ಶಿವಮೊಗ್ಗ: ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಸರಿಯಾದ ಅರಿವಿಲ್ಲದ, ಮುಗ್ಧ ಅನಕ್ಷರಸ್ಥ ಗ್ರಾಮೀಣ ಮಹಿಳೆಯರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಖಾತೆಯಿಂದ ಹಣ ಲಪಟಾಯಿಸುತ್ತಿರುವ ವ್ಯವಸ್ಥಿತ ವಂಚನೆಯ ಜಾಲವೊಂದು ಸಾಗರ ತಾಲ್ಲೂಕಿನ ಆವಿನಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ (KGB) ಶಾಖೆಯಲ್ಲಿ ನಡೆಯುತ್ತಿರುವುದು ಗ್ರಾಹಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಹಕರು ಕೇಳಿದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಖಾತೆಯಿಂದ ವಿತ್‌ಡ್ರಾ ಮಾಡಿಕೊಂಡು, ಅವರಿಗೆ ಕೇವಲ ಕೇಳಿದಷ್ಟೇ ಹಣ ನೀಡಿ ಉಳಿದ ಹಣವನ್ನು ಜೇಬಿಗಿಳಿಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಘಟನೆಯ ಹಿನ್ನೆಲೆ: 20 ಸಾವಿರ ಕೇಳಿದರೆ ಬಿಡಿಸಿದ್ದು 21 ಸಾವಿರ!
ಕೋಳೂರಿನ ಅಂಬಾರಗೋಡ್ಲು ನಿವಾಸಿ ಕಮಲಾಕ್ಷಿ ಕೋಂ ಶೇಖರ್ ಎಂಬ ಮಹಿಳೆ ದಿನಾಂಕ 19-10-2026 ರಂದು ತಮ್ಮ ಉಳಿತಾಯ ಖಾತೆಯಿಂದ 20,000 ರೂಪಾಯಿ ಹಣವನ್ನು ಬಿಡಿಸಲು ಆವಿನಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗೆ ತೆರಳಿದ್ದರು. ಕಮಲಾಕ್ಷಿ ಅವರು 20,000 ರೂ. ಬಿಡಿಸಿಕೊಡುವಂತೆ ಬ್ಯಾಂಕ್‌ನಲ್ಲಿ ಕೋರಿದ್ದಾರೆ. ಅವರು ಅನಕ್ಷರಸ್ಥೆ ಎಂಬುದನ್ನು ಗಮನಿಸಿದ ಸಿಬ್ಬಂದಿ, ಹೆಬ್ಬೆಟ್ಟಿನ ಗುರುತು (ಥಂಬ್ ಇಂಪ್ರೆಷನ್) ಪಡೆದುಕೊಂಡು ಖಾತೆಯಿಂದ ಬರೋಬ್ಬರಿ 21,000 ರೂ. ಬಿಡಿಸಿದ್ದಾರೆ. ಆದರೆ, ಕಮಲಾಕ್ಷಿ ಅವರ ಕೈಗೆ ಕೇವಲ 20,000 ರೂ. ಮಾತ್ರ ನೀಡಿ ಕಳುಹಿಸಿದ್ದಾರೆ.
ಮನೆಗೆ ಮರಳಿದ ಕಮಲಾಕ್ಷಿ ಅವರು ಬ್ಯಾಂಕಿನಿಂದ 20,000 ರೂ. ಬಿಡಿಸಿಕೊಂಡು ಬಂದಿರುವ ವಿಷಯವನ್ನು ಮಕ್ಕಳ ಬಳಿ ತಿಳಿಸಿದ್ದಾರೆ. ಈ ವೇಳೆ ಅವರ ಕೀಪ್ಯಾಡ್ ಮೊಬೈಲ್ ಪರಿಶೀಲಿಸಿದಾಗ, ಖಾತೆಯಿಂದ 21,000 ರೂ. ಕಡಿತಗೊಂಡಿರುವ ಸಂದೇಶ (SMS) ಬಂದಿರುವುದು ಬೆಳಕಿಗೆ ಬಂದಿದೆ. ಇದರಿಂದ ಮಹಿಳೆಗೆ 1,000 ರೂ. ವಂಚನೆ ಮಾಡಿರುವುದು ಸ್ಪಷ್ಟವಾಗಿ ಧೃಡಪಟ್ಟಿದೆ.
ನ್ಯಾಯ ಕೇಳಲು ಹೋದ ಕುಟುಂಬಸ್ಥರ ಮೇಲೆ ಅಧಿಕಾರಿಗಳ ದರ್ಪ
ಅಕ್ಟೋಬರ್ 20 ಮತ್ತು 21 ರಂದು ಬ್ಯಾಂಕ್ ರಜೆ ಇದ್ದ ಕಾರಣ, ಅಕ್ಟೋಬರ್ 22 ರಂದು ಮಹಿಳೆಯ ಕುಟುಂಬಸ್ಥರು ಬ್ಯಾಂಕಿಗೆ ತೆರಳಿ ಈ ಬಗ್ಗೆ ನ್ಯಾಯ ಕೇಳಿದ್ದಾರೆ. ಆದರೆ, ಬ್ಯಾಂಕಿನ ಕ್ಯಾಷಿಯರ್ ಹಾಗೂ ಮ್ಯಾನೇಜರ್ ಗ್ರಾಹಕರ ಮಾತಿಗೆ ಕಿವಿಗೊಡದೆ, "ಸಿಸಿಟಿವಿ ಪ್ರಕಾರ 21,000 ರೂ. ಹಣವನ್ನೇ ಡ್ರಾ ಮಾಡಲಾಗಿದೆ ಮತ್ತು ಅಷ್ಟೇ ಹಣವನ್ನು ನೀಡಲಾಗಿದೆ" ಎಂದು ತಾಂತ್ರಿಕ ವಿವರಗಳನ್ನು ಮುಂದಿಟ್ಟು ಗ್ರಾಹಕರ ಮೇಲೆಯೇ ಧ್ವನಿ ಎತ್ತಿ ಜೋರು ಮಾಡಿದ್ದಾರೆ ಎಂದು ಕಮಲಾಕ್ಷಿ ಕುಟುಂಬಸ್ಥರು ದೂರಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳ ಲೋಪ: ಕ್ಯಾಷಿಯರ್ ಕೈಚಳಕಕ್ಕೆ ರಕ್ಷಣೆ?
ಆವಿನಹಳ್ಳಿಯ ಈ ಶಾಖೆಯಲ್ಲಿ ಕೇವಲ ಮೂರು ಸಿಸಿಟಿವಿ ಕ್ಯಾಮೆರಾಗಳಿವೆ. ನಗದು ಕೌಂಟರ್ ಬಳಿ ಇರುವ ಕ್ಯಾಮೆರಾ ಕೇವಲ ನೋಟು ಎಣಿಕೆ ಯಂತ್ರವನ್ನು (Cash Counting Machine) ಮಾತ್ರ ತೋರಿಸುತ್ತದೆ. ಕ್ಯಾಷಿಯರ್ ಗ್ರಾಹಕರಿಗೆ ಹಣ ಕೊಡುವ ಸಂದರ್ಭದಲ್ಲಿ ಅವರ ಬೆನ್ನು ಕ್ಯಾಮೆರಾಕ್ಕೆ ಮರೆಯಾಗುತ್ತದೆ. ಹೀಗಾಗಿ ಗ್ರಾಹಕರಿಗೆ ಎಣಿಕೆ ಯಂತ್ರದ ದೃಶ್ಯಗಳನ್ನು ತೋರಿಸಿ, ಬೆನ್ನು ಮರೆಮಾಡಿ, ಹೆಚ್ಚುವರಿ ಹಣವನ್ನು ಕೆಳಗೆ ಹಾಕಿ ವಂಚಿಸಲಾಗುತ್ತಿದೆ ಎಂದು ಗ್ರಾಮಸ್ಥರು, ಗ್ರಾಹಕ ಲೋಕೇಶ್ ಹುಣಾಲುಮಡಿಕೆ ಗಂಭೀರವಾಗಿ ಆರೋಪಿಸಿದ್ದಾರೆ.
ಕ್ಯಾಷಿಯರ್ ಸಿಸಿಟಿವಿಯನ್ನೇ ಯಾಮಾರಿಸಿ, ಗ್ರಾಹಕರಿಗೆ ನೀಡಬೇಕಾದ ಹಣದಲ್ಲಿ ಹೆಚ್ಚುವರಿ ಮೊತ್ತವನ್ನು ನೈಪುಣ್ಯದಿಂದ ಕೆಳಗೆ ನೆಲಕ್ಕೆ ಬೀಳಿಸಿ, ಕಾಲಿನಿಂದ ಮುಂದೆ ಸರಿಸಿಟ್ಟುಕೊಂಡು, ಸಂಜೆ ಬ್ಯಾಂಕ್ ಕೆಲಸ ಮುಗಿಸಿ ತೆರಳುವಾಗ ಆ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಂಚನೆ ತಡೆಗೆ ಬ್ಯಾಂಕ್ ಉನ್ನತ ಮಟ್ಟದ ತನಿಖೆಗೆ ಆಗ್ರಹ
ಬ್ಯಾಂಕ್ ಸಿಬ್ಬಂದಿಯೇ ಗ್ರಾಹಕರ ಹಣಕ್ಕೆ ಕನ್ನ ಹಾಕುವ ಕೈಚಳಕ ತೋರುತ್ತಿರುವಾಗ ಮತ್ತು ಸಿಸಿಟಿವಿ ದೃಶ್ಯಾವಳಿಗಳು ಸಮರ್ಪಕವಾಗಿ ಸೆರೆಯಾಗದಿದ್ದಾಗ, ಸಾಮಾನ್ಯ ಗ್ರಾಮೀಣ ಜನರಿಗೆ ನ್ಯಾಯ ಸಿಗುವುದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಆವಿನಹಳ್ಳಿಯ ಶಾಖೆಯಲ್ಲಿ ಪ್ರತಿ ತಿಂಗಳೂ ಒಂದಲ್ಲ ಒಂದು ಅನಕ್ಷರಸ್ಥ ಗ್ರಾಮೀಣ ಮಹಿಳೆಗೆ ಇಂತಹದೇ ರೀತಿಯ ವಂಚನೆ ಎಸಗಲಾಗುತ್ತಿದೆ ಎಂಬುದು ಗ್ರಾಹಕರ ಆರೋಪಗಳಾಗಿವೆ.
ಬಡ ಹಾಗೂ ಮುಗ್ಧ ಗ್ರಾಹಕರ ಬೆವರಿನ ಹಣವನ್ನು ಲಪಟಾಯಿಸುತ್ತಿರುವ ಈ ವ್ಯವಸ್ಥಿತ ವಂಚನೆಗೆ ತಕ್ಷಣವೇ ಕಡಿವಾಣ ಬೀಳಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀಕಾಂತ್ ಎಂ. ಬಂಡಿವಾಡ ಹಾಗೂ ಜನರಲ್ ಮ್ಯಾನೇಜರ್ (ಜಿಎಂ) ಸತ್ಯಪ್ರಸಾದ್ ಎನ್. ಅವರು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಬ್ಯಾಂಕ್ ಗ್ರಾಹಕರು ಒತ್ತಾಯಿಸಿದ್ದಾರೆ.
ಇನ್ನೂ ಬ್ಯಾಂಕಿನ ಉನ್ನತ ಮಟ್ಟದ ತಾಂತ್ರಿಕ ತನಿಖಾ ತಂಡವನ್ನು ನಿಯೋಜಿಸಿ, ಕೂಲಂಕಷ ಆಂತರಿಕ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಹಾಗೂ ಶಿಸ್ತುಕ್ರಮ ಜರುಗಿಸಬೇಕು. ಜೊತೆಗೆ ಗ್ರಾಹಕರ ವಹಿವಾಟು ಪಾರದರ್ಶಕವಾಗಿ ದಾಖಲಾಗುವಂತೆ ನಗದು ಕೌಂಟರ್‌ನಲ್ಲಿ ಪೂರ್ಣ ಪ್ರಮಾಣದ ಸುಧಾರಿತ ಸಿಸಿಟಿವಿ ಕಣ್ಗಾವಲು ಅಳವಡಿಸಿ, ಗ್ರಾಮೀಣ ಜನರ ಹಣಕ್ಕೆ ಭದ್ರತೆ ಒದಗಿಸಬೇಕು ಎಂದು ಸಾರ್ವಜನಿಕರು ಮತ್ತು ಸಂತ್ರಸ್ತ ಗ್ರಾಹಕರು ಆಗ್ರಹಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..