ಬೆಂಗಳೂರು: ನ್ಯಾಯಾಲಯದ ಕಲಾಪಗಳ ಸಂಗ್ರಹಿಸಲಾದ (ಆರ್ಕೈವ್) ಆಡಿಯೋ-ವಿಡಿಯೋ ದಾಖಲೆಗಳ ಪ್ರತಿಗಳನ್ನು ಪಡೆಯಲು 'ಕರ್ನಾಟಕ ನ್ಯಾಯಾಲಯಗಳ ಕಲಾಪಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು-2021'ರ ಪ್ರಕಾರ ಪೀಠವು ನಿರ್ದಿಷ್ಟವಾಗಿ ಆದೇಶಿಸದ ಹೊರತು, ಅದರ ನಕಲು ಪ್ರತಿಗಳನ್ನು ಪಡೆಯುವ ಯಾವುದೇ ಕಾನೂನಾತ್ಮಕ ಹಕ್ಕು ಅರ್ಜಿದಾರರಿಗೆ ಇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಥಣಿಸಂದ್ರದ ಸತ್ಯನಾರಾಯಣಸ್ವಾಮಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ.
ಪೀಠದ ನಿರ್ದಿಷ್ಟ ಆದೇಶವಿಲ್ಲದೆ 'ಅಧಿಕೃತ ದಾಖಲೆ'ಯಾಗಲ್ಲ:
ನಿಯಮಾವಳಿಗಳ ನಿಯಮ 8 ಮತ್ತು ನಿಯಮ 10ರ ಉಲ್ಲೇಖ ನೀಡಿದ ಹೈಕೋರ್ಟ್, ನ್ಯಾಯಪೀಠವು ಸ್ವತಃ ನಿರ್ದಿಷ್ಟ ಆದೇಶ ನೀಡದ ಹೊರತು ಕಲಾಪಗಳ ರೆಕಾರ್ಡಿಂಗ್ ಪ್ರತಿಯನ್ನು ಕೋರಲು ಯಾರಿಗೂ ಹಕ್ಕಿರುವುದಿಲ್ಲ ಎಂದು ವಿವರಿಸಿದೆ. ಅಲ್ಲದೆ ನಿಯಮ 10(1)(2)ರ ಪ್ರಕಾರ, ಪೀಠದ ಸ್ಪಷ್ಟ ನಿರ್ದೇಶನವಿಲ್ಲದೆ ಸಂಗ್ರಹಿಸಿದ ಕಲಾಪಗಳ ಡೇಟಾ (ಆರ್ಕೈವಲ್ ಡೇಟಾ) ನ್ಯಾಯಾಲಯದ ಅಧಿಕೃತ ದಾಖಲೆಯಾಗುವುದಿಲ್ಲ. ಹೀಗಾಗಿ, ವಿಡಿಯೋ ಪ್ರತಿಗಳನ್ನು ನೀಡಲೇಬೇಕು ಎಂದು ಕೋರಿ ಯಾವುದೇ ಅರ್ಜಿದಾರರು ಕಾನೂನಾತ್ಮಕ ಹಕ್ಕು ಸಾಧಿಸಲು ಬರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಕಲಾಪಗಳ ಮರು-ಪ್ರಸಾರಕ್ಕೆ ಕಟ್ಟುನಿಟ್ಟಿನ ನಿಷೇಧ:
ನ್ಯಾಯಾಲಯದ ಕಲಾಪಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಹೈಕೋರ್ಟ್, ನಿಯಮ 10(2)(1)ರ ಪ್ರಕಾರ ಹೈಕೋರ್ಟ್‌ನಿಂದ ಅಧಿಕಾರ ಪಡೆದ ವ್ಯಕ್ತಿ ಅಥವಾ ಸಂಸ್ಥೆಯನ್ನು ಹೊರತುಪಡಿಸಿ ಬೇರೆ ಯಾರೂ ಇವುಗಳನ್ನು ಮರು-ಪ್ರಸಾರ ಮಾಡುವಂತಿಲ್ಲ ಎಂದು ಹೇಳಿದೆ. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳು ಸೇರಿದಂತೆ ಯಾರೇ ಆದರೂ ನೇರ ಪ್ರಸಾರ ಅಥವಾ ರೆಕಾರ್ಡಿಂಗ್‌ಗಳನ್ನು ಮರು-ಪ್ರಸಾರ ಮಾಡಿದರೆ, ಕೃತಿಸ್ವಾಮ್ಯ (ಕೃತಿಸ್ವಾಮ್ಯ ಕಾಯ್ದೆ) ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಮತ್ತು ಅರ್ಜಿದಾರರ ವಾದ:
ಅರ್ಜಿದಾರ ಸತ್ಯನಾರಾಯಣ ಸ್ವಾಮಿ ಅವರು ತಮ್ಮ ಮೇಲ್ಮನವಿ ಅರ್ಜಿಯೊಂದರ ಕಲಾಪದ ಆಡಿಯೋ-ವಿಡಿಯೋ ರೆಕಾರ್ಡಿಂಗ್ ಪಡೆಯಲು ಹೈಕೋರ್ಟ್‌ನ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ನಿಗದಿತ ಫಾರಂ-3 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಹಾಯಕ ರಿಜಿಸ್ಟ್ರಾರ್ ಅವರು ನಿಯಮಗಳನ್ನು ಉಲ್ಲೇಖಿಸಿ ಈ ಕೋರಿಕೆಯನ್ನು ತಿರಸ್ಕರಿಸಿದ್ದರು. ಈ ಹಿಂಬರಹವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡದ ರೆಕಾರ್ಡಿಂಗ್‌ಗಳನ್ನು ಪಡೆಯಲು ನಿಯಮ 8(3)ರ ಅಡಿಯಲ್ಲಿ ಅವಕಾಶವಿದೆ ಎಂದು ವಾದಿಸಿ, ಅರ್ಜಿ ನಿರಾಕರಣೆಯು ಸಂವಿಧಾನದ 14ನೇ ವಿಧಿಯಡಿ ಲಭ್ಯವಿರುವ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಪೀಠಕ್ಕೆ ತಿಳಿಸಿದ್ದರು.