂಡ ರಂಗನಾಥಸ್ವಾಮಿ ದೇವಸ್ಥಾನದ ಮುಂದೆ ಏಕಾ ಏಕಿ ಬೆಚ್ಚಿಬಿದ್ದು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಲು ಪ್ರಾರಂಭಿಸಿತು. ಈ ವೇಳೆ ಮಾವುತ, ಕಾವಾಡಿಗಳು ಆನೆಯನ್ನು ನಿಯಂತ್ರಿಸಿ ಯಾವುದೇ ಅನಾಹುತ ಆಗದಂತೆ ತಡೆದಿದ್ದರು.

ಘಟನೆ 5- 09 ಅಕ್ಟೋಬರ್ 2021: ಶ್ರೀರಂಗಪಟ್ಟಣ ದಸರಾ ಮೆರವಣಿಗೆ ವೇಳೆ ಪಟಾಕಿಯ ಶಬ್ದಕ್ಕೆ ಅಂಜಿದ ಆನೆ  ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಲಾರಂಭಿಸಿತ್ತು. ಮೆರವಣಿಗೆ ವೀಕ್ಷಿಸುತ್ತಿದ್ದ ಜನರು ಆತಂಕಕ್ಕೀಡಾಗಿ ದಿಕ್ಕಾಪಾಲಾಗಿ ಓಡಿದರು.  ಆನೆಯ ಮೇಲಿದ್ದ ಮಾವುತ ಮತ್ತು ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ.
ಸಾಕಾನೆಗಳು ಎಷ್ಟೇ ಸೌಮ್ಯವಾಗಿದ್ದರೂ, ಕೆಲವೊಮ್ಮೆ ಬೆಚ್ಚುತ್ತವೆ, ಬೆದರುತ್ತವೆ, ಆಕ್ರೋಶಗೊಳ್ಳುತ್ತವೆ. ಮದವೇರಿದಾಗ  ಮಾವುತರ ನಿಯಂತ್ರಣಕ್ಕೂ ಬಾರದೆ ಅತಿರೇಕದ ವರ್ತನೆ ತೋರುತ್ತವೆ. ಈಗೇಕೆ ಸಾಕಾನೆಗಳ ಸ್ವಾಭಾವದ ಬಗೆಗಿನ ಚರ್ಚೆ ಎನ್ನುತ್ತೀರಾ?

ಈಗ ಮೈಸೂರಿನಲ್ಲಿ ಆನೆಗಳದ್ದೇ ಮಾತು. ಈ ಬಾರಿ ಚಿನ್ನದ ಅಂಬಾರಿಯನ್ನು ಯಾವ ಆನೆ ಹೊರುತ್ತದೆ ಎಂಬ ವಿಷಯದಿಂದ ಹಿಡಿದು, ಈ ಬಾರಿ  ನಿಶಾನೆ ಆನೆಯಾಗಿ ಬಹುತೇಕ ಕೊನೆಯ ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿರುವ ಅಭಿಮನ್ಯುವಿನ ಸಾಹಸಗಾಥೆಯವರೆಗೆ, ಏಕಲವ್ಯ, ಶ್ರೀಕಂಠ ಆನೆಗಳ ಗಾಂಭೀರ್ಯದ ನಡಿಗೆಯಿಂದ ಹಿಡಿದು ಅಂಬಾರಿ ಹೊರಲು ಹಿಂದೇಟು ಹಾಕಿದ ಮಹೇಂದ್ರ ಆನೆಯವರೆಗೆ, ಈ ಬಾರಿಯ ದಸರಾದಲ್ಲಿ ಭೀಮ ಆನೆಯ ಅನುಪಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತಿದೆ.

ದಸರಾ ಮಹೋತ್ಸವದಲ್ಲಿ ಹತ್ತು ಹಲವು ಸಂಪ್ರದಾಯ, ವಿಧಿ, ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಸ್ತಿ ಪಂದ್ಯ, ಶಾರದಾ ಪೂಜೆ, ದುರ್ಗಾ ಪೂಜೆ, ವಾಹನ ಪೂಜೆಗಳೆಲ್ಲಾ ನಡೆದರೂ  ಹತ್ತನೆ ದಿನ ಅರಮನೆಗಳ ನಗರಿ ಮೈಸೂರಿನ ರಾಜಬೀದಿಗಳಲ್ಲಿ ನಡೆಯುವ ಜಗದ್ವಿಖ್ಯಾತ ಜಂಬೂಸವಾರಿಯೇ  ಪ್ರಧಾನ ಆಕರ್ಷಣೆ. ಜಂಬೂಸವಾರಿ ನಾಡಹಬ್ಬದ ಹೆಮ್ಮೆಯ ಪ್ರತೀಕವಾಗಿದೆ ಮತ್ತು ಮೈಸೂರು ಪರಂಪರೆಯ ಹಿರಿಮೆಯಾಗಿದೆ.

ನಾಡದೇವಿ ಚಾಮುಂಡೇಶ್ವರಿ ವಿರಾಜಮಾನಳಾದ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಸಾಲಂಕೃತ ಆನೆಗಳನ್ನು ನೋಡಲು ಜನ ಕಿಕ್ಕಿರಿದು ಸೇರುತ್ತಾರೆ. ಅರಮನೆಯಲ್ಲಂತೂ ಆನೆಗಳ ಎಡಬಲದಲ್ಲಷ್ಟೇ ಅಲ್ಲದೆ ಹಿಂದೆ, ಮುಂದೆಯೂ ಜನ ಜಮಾಯಿಸುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು, ಆನೆಗಳ ಫೋಟೋ, ವಿಡಿಯೋ ಸೆರೆ ಹಿಡಿಯಲು ಜನ ತವಕಿಸುತ್ತಾರೆ. 

ವಾಸ್ತವವಾಗಿ ಆನೆಗಳ ಸಮೀಪಕ್ಕೆ  ಸಾರ್ವಜನಿಕರು ಗುಂಪು ಗುಂಪಾಗಿ ಬರುವುದು ಎಷ್ಟು ಸರಿ? 
ಓದು, ಬರಹ ಬಲ್ಲ, ಕಾನೂನಿನ ಪೂರ್ಣ ತಿಳಿವಳಿಕೆ ಇರುವವರೇ ಎಷ್ಟೋ ಬಾರಿ ಕೋಪದಿಂದ ಅಪರಾಧ ಎಸಗುತ್ತಾರೆ. ದುರ್ವರ್ತನೆ ತೋರುತ್ತಾರೆ. ಅಂತಹುದರಲ್ಲಿ, ವನ್ಯಜೀವಿಗಳು ಹೀಗೆ ಇರಬೇಕು ಎಂದು ನಾವು ಬಯಸುವುದು ಸರಿಯಲ್ಲ. ಭೀಮಬಲದ, ಬೃಹದಾಕಾರದ ಆನೆಗಳನ್ನು ಎಷ್ಟೇ ಪಳಗಿಸಿದ್ದರೂ, ಕೆಲವೊಮ್ಮೆ ಜನರ ಕಿರುಚಾಟ ಅಧವಾ ಕ್ಯಾಮರಾದಿಂದ ಬರುವ ಫ್ಲಾಶ್ ಬೆಳಕಿನಿಂದ ಇಲ್ಲವೇ  ಡಿಜೆ ಶಬ್ದದಿಂದ ವಿಚಲಿತವಾಗಿ ಆನೆಗಳು ಸ್ವಲ್ಪ ಅಡ್ಡಾದಿಡ್ಡಿಯಾಗಿ ಓಡಿದರೂ ಅನಾಹುತ, ಕಾಲ್ತುಳಿತ ಆಗುವ ಅಪಾಯ ಇದ್ದೇ ಇರುತ್ತದೆ. ಅದೃಷ್ಟವಶಾತ್ ಸುಮಾರು 415 ವರ್ಷಗಳ ಸುದೀರ್ಘ ಇತಿಹಾಸ ಇರುವ ದಸರಾದಲ್ಲಿ ಇಷ್ಟು ವರ್ಷಗಳ ಕಾಲ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂಬುದು ಸಮಾಧಾನದ ವಿಚಾರ.

ಆದರೆ ಮುಂದೆಯೂ ಆಗುವುದಿಲ್ಲ ಎಂದು ಯಾರೂ ಖಾತ್ರಿ ನೀಡಲು ಸಾಧ್ಯವಿಲ್ಲ. ಪ್ರಾಣಿಗಳ ಸ್ವಭಾವ ಹೀಗೆ ಇರುತ್ತದೆ ಎಂದು ಹೇಳಲಾಗದು. ಮೇಲೆ ಉಲ್ಲೇಖಿಸಿದ ಘಟನೆಗಳನ್ನು ನೋಡಿದಾಗ ದಸರಾ ಮಹೋತ್ಸವದಲ್ಲಿ ಸಾಕಾನೆ ಬಳಸುವುದು ಕೂಡ ಅಪಾಯಕಾರಿ ಎಂಬುದನ್ನು ಒತ್ತಿ ಹೇಳುತ್ತದೆ. ಹೀಗಾಗಿ ಮೈಸೂರು ದಸರಾ ಪರಂಪರೆ, ಸಂಪ್ರದಾಯ, ವೈಭವಕ್ಕೂ ಚ್ಯುತಿ ಆಗದಂತೆ, ದಸರಾ ಮಹೋತ್ಸವದ ಖ್ಯಾತಿಯೂ ಮಾಸದಂತೆ, ಜನರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಜಂಬೂಸವಾರಿ ಮೆರವಣಿಗೆ ನಡೆಸುವತ್ತ ಗಮನ ಹರಿಸುವುದು ಅಗತ್ಯ.
ಜಂಬೂಸವಾರಿಯ ವೇಳೆ, ಅರಮನೆ ಆವರಣದಲ್ಲಾಗಲೀ, ಆನೆ ಸಾಗುವ ರಾಜಬೀದಿಗಳಲ್ಲಾಗಲೀ ಆನೆಗಳ ಬಳಿ ಮಾವುತರು, ಕಾವಾಡಿಗಳ ಹೊರತಾಗಿ ಬೇರೆ ಯಾರೂ ಸುಳಿಯದಂತೆ, ಸೊಂಡಿಲು, ದಂತ ಹಿಡಿದುಕೊಂಡು ಫೋಟೋ ತೆಗೆಸಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವುದು ಅನಿವಾರ್ಯ ಎನಿಸುತ್ತದೆ.

ಲೇಖನಕ್ಕೆ ಪೂರಕವಾಗಿ ಬಳಸಿರುವ AI ಚಿತ್ರದಲ್ಲಿರುವಂತೆ ಚಕ್ರಗಳಿರುವ ವಿಶೇಷ ಬ್ಯಾರಿಕೇಡ್ ನ ಒಳಗೆ ಆನೆಗಳು ಸರತಿಯ ಸಾಲಿನಲ್ಲಿ ಹೆಜ್ಜೆ ಹಾಕುವಂತೆ ಕ್ರಮವಹಿಸುವುದು, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಎನಿಸುತ್ತದೆ. ಇದು ಆನೆಗಳನ್ನು ಬಳಕೆ ಮಾಡುವ ಎಲ್ಲ ಉತ್ಸವಗಳಿಗೂ ಅನ್ವಯವಾಗುವುದು ಸೂಕ್ತ.

ಇಂತಹ ಗಾಲಿ ಇರುವ ವಿಶೇಷ ಬ್ಯಾರಿಕೇಡ್ ಮಾಡಿಸಿ, ಆನೆಗಳಿಗೆ ತಾಲೀಮು ಮಾಡಿಸಿ. ಆನೆಗಳು ಸಾಗುವ ಮಾರ್ಗದ ಎರಡೂ ಕಡೆ ಕನಿಷ್ಠ 20 ಅಡಿ ಅಂತರದಲ್ಲಿ ಬ್ಯಾರಿಕೇಡ್ ಹಾಕಿ, ಜನ ಬ್ಯಾರಿಕೇಡ್ ಹೊರಗೆ ನಿಲ್ಲುವಂತೆ ಮಾಡುವ ಮೂಲಕ ಜನರು ಆನೆಗಳ ಹತ್ತಿರ ಸುಳಿಯದಂತೆ ಎಚ್ಚರ ವಹಿಸುವುದು ಸೂಕ್ತ. ಅಲ್ಲವೇ?

ಲೇಖಕರು: ಟಿ.ಎಂ.ಸತೀಶ್, ಹಿರಿಯ ಪತ್ರಕರ್ತ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ನೇರ ಪ್ರಸಾರಕ್ಕೆ ಸರ್ಕಾರ ಆಕ್ಷೇಪ: ಖಾಸಗಿ ಟಿವಿ ವಾಹಿನಿಗಳಿಗೆ ಮಾರ್ಗಸೂಚಿದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಏರಿಕೆ: ಗ್ರ್ಯಾಪ್ ಹಂತ-1 ಜಾರಿಕ್ಷೇತ್ರ ಮರುವಿಂಗಡಣೆ ಮೂಲಕ ಕಾಂಗ್ರೆಸ್‌ಗೆ ಬಿಜೆಪಿಯ ತಂತ್ರ? ಎಸ್‌ಐಆರ್‌ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿಗೆ ಸವಾಲುಕೆಲಸಕ್ಕೆ ಹೋಗುವುದಾಗಿ ನಂಬಿಸಿದ್ದ ಪತಿ ದಿಢೀರ್ ಎಂಟ್ರಿ ; ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿಗೆ ಹಿಗ್ಗಾಮುಗ್ಗಾ ಗೂಸಾ | Watchಪೂಜಾ ಪೆಂಡಾಲ್‌ನಲ್ಲಿ ಅರ್ಧರಾತ್ರಿ ಹೈಡ್ರಾಮಾ ; ನೃತ್ಯಗಾರ್ತಿಗೆ ಇನ್ಸ್‌ ಪೆಕ್ಟರ್‌ ಕಪಾಳಮೋಕ್ಷ | Videoಟೈಗರ್ ಶ್ರಾಫ್ ಗುಂಡಿನ ದಾಳಿ ಕೇಸ್: ಬರೋಡಾದಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್ಜಂಬೂಸವಾರಿ ಆನೆಗಳ ಬಳಿ ಜನ ಸುಳಿಯದಿರುವುದೇ ಕ್ಷೇಮ: ಬ್ಯಾರಿಕೇಡ್ ಒಳಗೆ ಗಜಪಯಣ ಸೂಕ್ತವಲ್ಲವೇ?ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಕುಟುಂಬಗಳಿಗೆ 2 ಕೋಟಿ ರೂ. ಪರಿಹಾರ ಘೋಷಿಸಿದ ಸಿಎಂ ರೇವಂತ್ ರೆಡ್ಡಿಸಾಗರದಲ್ಲಿ ತಹಶೀಲ್ದಾರ್ ದೂರವಿಟ್ಟು ಬನ್ನಿ ಸಂಪ್ರದಾಯ ಆಚರಣೆ: ಡಾ.ಪ್ರತಿಭಾ.ಆರ್ ಕಣ್ಣೀರು?ಷೇರುಪೇಟೆಯಲ್ಲಿ ದಿಢೀರ್ ಯು-ಟರ್ನ್! ಕೇವಲ 245 ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹8.78 ಲಕ್ಷ ಕೋಟಿ ನಷ್ಟ!